ಬಳ್ಳಾರಿ: ಬೆಂಗಳೂರಿನಿಂದ ದೇವದುರ್ಗಕ್ಕೆ ಹೋಗುತ್ತಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮತ್ತು ಲಾರಿ ನಡುವೆ ಬಳ್ಳಾರಿ ಸಮೀಪ ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬಸ್ ಚಾಲಕ, ನಿರ್ವಾಹಕ ಸೇರಿದಂತೆ 20ಕ್ಕೂ ಹೆಚ್ಚುಮಂದಿ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆಕೆಆರ್‌ಟಿಸಿ ದೇವದುರ್ಗ ಘಟಕದ ಚಾಲಕ ಈರಣ್ಣ ಮತ್ತು ಚಾಲಕ ಕಂ ನಿರ್ವಾಹಕ ಸಿದ್ದಪ್ಪ ಹಾಗೂ ಲಾರಿ ಚಾಲಕ ಸೇರಿದಂತೆ 20ಕ್ಕೂ ಹೆಚ್ಚು ಮಂದಿಗೆ ತೀವ್ರಗಾಯಗಳಾಗಿದ್ದು, ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಾಲಕ ಈರಣ್ಣ ಅವರಿಗೆ ಮುಖ ಸೇರಿದಂತೆ ದೇಹದ ಹಲವು ಭಾಗಗಳಿಗೆ ತೀವ್ರ ಪೆಟ್ಟು ಬಿದ್ದಿದ್ದು ಗಂಭೀರ ಸ್ಥಿತಿಯಲ್ಲಿದ್ದಾರೆ.
ಇನ್ನು ಚಾಲಕ ಕಂ ನಿರ್ವಾಹಕ ಸಿದ್ದಪ್ಪ ಅವರ ಎರಡು ಕಾಲುಗಳಿಗೂ ತೀವ್ರ ಪೆಟ್ಟಾಗಿದ್ದು ಸೊಂಟದವರೆಗೂ ಬ್ಯಾಂಡೇಜ್ ಮಾಡಲಾಗಿದೆ. ಕೈಗಳಿಗೂ ಪೆಟ್ಟಾಗಿದ್ದು ಇವರ ಸ್ಥಿತಿ ಗಂಭೀರವಾಗಿದೆ. ಇವರಲ್ಲದೆ ಲಾರಿ ಚಾಲಕ ಮತ್ತು ಬಸ್‌ನಲ್ಲಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರಿಗೂ ತೀವ್ರ ಪೆಟ್ಟಾಗಿದೆ.
ಘಟನೆ ವಿವರ: ದೇವದುರ್ಗದಿಂದ ಮೇ 20ರ ರಾತ್ರಿ ಬೆಂಗಳೂರಿಗೆ ಹೊರಟ ಬಸ್ ಮತ್ತೆ ಮೇ 21ರ ರಾತ್ರಿ ಬೆಂಗಳೂರಿನಿಂದ ದೇವದುರ್ಗಕ್ಕೆ ಹೊರಟಿತ್ತು. ಈ ವೇಳೆ ನಿನ್ನೆ ತಡರಾತ್ರಿ ಬೆಂಗಳೂರಿನಿಂದ ದೇವದುರ್ಗಕ್ಕೆ ಹೋಗುತ್ತಿದ್ದ ವೇಳೆ ಎದುರಿನಿಂದ ಬಂದ ಲಾರಿ ಮತ್ತು ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಈ ವೇಳೆ ಬಸ್ ಮತ್ತು ಲಾರಿ ಸಂಪೂರ್ಣ ಜಖಂಗೊಂಡಿವೆ.
ಅಪಘಾತ ರಭಸಕ್ಕೆ ಬಸ್‌ನಲ್ಲಿ ಇದ್ದ 50ಕ್ಕೂ ಹೆಚ್ಚು ಮಂದಿಗೂ ಗಾಯಗಳಾಗಿದ್ದು, ಅವರಲ್ಲಿ 20ಕ್ಕೂ ಹೆಚ್ಚು ಮಂದಿಗೆ ತೀವ್ರ ಪೆಟ್ಟಾಗಿದೆ ಎಂದು ತಿಳಿದು ಬಂದಿದೆ.
ಅಪಘಾತಕ್ಕೆ ಕಾರಣ ಏನು: ಈ ಅಪಘಾತದಕ್ಕೆ ಕಾರಣ ಏನು ಎಂದು ನೋಡುವುದಾದರೆ, ನಿದ್ರೆ ಮತ್ತು ವಿಶ್ರಾಂತಿ ಇಲ್ಲದೆ ಚಾಲಕ ಮತ್ತು ನಿರ್ವಾಹಕರು ಒಂದೇ ಸಮನೆ 550 ಕಿಮೀ ಕರ್ತವ್ಯದಲ್ಲಿ ನಿರತರಾಗಿರಬೇಕು. ಅಂದರೆ ಬೆಂಗಳೂರು-ದೇವದುರ್ಗ ನಡುವಿನ ಅಂತರ ಒಂದು ಸೈಡ್‌ನಿಂದ 550 ಕಿ.ಮೀ. ಇದೆ ಅದು ಎರಡೂ ಸೈಡ್‌ನಿಂದ ಒಟ್ಟು 1,100ಕಿ.ಮೀ. ಅಂತರವಿದೆ.
ಈ ನಡುವಿನ ಅಂತರಕ್ಕೆ ಇಬ್ಬರು ಚಾಲಕರನ್ನು ಕೊಡಬೇಕು. ಆದರೆ ಕೊಟ್ಟಿರುವುದು ಒಬ್ಬ ಚಾಲಕನನ್ನು ಮಾತ್ರ, ಇನ್ನು ಚಾಲಕ ಕಂ ನಿರ್ವಾಹಕರಿಗೂ ಬಸ್ ಚಾಲನೆ ಮಾಡುವಂತೆ ಒತ್ತಡ ಹಾಕಲಾಗುತ್ತಿದೆ. ಇದರಿಂದ ಒತ್ತಡದಲ್ಲೇ ಕೆಲಸ ಮಾಡುತ್ತಿರುವ ನೌಕರರು ವಿಶ್ರಾಂತಿ ರಹಿತವಾಗಿ ಕರ್ತವ್ಯದಲ್ಲಿ ಸುಮಾರು 10ಗಂಟೆಗೂ ಹೆಚ್ಚು ಕಾಲ ನಿರತರಾಗಿರುವುದರಿಂದ ಈ ರೀತಿಯ ಅವಘಡಗಳು ಸಂಭವಿಸುತ್ತಿವೆ. ಇದಕ್ಕೆ ಘಟಕ ವ್ಯವಸ್ಥಾಪಕರೇ ನೇರ ಕಾರಣ ಎಂದು ನೌಕರರು ಆರೋಪಿಸಿದ್ದಾರೆ.
ಇದೆಕ್ಕೆಲ್ಲ ದೇವದುರ್ಗ ಘಟಕ ವ್ಯವಸ್ಥಾಪಕ ಸದಾಶಿವಶೀಲವಂತ ಅವರೇ ನೇರಕಾರಣ ಎಂದು ನೌಕರರು ಆರೋಪ ಮಾಡುತ್ತಿದ್ದು, ಇಬ್ಬರು ಚಾಲಕರನ್ನು ಹಾಕುವ ಜಾಗದಲ್ಲಿ ಒಬ್ಬರನ್ನೇ ಕಳುಹಿಸುತ್ತಿದ್ದಾರೆ. ಅಲ್ಲದೆ ಚಾಲಕ ಕಂ ನಿರ್ವಾಹಕರ ಮೇಲೆ ಅವರ ನಿರ್ವಾಹಕ ಕರ್ತವ್ಯದ ಜತೆಗೆ ಚಾಲನೆ ಮಾಡಬೇಕು ಎಂದು ಹೆಚ್ಚುವರಿ ಹೊರೆಯನ್ನು ತಾಕೀತು ಮಾಡುವ ಮೂಲಕ ಹೇರುತ್ತಿದ್ದಾರೆ. ಇದರಿಂದ ನಿರ್ವಾಹಕರಿಗೆ ತಮ್ಮ ಕರ್ತವ್ಯದ ಜತೆಗೆ ಹೆಚ್ಚಿನ ಕಾರ್ಯಭಾರ ಬೀಳುತ್ತಿದ್ದು ಇಂತಹ ಘಟನೆಗಳಿಗೆ ಕಾರಣವಾಗುತ್ತಿದೆ ಎಂದು ಹೇಳುತ್ತಿದ್ದಾರೆ ನೌಕರರು.
ಇನ್ನು ರಾಯಚೂರು ಘಟಕದಲ್ಲಿ 550 ಕಿ.ಮೀ.ಗೆ ಇಬ್ಬರು ಚಾಲಕರನ್ನು ಕೊಡುತ್ತಿದ್ದಾರೆ. ಆದರೆ ನಮ್ಮ ಘಟಕದಲ್ಲಿ ಮಾತ್ರ ಡಿಎಂ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಇವರಿಗೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಸಾಥ್ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ನಿವೃತ್ತರ ಸ್ಥಾನಕ್ಕೆ ನಡೆಯದ ನೇಮಕ: ಇನ್ನು ನಿಗಮದಲ್ಲಿ ನಿವೃತ್ತರಾಗುವವರ ಸಂಖ್ಯೆ ಹೆಚ್ಚಿದ್ದು ಅವರು ನಿವೃತ್ತಗೊಂಡ ಬಳಿಕ ಆ ಸ್ಥಾನಕ್ಕೆ ನೌಕರರನ್ನು ನೇಮಕ ಮಾಡಿಕೊಳ್ಳದ ಕಾರಣ, ಇರುವ ನೌಕರರಿಗೇ ಹೆಚ್ಚಿನ ಕಾರ್ಯಭಾರ ಹೊರಿಸುತ್ತಿದ್ದು, ಒತ್ತಡದಲ್ಲೇ ನೌಕರರು ಕೆಲಸ ಮಾಡುವಂತಾಗಿದೆ.
ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಮುಖ್ಯಮಂತ್ರಿಗಳು ನಿವೃತ್ತಿಗೊಂಡವರ ಸ್ಥಾನಕ್ಕೆ ಬೇರೆಯವರ ನೇಮಕಮಾಡಿಕೊಳ್ಳುವ ಮೂಲಕ ಸಾರಿಗೆ ಸಂಸ್ಥೆಗಳಲ್ಲಿ ಈಗಿರುವ ನೌಕರರ ಒತ್ತಡವನ್ನು ಕಡಿಮೆ ಮಾಡಬೇಕು ಎಂದು ನೌಕರರು ಮನವಿ ಮಾಡಿದ್ದಾರೆ.
ಅಪಘಾತಗಳು ನಡೆಯುವುದಕ್ಕೆ ಮತ್ತು ಚಾಲನಾ ಸಿಬ್ಬಂದಿ ಹಾಗೂ ಪ್ರಯಾಣಿಕರ ಜೀವದ ಜತೆ ದೇವದುರ್ಗ ಘಟಕ ವ್ಯವಸ್ಥಾಪಕರು ಆಟವಾಡುತ್ತಿದ್ದಾರೆ. ಈ ರೀತಿಯ ಅವಘಡಗಳಿಗೆ ನೇರವಾಗಿ ಡಿಪೋ ಮ್ಯಾನೇಜರ್ ಕಾರಣ. ಯಾಕೆಂದರೆ ಎರಡು ತಿಂಗಳ ಹಿಂದೆ ನಾವು ಪರಿ ಪರಿಯಾಗಿ ಬೇಡಿಕೊಂಡರು ರಾತ್ರಿ ಪಾಳಿಯಲ್ಲಿ ಇಬ್ಬರು ಚಾಲಕರು, ಒಬ್ಬ ನಿರ್ವಾಹಕರಿದ್ದಂತೆ ಮುಂದುವರಿಸಿ ಎಂದು ಅದನ್ನು ಅವರು ಒಪ್ಪಲಿಲ್ಲ. ಈ ಡಿಪೋ ಮ್ಯಾನೇಜರ್ ಹಾಗೂ ಡಿಸಿ ಅವರು ಸೇರಿ ಒಬ್ಬ ಚಾಲಕ ಒಬ್ಬ ಚಾಲಕ ಕಂ ನಿರ್ವಾಹಕರನ್ನು ನೇಮಿಸಿರುತ್ತಾರೆ. ಕೇಳಿದರೆ ನಮ್ಮಲ್ಲಿ ಸಿಬ್ಬಂದಿಗಳ ಸಮಸ್ಯೆ ಅದಕ್ಕೆ ಹೀಗೆ ಮಾಡಿದ್ದೇವೆ ಎಂದು ಹೇಳುತ್ತಾರೆ. ಈ ತರಹ ಅವಘಡ ಆಗೋದಕ್ಕೆ ಕಾರಣ ನೇರವಾಗಿ ಈ ಅಧಿಕಾರಿಗಳೇ.
l ಹೆಸರೇಳಲಿಚ್ಛಿಸದ ನೌಕರ