ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿವಿಧ ವಿಭಾಗಗಳಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಗಳಾಗಿ ಮತ್ತು ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವವರನ್ನು ವರ್ಗಾವಣೆ ಮಾಡಿ ನಿಗಮದ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.
ಈ ಸಂಬಂಧ ಮೇ 23ರಂದು ಆದೇಶ ಹೊರಡಿಸಲಾಗಿದ್ದು, ಸಂಸ್ಥೆಯ ಹಿತದೃಷ್ಟಿಯಿಂದ ಹಾಗೂ ಆಡಳತಾತ್ಮಕ ಕಾರಣಗಳ ಮೇರೆಗೆ ಈ ಕೂಡಲೇ ಜಾರಿಗೆ ಬರುವಂತೆ ಬೀದರ ವಿಭಾಗ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣ ಗೌಡಗೇರಿ ಅವರನ್ನು ಸರ್ಕಾರದ ಅನುದಾನದಲ್ಲಿ ಸ್ಥಾಪಿತವಾದ ಪ್ರತ್ಯೇಕ ಸೊಸೈಟಿಯ ನಿಯಂತ್ರಣದಲ್ಲಿರುವ ಕಲಬುರಗಿಯ ಭಾರಿ ವಾಹನ ಚಾಲಕರ ತರಬೇತಿ ಕೇಂದ್ರದ ಪ್ರಾಂಶುಪಾಲರಾಗಿ ನಿಯೋಜಿಸಲಾಗಿದೆ.
ಅದರಂತೆ ಹೊಸಪೇಟೆ ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಡಿ.ಕೊಟ್ರಪ್ಪ ಅವರನ್ನು ಕಲಬುರಗಿಯ ಕೇಂದ್ರ ಕಚೇರಿಯ ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿಯಾಗಿ ನೇಮಿಸಿ ವರ್ಗಾವಣೆ ಮಾಡಲಾಗಿದೆ.
ಇನ್ನು ರಾಯಚೂರು ವಿಭಾಗ ವಿಭಾಗೀಯ ನಿಯಂತ್ರಣಾಧಿಕಾರಿ ಜೆ.ಮೊಹ್ಮದ್ ಫೈಜ್ ಅವರನ್ನು ಹೊಸಪೇಟೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ನಿಯೋಜಿಸಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಕಲಬುರಗಿಯ ಕೇಂದ್ರ ಕಚೇರಿಯಲ್ಲಿ ಉಪ ಮುಖ್ಯ ಸಂಚಾರ ವ್ಯವಸ್ಥಾಪಕ (ವಾಣಿಜ್ಯ)ರಾಗಿದ್ದ ಎಂ.ಎಸ್.ಚಂದ್ರಶೇಖರ್ ಅವರನ್ನು ರಾಯಚೂರು ವಿಭಾಗ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ನೇಮಿಸಿ ವರ್ಗಾವಣೆ ಮಾಡಲಾಗಿದೆ.
ಕಲಬುರಗಿಯ ಕೇಂದ್ರ ಕಚೇರಿಯಲ್ಲಿ ಉಪ ಮುಖ್ಯ ಸಂಚಾರ ವ್ಯವಸ್ಥಾಪಕ (ಕಾರ್ಯಚಾರಣೆ)ರಾಗಿದ್ದ ಚಂದ್ರಕಾಂತ್ ಫುಲೇಕರ ಅವರನ್ನು ಬೀದರ್ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ನಿಯೋಜಿಸಿ ವರ್ಗಾವಣೆ ಮಾಡಿದ್ದು, ಕೂಡಲೇ ಪ್ರಸ್ತುತ ಕಾರ್ಯಕ್ಷೇತ್ರದಿಂದ ಬಿಡುಗಡೆಗೊಂಡು ವರ್ಗಾವಣೆಗೊಂಡಿರುವ ಕಾರ್ಯಕ್ಷೇತ್ರದಲ್ಲಿ ಕಾರ್ಯಭಾರವನ್ನು ವಹಿಸಿಕೊಳ್ಳಬೇಕು ಎಂದು ಮುಖ್ಯ ಸಂಚಾರ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.