KKRTC: ರಜೆದಿನ ಖಾಸಗಿ ಕಾರ್ಯಕ್ರಮಕ್ಕೆ ಹೋಗಲು ಸಂಸ್ಥೆಯ ವಾಹನ ಬಳಸಿಕೊಂಡ ವಿಜಯಪುರ ಸಾರಿಗೆ ಡಿಸಿ
ಇಷ್ಟಾದರೂ ಕಣ್ಣು, ಕಿವಿ, ಬಾಯಿ ಮುಚ್ಚಿ ಕುಳಿತ ಆಡಳಿತ ಮಂಡಳಿ
ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ (DC) ದೇವಾನಂದ್ ಬಿರಾದಾರ ಅವರು ಮತ್ತೆ ಖಾಸಗಿ ಕಾರ್ಯಕ್ರಮಕ್ಕೆ ಇಲಾಖಾ ವಾಹನ ಬಳಸಿಕೊಂಡು ಸುತ್ತೋಲೆ ಸಂಖ್ಯೆ 782/2018-19ನ್ನು ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇದೇ ಏ.21 ರಂದು ಸಂಸ್ಥೆಯ ಚಾಲಕ ಕಂ ನಿರ್ವಾಹಕ ಶ್ರೀರಾಮ್ ಮಾನೆ ಎಂಬುವರ ಮಗಳ ವಿವಾಹ ಕಾರ್ಯಕ್ರಮಕ್ಕೆ ಅಂದರೆ ಖಾಸಗಿ ಕಾರ್ಯಕ್ರಮ ನಡೆಯುತ್ತಿದ್ದ ಆಗರಖೇಡ ಗ್ರಾಮಕ್ಕೆ ಇಲಾಖಾ ವಾಹನವನ್ನು ದೇವಾನಂದ್ ಬಿರಾದಾರ ತೆಗೆದುಕೊಂಡು ಹೋಗಿದ್ದಾರೆ.
ಅಂದರೆ ಇವರು ಇಲಾಖಾ ವಾಹನವನ್ನು ಸ್ವಂತಕ್ಕೆ ಬಳಸಿಕೊಳ್ಳುವುದನ್ನೇ ಹವ್ಯಾಸ ಮಾಡಿಕೊಂಡಿದ್ದಾರೆ. ಈ ಮೂಲಕ ಪದೇಪದೆ ನಿಗಮದ ಸುತ್ತೋಲೆಗಳನ್ನು ಉಲ್ಲಂಘನೆ ಮಾಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಅದಕ್ಕೆ ನಿದರ್ಶನ ಎಂಬಂತೆ ಈ ಹಿಂದೆಯೂ ಸಹ ಇವರ ಪತ್ನಿಯನ್ನು ಇಲಾಖಾ ವಾಹನವನ್ನು (ಸಂಖ್ಯೆ KA-32F- 2238) ಗುಡಿ ಗುಂಡಾರಗಳನ್ನು ಸುತ್ತಲು ಕೊಟ್ಟಿದ್ದರು.
ಈ ಸುತ್ತೋಲೆ ಸಂಖ್ಯೆ 782/2018-19 ರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ನಿರ್ದೇಶಕರು/ ಇಲಾಖಾ ಮುಖ್ಯಸ್ತರು/ ದರ್ಜೆ-1ಹಿರಿಯ ಅಧಿಕಾರಿಗಳು ಸಂಸ್ಥೆಯ ಇಲಾಖಾ ವಾಹನಗಳಲ್ಲಿ ಖಾಸಗಿ ಉದ್ದೇಶಕ್ಕಾಗಿ ನಿಗದಿತ ದರ ಪಾವತಿಸಿ ಬಳಸಲು ಅವಕಾಶ ಕಲ್ಪಿಸಲಾಗಿದೆ.
ಆದರೆ ದೇವಾನಂದ್ ಬಿರಾದಾರ ಅವರು ದರ್ಜೆ-1 ಕಿರಿಯ ಅಧಿಕಾರಿ ಆಗಿದ್ದರಿಂದ ಇವರಿಗೆ ಇಲಾಖಾ ವಾಹನವನ್ನು ಖಾಸಗಿಯಾಗಿ ಬಳಸಿಕೊಳ್ಳಲು ಅವಕಾಶ ಇಲ್ಲ. ಅಷ್ಟಾಗಿಯೂ ಇವರು ಸುತ್ತೋಲೆಗಳನ್ನು ಉಲ್ಲಂಘಿಸುವ ಹವ್ಯಾಸಿಗಳಾಗಿದ್ದರಿಂದ ಪದೇಪದೆ ಇಲಾಖಾ ವಾಹನವನ್ನು ಖಾಸಗಿ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ.
ಅದರಂತೆ ಇದೇ ಏ.21ರಂದು ವಾರದ ರಜೆಯ ದಿನ ಸಂಸ್ಥೆಯ ಚಾಲಕ ಕಂ ನಿರ್ವಾಹಕ ಶ್ರೀರಾಮ್ ಮಾನೆ ಎಂಬುವರ ಮಗಳ ಮದುವೆ ಕಾರ್ಯಕ್ರಮಕ್ಕೆ ಆಗರಖೇಡ ಗ್ರಾಮಕ್ಕೆ ಹೋಗಲು ಇಲಾಖಾ ವಾಹನವನ್ನು ಬಳಸಿಕೊಂಡಿದ್ದಾರೆ. ಈ ಹಿಂದೆಯೂ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ಇಂಡಿಯಿಂದ ಕಲಬುರಗಿಗೆ extra ಮಾರ್ಗದ ಮೇಲೆ ಕೇವಲ ಒಬ್ಬ ಪ್ರಯಾಣಿಕನ ಬಿಟ್ಟು ಬರಲು ಕಳುಹಿಸಿರುವ ಆರೋಪ ಇವರ ಮೇಲೆ ಇದೆ.
ಈ ಆರೋಪದಿಂದ ಜಾರಿಕೊಳ್ಳಲು ಸಾರಿಗೆ ಸಚಿವರ ಹೆಸರು, ವ್ಯವಸ್ಥಾಪಕ ನಿರ್ದೇಶಕರ ಹೆಸರು ಹಾಗೂ ಮುಖ್ಯ ಸಂಚಾರ ವ್ಯವಸ್ಥಾಪಕರ ಹೆಸರನ್ನು ಬಳಸಿಕೊಂಡು ಅವರ ಹೆಸರಿಗೆ ಚ್ಯುತಿ ಬರುವ ಕೆಲಸ ಮಾಡಿದ್ದಾರೆ. ಇವರ ಮೇಲೆ ಕೊಪ್ಪಳ ವಿಭಾಗದಲ್ಲಿ ನಿಗಮದ ಆದಾಯ ಬಳಸಿಕೊಂಡಿರುವ ಆರೋಪವು ಇದೆ.
ಇನ್ನು ವಿಜಯಪುರ ವಿಭಾಗದ ವಿಜಯಪುರ ಕೇಂದ್ರ ಬಸ್ ನಿಲ್ದಾಣದಲ್ಲಿರುವ ನಂದಿನಿ ಕ್ಯಾಂಟೀನ್ ಬಾಡಿಗೆ ತಿಂಗಳಿಗೆ 9.5 ಲಕ್ಷ ಇದಿದ್ದನ್ನು ಆಮಿಷಕ್ಕೆ ಒಳಗಾಗಿ 4 ಲಕ್ಷ ರೂ. ಇಳಿಕೆ ಮಾಡಿ ಸಂಸ್ಥೆಗೆ ಸುಮಾರು 3 ವರ್ಷಕ್ಕೆ 1.9 ಕೋಟಿ ಆದಾಯ ಕುಂಠಿತ ಮಾಡಿರುವ ಆರೋಪ ಇವರ ಮೇಲೆ ಇದೆ.
ಇನ್ನು ಈ ಆರೋಪಕ್ಕೆ ಸಂಬಂಧಿಸಿದ ವಿಚಾರಣೆ ಸುಮಾರು 3 ವರ್ಷಗಳಿಂದಲೂ ಪ್ರಗತಿಯಲ್ಲಿದೆ. ಆದರೆ ಇಲ್ಲಿಯವರೆವಿಗೂ ಇವರಿಗೆ ಯಾವುದೇ ಶಿಕ್ಷೆ ಮತ್ತು ಕಾನೂನು ಕ್ರಮ ಜರುಗಿಸದಿರುವುದಕ್ಕೆ ಕಾರಣ ಏನು ಎಂಬುವುದು ಗೊತ್ತಿಲ್ಲ.
ಇನ್ನಾದರೂ ಈ ಎಲ್ಲ ಅಂಶಗಳನ್ನು ಪರಿಗಣಿಸಿ ಕೂಡಲೇ ಜಾರಿಗೆ ಬರುವಂತೆ ದೇವಾನಂದ್ ಬಿರಾದಾರ ಅವರನ್ನು ವಿಚಾರಣಾ ಪೂರ್ವ ಅಮಾನತು ಮಾಡಬೇಕು ಎಂದು KPCC ಅಲ್ಪ ಸಂಖ್ಯಾತರ ವಿಭಾಗದ ರಾಜ್ಯ ಕಾರ್ಯದರ್ಶಿ ಯಾಕೂಬ್ ನಾಟಿಕಾರ್ ಒತ್ತಾಯಿಸಿದ್ದಾರೆ.