ಕೆ.ಆರ್.ಪೇಟೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರಾಗಿ ಹೊರಹೊಮ್ಮಿರುವ ಜೆ.ಧೃತಿ ಅವರನ್ನು ಮಾಜಿ ಶಿಕ್ಷಣ ಸಚಿವ ಅಡಗೂರು ಎಚ್.ವಿಶ್ವನಾಥ್ ಹಾಗೂ ಮತ್ತೊಬ್ಬ ಮಾಜಿ ಸಚಿವ ಡಾ. ನಾರಾಯಣಗೌಡ ಸನ್ಮಾನಿಸಿ ಶುಭ ಕೋರಿದರು.
2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಅತ್ಯುನ್ನತ ಸ್ಥಾನ ಪಡೆದು ಟಾಪರಾಗಿ ಇತಿಹಾಸ ನಿರ್ಮಿಸಿರುವ ಕೆ.ಆರ್.ಪೇಟೆ ಪಟ್ಟಣದ ಜ್ಞಾನೇಶ್, ರಶ್ಮಿ ಶಿಕ್ಷಕ ದಂಪತಿಗಳ ಪುತ್ರಿ ಜೆ.ಧೃತಿ ಅವರನ್ನು ಪಟ್ಟಣದ ಮಾಜಿ ಸಚಿವ ಡಾ. ನಾರಾಯಣಗೌಡ ಅವರ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಈ ವೇಳೆ ಮಾತನಾಡಿದ ಎಚ್.ವಿಶ್ವನಾಥ್ ಅವರು, ಅಕ್ಷರದ ಜ್ಞಾನದ ಬೆಳಕಿನ ಶಕ್ತಿಯು ನಮ್ಮಿಂದ ಯಾರೂ ಕದಿಯಲಾಗದ ಆಸ್ತಿಯಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಸಾಧನೆಯನ್ನು ಕಂಡು ಸಂತೋಷವಾಗಿದೆ. ಧೃತಿ ಅವರು ಪಟ್ಟಣದಲ್ಲಿರುವ ಹಿರಿಯ ರಾಜಕೀಯ ಮುತ್ಸದ್ಧಿಗಳು ಹಾಗೂ ಮಾಜಿ ಶಾಸಕರಾದ ಎಸ್.ಎಂ.ಲಿಂಗಪ್ಪನವರ ಗ್ರಾಮಭಾರತಿ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡಿ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ತೀವ್ರ ಸ್ಪರ್ಧೆ ನೀಡಿ 625ಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಇತಿಹಾಸ ನಿರ್ಮಿಸಿದ್ದಾರೆ ಎಂದರು.
ಇನ್ನು ಮುಂದೆ ಉನ್ನತ ವ್ಯಾಸಂಗ ಮಾಡಿ ಐಐಟಿಯಲ್ಲಿ ಇಂಜಿನಿಯರ್ ಆಗುವ ಹಂಬಲ ಹೊಂದಿರುವ ಅವರ ಕನಸು ನನಸಾಗಲಿ, ಅವರ ಆಕಾಂಕ್ಷೆಗಳು ಈಡೇರಲಿ ಎಂದು ವಿಶ್ವನಾಥ್ ಶುಭ ಹಾರೈಸಿದರು.
ಮಧು ಬಂಗಾರಪ್ಪ ಒಬ್ಬ ನಾಲಾಯಕ್ ಮಂತ್ರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾಗಿರುವ ಮಧು ಬಂಗಾರಪ್ಪ ಒಬ್ಬ ನಾಲಾಯಕ್ ಸಚಿವರಾಗಿದ್ದಾರೆ. ಪ್ರಾಥಮಿಕ ಶಿಕ್ಷಣ ಸೇರಿದಂತೆ ಶಿಕ್ಷಣ ಇಲಾಖೆಯ ಗಾಳಿ ಗಂಧ ಏನೊಂದು ಕೂಡಾ ಮಧುಗೆ ಗೊತ್ತಿಲ್ಲ, ಬಂಗಾರಪ್ಪ ಅವರ ಪುತ್ರ ಎಂದು ಸಿದ್ದರಾಮಯ್ಯ ಪ್ರಮುಖವಾದ ಶಿಕ್ಷಣ ಇಲಾಖೆಯ ಜವಾಬ್ದಾರಿ ನೀಡಿದ್ದಾರೆ ಅಷ್ಟೇ ಎಂದರು.
ಜನರ ಅಭಿಪ್ರಾಯ ಸಂಗ್ರಹಿಸಿ ಜನಾಭಿಪ್ರಾಯಕ್ಕೆ ಪೂರಕವಾಗಿ ಕೆಲಸ ಮಾಡದ ಮಧು ಬಂಗಾರಪ್ಪ ಒಬ್ಬ ನಾಲಾಯಕ್ ಮಂತ್ರಿಯಾಗಿದ್ದಾರೆ ಎಂದು ವ್ಯಂಗ್ಯವಾಡಿದ ವಿಶ್ವನಾಥ್ ಅವರು, ಇಂತಹ ನಾಲಾಯಕ್ ಸಚಿವರಿಂದ ಇಲಾಖೆಯಲ್ಲಿ ಯಾವ ಪ್ರಮುಖ ಬದಲಾವಣೆ ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು.

ಮಾಜಿ ಸಚಿವ ಡಾ. ನಾರಾಯಣಗೌಡ ಮಾತನಾಡಿ ಧೃತಿ ಅವರ ಸಾಧನೆಯು ಯುವಜನರು ಹಾಗೂ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ. ರಾಜ್ಯಕ್ಕೆ ಟಾಪರಾಗಿ ಹೊರಹೊಮ್ಮಿರುವ ಧೃತಿ ನಮ್ಮ ತಾಲೂಕಿನ ಕೀರ್ತಿಯನ್ನು ರಾಜ್ಯದಾದ್ಯಂತ ಬೆಳಗಿದ್ದಾರೆ ಎಂದರು.
ಡಾ. ನಾರಾಯಣಗೌಡರ ಆಪ್ತಸಹಾಯಕ ದಯಾನಂದ, ಪುರಸಭೆ ಸದಸ್ಯ ಕೆ.ಎಸ್. ಪ್ರಮೋದ್, ಮಾಜಿ ಸದಸ್ಯರಾದ ಹರಪ್ರಸಾದ್, ಕೆ.ಆರ್. ನೀಲಕಂಠ, ಮುಖಂಡರಾದ ಕೈಗೋನಹಳ್ಳಿ ಕುಮಾರ್, ಸುನಿಲ್, ಅನಿಲ್, ಧೃತಿಯ ಪೋಷಕರಾದ ಮೋಕ್ಷಶ್ರೀ, ತಂದೆ ಜ್ಞಾನೇಶ್, ತಾಯಿ ರಶ್ಮಿ ಮತ್ತಿತರರು ಉಪಸ್ಥಿತರಿದ್ದರು.
Related
