ವಿಜಯಪುರ: ಕೆಕೆಆರ್ಟಿಸಿ ಕಾರ್ಮಿಕ ವಿರೋಧಿ ಮತ್ತು ಭ್ರಷ್ಟಾಚಾರ ಅಧಿಕಾರಿ ನಾರಾಯಣಪ್ಪ ಕುರಬರ ಅವರಿಗೆ ವಿಜಯಪುರ ಕೆಕೆಆರ್ಟಿಸಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಹುದ್ದೆ ನೀಡಬಾರದು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ವಿಜಯಪುರ ವಿಭಾಗದ ಪದಾಧಿಕಾರಿಗಳು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರಿಗೆ ಇದೇ ಮೇ 22ರಂದು ಮನವಿ ಸಲ್ಲಿಸಿರುವ ಕೂಟದ ಪದಾಧಿಕಾರಿಗಳು ತಮ್ಮ ಮನವಿ ಪತ್ರದಲ್ಲಿ ವಿವರಿಸಿದ್ದು, ನಾರಾಯಣಪ್ಪ ಕುರಬರ ಅವರು 2020 ರಿಂದ 21ರವರೆಗೆ ಕೆಕೆಆರ್ಟಿಸಿ ವಿಜಯಪುರ ವಿಭಾಗದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು ಈ ವೇಳೆ ಹಲವಾರು ಭ್ರಷ್ಟಾಚಾರ ಮಾಡಿದ್ದಾರೆ.
ಈ 2020-21ನೇ ಅವಧಿಯಲ್ಲಿ ಮಾಡಿರುವ ಭ್ರಷ್ಟಾಚಾರದ ಬಗ್ಗೆ ನಾವು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ನಿಕಟಪೂರ್ವ ಸಿಎಂ ಬಸವರಾಜ ಬೊಮ್ಮಾಯಿ ಅವರು ಸೇರಿದಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ, ಸಾರಿಗೆ ಸಚಿವರು, ಎಸಿಬಿ, ಲೋಕಾಯುಕ್ತ ಮತ್ತು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಬೆಂಗಳೂರು ಹಾಗೂ ಕಲಬುರಗಿ ಅವರ ಗಮನಕ್ಕೂ ತಂದಿದ್ದೇವೆ.
ಆ ವೇಳೆ ಸರ್ಕಾರದ ಪತ್ರದಂತೆ 3 ಉನ್ನತ ಮಟ್ಟದ ಅಧಿಕಾರಿಗಳ ಒಂದು ತಂಡವನ್ನು ರಚಿಸಿ ತುರ್ತಾಗಿ ವರದಿ ಸಲ್ಲಿಸಲು ತಿಳಿಸಲಾಗಿತ್ತು. ಆದರೆ, 2 ವರ್ಷಗಳು ಗತಿಸಿದರೂ ಸಹ ಇಲ್ಲಿಯವರೆಗೆ ತನಿಖಾಧಿಕಾರಿಗಳು ತಮ್ಮ ವರದಿ ಸಲ್ಲಿಸದೇ ಇರುವುದು ಸಂಶಯಕ್ಕೆ ಎಡೆಮಾಡಿ ಕೊಟ್ಟಿದೆ.
ಇದೇ ದೂರು ಒಬ್ಬ ಕಾರ್ಮಿಕನ ಮೇಲೆ ಇದ್ದಿದ್ದ ಅವರ ವಿರುದ್ಧ ತನಿಖೆ ಮಾಡಿ ಈಗಾಗಲೆ ಸೇವೆಯಿಂದ ವಜಾ ಮಾಡುತ್ತಿದ್ದರು. ಆದರೆ ಈ ದೂರು ಒಬ್ಬ ಅಧಿಕಾರಿಯ ಮೇಲೆ ಇರುವುದರಿಂದ ಎಲ್ಲ ಅಧಿಕಾರಿಗಳು ಸೇರಿ ಅವರನ್ನು ಬಚಾವ್ ಮಾಡಲು ಹಂಬಲಿಸುತ್ತಿದ್ದಾರೆ ಎಂಬಂತೆ ಕಂಡು ಬರುತ್ತಿದೆ.
ನಾರಾಯಣಪ್ಪ ಕುರಬರ ಮತ್ತೆ ವಿಜಯಪುರ ವಿಭಾಗಕ್ಕೆ ಡಿಸಿಯಾಗಿ ಬರುವ ಉದ್ದೇಶ ಹೊಂದಿದ್ದಾರೆ. ಇವರು ಈ ವಿಭಾಗಕ್ಕೆ ಬಂದರೆ ತಮ್ಮ ವಿರುದ್ಧ ದೂರು ಸಲ್ಲಿಸಿ ಭ್ರಷ್ಟಾಚಾರವನ್ನು ಬಯಲಿಗೆಳೆದ ನೌಕರರಿಗೆ ಕಿರುಳ ನೀಡಿ ಅವರನ್ನು ಯಾವುದೋ ಒಂದು ಪ್ರಕರಣದಲ್ಲಿ ಸಿಲುಕಿಸಿ ಸೇವೆಯಿಂದ ವಜಾ ಮಾಡಿಸುವುದು ಹಾಗೂ ತಮ್ಮ ವಿರುದ್ಧ ದಾಖಲಾಗಿರುವ ಸಾಕ್ಷಿ ನಾಶಪಡಿಸುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ವಿಜಯಪುರ ವಿಭಾಗದಲ್ಲಿ ಸಾಕಷ್ಟು ಅಂದರೆ ಕೋಟಿಗಟ್ಟಲೆ ಭ್ರಷ್ಟಾಚಾರ ಜತೆಗೆ ಸ್ವಜನಪಕ್ಷಪಾತ ಮಾಡಿರುವ, ಅಲ್ಲದೆ ಕಾರ್ಮಿಕರಿಗೆ ಕಿರುಕುಳ, ಮಹಿಳಾ ನೌಕರರಿಗೆ ಲೈಂಗಿಕ ಕಿರುಕುಳ ನೀಡಿರುವ ಇವರನ್ನು ಈ ವಿಭಾಗಕ್ಕೆ ನಿಯೋಜನೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಇನ್ನು ಇವರು ಎಸಗಿರುವ ಭ್ರಷ್ಟಾಚಾರದ ತನಿಖೆ ವೇಳೆ ಎಲ್ಲ ದೂರುದಾರರು ಸಹ ಇವರ ವಿರುದ್ಧ ಸಾಕ್ಷಿ ಪುರಾವೆ ಸಹಿತ ಲಿಖಿತ ರೂಪದಲ್ಲಿ ಹೇಳಿಕೆ ನೀಡಿದ್ದಾರೆ. ಈ ಎಲ್ಲದರ ನಡುವೆಯೂ ಈಗ ಶತಾಯ ತಗಾಯ ಪ್ರಯತ್ನ ಮಾಡಿ ವಿಜಯಪುರ ವಿಭಾಗಕ್ಕೆ ಮತ್ತೆ ವಿಭಾಗೀಯ ನಿಯಂತ್ರನಾಧಿಕಾರಿಯಾಗಿ ಬಂದೇ ಬರುತ್ತೇನೆ ಎಂದು ಹೇಳುತ್ತಿದ್ದಾರೆ. ಯಾರಿಗಾದರು ತಾಕತ್ತು ದಮ್ಮು ಇದ್ದರೆ ತಡೆದು ನೋಡಿ ಎಂದು ಸವಾಲು ಕೂಡ ಹಾಕುತ್ತಿದ್ದಾರೆ ಎಂದು ಕೂಟದ ಪದಾಧಿಕಾರಿಗಳು ಆರೋಪಿಸಿದ್ದಾರೆ.
ಭಾರತೀಯ ಜನತಾ ಪಕ್ಷದ ಸರ್ಕಾರದ ವಿರುದ್ಧ ತಾವುಗಳು ಶೇ.40ರಷ್ಟು ಲಂಚ ಕಮೀಷನ್ ಪಡೆದಿರುವ ಬಗ್ಗೆ ಸಾರ್ವಜನಿಕರ ಗಮನಕ್ಕೆ ತಂದು, ಕರ್ನಾಟಕದಲ್ಲಿ ಅಧಿಕಾರಿದ ಚುಕ್ಕಾಣಿ ಹಿಡಿದಿದ್ದೀರಿ. ಭ್ರಷ್ಟಾಚಾರ ವಿರೋದಿಯಾದ ನೀವು ಯಾವುದೇ ಕಾರಣಕ್ಕೂ ಮತ್ತೆ ವಿಜಯಪುರ ವಿಭಾಗಕ್ಕೆ ಈ ಭ್ರಷ್ಟ ಅಧಿಕಾರಿಯನ್ನು ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ನಿಯೋಜನೆ ಮಾಡಬೇಡಿ ಎಂದು ತಮ್ಮಲ್ಲಿ ಬೇಡಿಕೊಳ್ಳುತ್ತೇವೆ ಎಂದು ವಿಜಯಪುರ ವಿಭಾಗದ ಕೂಟದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.