KKRTC: ಎಲ್ಲ ಸಿಬ್ಬಂದಿಗಳು ಸಮವಸ್ತ್ರ ಧರಿಸುವುದು ಕಡ್ಡಾಯ – ವಿಜಯಪುರ ಡಿಸಿ ಸ್ಪಷ್ಟನೆ
ವಿಜಯಪುರ: ಸಂಚಾರ ಮೇಲ್ವಿಚಾರಕ ಸಿಬ್ಬಂದಿಗಳು ಕಡ್ಡಾಯವಾಗಿ ಸನಮವಸ್ತ್ರ ಧರಿಸಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಜರುಗಿಸಿರುವುದಾಗಿ ಮುಖ್ಯ ಸಂಚಾರ ವ್ಯವಸ್ಥಾಪಕರಿಗೆ ತಿಳಿಸಿದ್ದಾರೆ.
ಸಂಚಾರ ಮೇಲ್ವಿಚಾರಕ ಸಿಬ್ಬಂದಿಗಳು ಸನಮವಸ್ತ್ರ ಧರಿಸದೆ ಕರ್ತವ್ಯಕ್ಕೆ ಹಾಜರಾಗುತ್ತಿರುವ ಬಗ್ಗೆ ಮುಸ್ತಾಕ ಹಡಗಲಿ ಎಂಬುವರು ಇ ಮೇಲ್ ಮೂಲಕ ದೂರು ನೀಡಿದ ಬಳಿಕ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ. ಅಂದರೆ ಅಧಿಕಾರಿಗಳಿಗೆ ತಮ್ಮ ಕರ್ತವ್ಯ ಮಾಡುವುದಕ್ಕೆ ಬೇರೊಬ್ಬರು ದೂರು ನೀಡಬೇಕಾ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ.
ಸದ್ಯ ಸಾರ್ವಜನಿಕರು ದೂರು ನೀಡದ ಮೇಲಾದರೂ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಪಾಲಿಸುತ್ತಾರೆಯೇ ಎಂಬುದರ ಬಗ್ಗೆ ಕಾದು ನೋಡೋಣ. ಅದಕ್ಕೂ ಮೊದಲು ವಿಜಯಪುರ ವಿಭಾಗದಲ್ಲಿ ವಿಭಾಗೀಯ ತನಿಖಾದಳದ ಸಿಬ್ಬಂದಿಗಳು ತನಿಖಾ ಕಾರ್ಯ ನಿರ್ವಹಿಸುವಾಗ ಸಮವಸ್ತ್ರ ಧರಿಸದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬ ಬಗ್ಗೆ ದೂರು ಬಂದಿರುವುದಕ್ಕೆ ತೆಗೆದುಕೊಂಡಿರುವ ಕ್ರಮದ ಬಗ್ಗೆ ತಿಳಿಯೋಣ.
ಇತ್ತೀಚಿಗೆ ನಕಲಿ ಇನ್ಸ್‌ಪೆಕ್ಟರಗಳ ಹಾವಳಿ ಹೆಚ್ಚಾಗಿದ್ದು, ಸಂಸ್ಥೆಯ ಇನ್ಸ್‌ಫೆಕ್ಟರ್‌ಗಳು ಸಮವಸ್ತ್ರ ಧರಿಸದೇ ಇರುವುದರಿಂದ, ಯಾರು ಅಸಲಿ ನಕಲಿ ಎಂಬುದರ ಬಗ್ಗೆ ಗುರುತಿಸಲು ಸ್ವತಃ ನೌಕರರಿಗೆ ಕಷ್ಟವಾಗುತ್ತಿದೆ ಎಂಬ ಬಗ್ಗೆ ದೂರು ಬಂದಿದೆ.
ಅಲ್ಲದೆ ಒಮ್ಮೆ ವಿಭಾಗೀಯ ಕಚೇರಿಗೆ ಭೇಟಿ ನೀಡಿದಾಗಲೂ ವಿಭಾಗೀಯ ಕಚೇರಿಯಲ್ಲೂ ಕರ್ತವ್ಯ ನಿರ್ವಹಿಸುತ್ತಿರುವ 4-5 ಮಹಿಳಾ ಇನ್ಸ್‌ಪೆಕ್ಟರ್‌ಗಳು ಸಹ ಸಮವಸ್ತ್ರ ಧರಿಸಿರಲಿಲ್ಲ. ಇದಕ್ಕೆ ಕಾರಣವೇನು, ಅವರಿಗೆ ಸಮವಸ್ತ್ರ ಧರಿಸಲು ವಿನಾಯಿತಿ ಇದೆಯೇ ಎಂಬುವುದು ಸೇರಿ ಮುಸ್ತಾಕ ಹಡಗಲಿ ಅವರು ಇ-ಮೇಲ್ ಮೂಲಕ ದೂರು ಸಲ್ಲಿಸಿ, ಈ ವಿಷಯದ ಮೇಲೆ ಕ್ರಮ ಜರುಗಿಸುವಂತೆ ನಿರ್ದೇಶಿಸಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಸ್ಪಷ್ಟಿಕರಣ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ವಿಜಯಪುರ ವಿಭಾಗದಲ್ಲಿ ಎಲ್ಲ ಘಟಕ, ಕಚೇರಿ, ವಿಭಾಗೀಯ ತನಿಖಾದಳದ ಸಿಬ್ಬಂದಿಗಳಿಗೆ ಕಡ್ಡಾಯ ಸಮವಸ್ತ್ರ ಧರಿಸುವಂತೆ ಸೂಚನೆ ನೀಡಲಾಗಿದೆ. ಹೀಗಾಗಿ ಎಲ್ಲರೂ ಕಡ್ಡಾಯವಾಗಿ ಕರ್ತವ್ಯದ ವೇಳೆ ಸಮವಸ್ತ್ರ ಧರಿಸುತ್ತಿದ್ದಾರೆ. ಅನಿವಾರ್ಯ ಸಮಯದಲ್ಲಿ, ಹಬ್ಬದ ದಿನಗಳಲ್ಲಿ, ಅಥವಾ ಮಹಿಳೆಯರ ತೊಂದರೆ ಸಮಯದಲ್ಲಿ ಮೇಲಧಿಕಾರಿಗಳ ಅನುಮತಿಯೊಂದಿಗೆ ಒಂದೆರಡು ದಿನದ ಮಟ್ಟಿಗೆ ಹಾಕಿಕೊಳ್ಳುವುದಿಲ್ಲ ಎಂಬುದರ ಬಗ್ಗೆಯೂ ಡಿಸಿ ತಿಳಿಸಿದ್ದಾರೆ.
ವಿಭಾಗೀಯ ತನಿಖಾದಳದ ಸಿಬ್ಬಂದಿಗಳಿಗೂ ಸಹ ಕಡ್ಡಾಯವಾಗಿ ಸಮವಸ್ತ್ರ ಧರಿಸಲು ಕ್ರಮ ಜರುಗಿಸಲಾಗಿದೆ. ಅಲ್ಲದೆ ಸಮವಸ್ತ್ರ ಧರಿಸದೇ ಕರ್ತವ್ಯ ನಿರ್ವಹಿಸುವ ಇನ್ಸ್‌ಪೆಕ್ಟರ್‌ಗಳ ವಿರುದ್ಧ ಅವಶ್ಯಕ ಕ್ರಮ ಕೂಡಾ ಕೈಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಮುಂದಿನ ದಿನಗಳಲ್ಲಿ ಎಲ್ಲ ಇನ್ಸ್‌ಪೆಕ್ಟರ್, ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಸಮವಸ್ತ್ರ ಧರಿಸಲು ಅವಶ್ಯಕ ಕ್ರಮ ಜರುಗಿಸಿ, ಈ ರೀತಿಯ ದೂರುಗಳು ಬರದಂತೆ ನೋಡಿಕೊಳ್ಳಲಾಗುವುದು ಎಂಬ ವಿಷಯವನ್ನು ಮುಖ್ಯ ಸಂಚಾರ ವ್ಯವಸ್ಥಾಪಕರಿಗೆ ತಿಳಿಸಿದ್ದಾರೆ.