ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಉಪ್ಪುಕುಂಟೆ ಗ್ರಾಮದಲ್ಲಿ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಒಬ್ಬರು ಅಧಿಕಾರಿಗಳ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಶುಕ್ರವಾರ ನಡೆದಿದೆ.
ಉಪ್ಪುಕುಂಟೆ ಗ್ರಾಮದ ಸೋಮಾಚಾರಿ (50) ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ನಿರ್ವಾಹಕರು. ಮೃತ ಕಂಡಕ್ಟರ್ ಇತ್ತೀಚೆಗೆ ಪೆರಾಲಿಸಿಸ್ ಕಾಯಿಲೆಗೆ ತುತ್ತಾಗಿದ್ದರು. ಈ ಮಧ್ಯೆ ಕೆಲಸದ ವೇಳೆ ಶ್ರೀನಿವಾಸಪುರ ಡಿಪೋ ವ್ಯವಸ್ಥಾಪಕ ವೆಂಕಟೇಶ್ ಎಂಬುವವರು ಉದ್ದೇಶಪೂರ್ವಕವಾಗಿ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ಹಿರಿಯ ಅಧಿಕಾರಿಯ ಕಿರುಕುಳದಿಂದ ಮಾನಸಿಕವಾಗಿ ನೊಂದಿದ್ದ ಸೋಮಾಚಾರಿ ಅವರು, ಇಂದು ಬೆಳಗಿನ ಜಾವ ಅವರ ತೋಟದ ಮರವೊಂದಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಂಡ್ಯದಲ್ಲಿ ಕಂಡಕ್ಟರ್ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಾಸುವ ಮುನ್ನವೇ ಇದೀಗ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿರುವುದು ನೌಕರರಲ್ಲಿ ಆತಂಕ ಹೆಚ್ಚಿಸಿದೆ. ಈ ಸಂಬಂಧ ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಹೌದು ಇದೇ ತಿಂಗಳ ಜು.5ರಂದು ಮಂಡ್ಯ ಜಿಲ್ಲೆಯ ನಾಗಮಂಗಲ ಡಿಪೋ ಆವರಣದಲ್ಲೇ ಕೆಎಎಸ್ಆರ್ಟಿಸಿ ಬಸ್ ಚಾಲಕ ಕಂ ನಿರ್ವಾಹಕ ಜಗದೀಶ್ ಎಂಬುವವರು, ಸಚಿವ ಎನ್. ಚಲುವರಾಯಸ್ವಾಮಿಯವರು ರಾಜಕೀಯ ದ್ವೇಷದಿಂದ ನನ್ನನ್ನು ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿ, ವರ್ಗಾವಣೆಯಿಂದ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿತ್ತು. ಕೂಡಲೇ ಅಸ್ವಸ್ಥಗೊಂಡ ಜಗದೀಶ್ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿ, ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದರು.
ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಪರ ಕೆಲಸ ಮಾಡಿದ್ದಕ್ಕಾಗಿ ನನ್ನನ್ನು, ರಾಜಕೀಯ ದ್ವೇಷದಿಂದ ವರ್ಗಾವಣೆ ಮಾಡಿದ್ದಾರೆ ಎಂದು ಸಚಿವ ಎನ್. ಚಲುವರಾಯಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಚಾಲಕ ಜಗದೀಶ್ ವಿಷ ಸೇವಿಸಿದ್ದರು.
ಈ ಕಹಿ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಬ್ಬ ಕೆಎಸ್ಆರ್ಟಿಸಿ ಕಂಡಕ್ಟರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಅಧಿಕಾರಿಗಳ ಕಿರುಕುಳದಿಂದ ಈಗಾಗಲೇ ಹಲವು ಮಂದಿ ನೌಕರರು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಆದರೂ ಯಾವೊಬ್ಬ ಅಧಿಕಾರಿಗೂ ಶಿಕ್ಷೆ ಮಾತ್ರ ಆಗಿಲ್ಲ.