NEWSನಮ್ಮಜಿಲ್ಲೆಶಿಕ್ಷಣ-

ಕೃಷ್ಣರಾಜ ಸರ್ಕಾರಿ ಶಾಲೆ ಉಳಿವು ನಿಮ್ಮ ಕೈಯಲ್ಲೇ ಇದೆ : ಸಾಹಿತಿ ಬನ್ನೂರು ರಾಜು

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿನಲ್ಲಿ ನಗರದ ಹೃದಯ ಭಾಗದಲ್ಲಿರುವ ಶತಮಾನಕ್ಕೂ ಹೆಚ್ಚಿನ ಇತಿಹಾಸವುಳ್ಳ ಮೈಸೂರಿಗರ ಹೆಮ್ಮೆಯ ಕೃಷ್ಣರಾಜ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಉಳಿಸಿಕೊಳ್ಳುವ ಕೆಲಸ ತ್ವರಿತವಾಗಿ ಆಗಬೇಕಾಗಿದೆ ಎಂದು ಸಾಹಿತಿ ಬನ್ನೂರು ಕೆ. ರಾಜು ಹೇಳಿದರು.

ನಗರದ ಅಗ್ರಹಾರದ ಬಿ.ಬಿ. ಗಾರ್ಡನ್ ನಲ್ಲಿರುವ ಶ್ರೀ ಕೃಷ್ಣರಾಜ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗ ಸಂಯುಕ್ತವಾಗಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ವರ್ಧಂತೋತ್ಸವದ ಆಂಗವಾಗಿ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಚಾರಿತ್ರಿಕ ಮಹತ್ವದ ಈ ಶಾಲೆ ಒಂದು ರೀತಿ ನಮ್ಮ ಮೈಸೂರು ಸಂಸ್ಥಾನದ ಅಸ್ಮಿತೆಯಾಗಿದ್ದು ಇದರ ಉಳಿವಿನ ಹೊಣೆ ಮೈಸೂರಿಗರದ್ದೆ ಆಗಿದೆ ಎಂದ ಅವರು, ಶಿಕ್ಷಣದ ಮಹತ್ವವನ್ನು ಅರಿತಿದ್ದ ದೂರದೃಷ್ಟಿಯುಳ್ಳ ಮಹಾರಾಜರು ತಮ್ಮ ಆಳ್ವಿಕೆಯಲ್ಲಿ ಅವತ್ತಿನ ಕಾಲದಲ್ಲೇ ಅಂದರೆ ಶತಮಾನದ ಹಿಂದೆಯೇ ತನ್ನ ಪ್ರಜೆಗಳು ಯಾರೂ ಕೂಡ ಶಿಕ್ಷಣದಿಂದ ವಂಚಿತರಾಗ ಬಾರದೆಂಬ ಕಾಳಜಿಯಿಂದ ಅನೇಕ ಶಾಲೆಗಳನ್ನು ವ್ಯವಸ್ಥಿತವಾಗಿ ತೆರೆದಿದ್ದರು. ಅಂತಹ ಶಾಲೆಗಳಲ್ಲೊಂದು ಶ್ರೀಕೃಷ್ಣ ರಾಜ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.

ಇವತ್ತಿಗೂ ಈ ಶಾಲೆ ಕಟ್ಟಡ, ಕೊಠಡಿಯ ತರಗತಿಗಳು ಸೇರಿದಂತೆ ಎಲ್ಲ ರೀತಿಯಿಂದಲೂ ಸುವ್ಯವಸ್ಥಿತ ವಾಗಿಯೇ ಇದೆ. ಆದರೂ ಕೂಡ ನಮ್ಮ ಜನರಲ್ಲಿರುವ ಖಾಸಗಿ ಶಾಲೆಗಳ ಭ್ರಮೆ ಮತ್ತು ಇಂಥ ಸಮೂಹ ಸನ್ನಿಯಿಂದಾಗಿ ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಬಹಳ ಕಡಿಮೆಯಾಗಿದೆ. ಇದು ಹೀಗೆಯೇ ಮುಂದುವರಿದರೆ ಮಕ್ಕಳೇ ಇಲ್ಲದೆ ಈ ಶಾಲೆ ಮುಚ್ಚಿಹೋಗುವ ಹಂತ ತಲುಪಿದೆ.

ಹಾಗಾಗಿ ಈ ಶಾಲೆಯಲ್ಲಿ ಕಲಿತಿರುವ ಹಳೆಯ ವಿದ್ಯಾರ್ಥಿಗಳು, ಪ್ರಸ್ತುತ ಇಲ್ಲಿ ಕಲಿಯುತ್ತಿರುವವರು, ಪೋಷಕರು, ಸುತ್ತಮುತ್ತಲಿನ ಬಡಾವಣೆಯ ಜನರು ಸ್ವಯಂ ಜಾಗೃತಿಗೊಂಡು ಇಲ್ಲಿಗೆ ಸಾಕಷ್ಟು ಮಕ್ಕಳು ಬರುವಂತೆ ಮನವೊಲಿಸುವ ಕೆಲಸ ಮಾಡಿ ಶಾಲೆಯ ಉಳಿವಿಗೆ ನೆರವಾಗಬೇಕಾಗಿದೆ.

ಇಂದು ನಮ್ಮ ಸರ್ಕಾರಗಳು ಎಲ್ಲ ರೀತಿಯ ಸವಲತ್ತುಗಳನ್ನೂ ಕೊಟ್ಟರೂಕೂಡ ಸರ್ಕಾರಿ ಶಾಲೆಗಳು ಮಕ್ಕಳಿಲ್ಲದೆ ಮುಚ್ಚುವ ಸ್ಥಿತಿಗೆ ಬರುವುದಕ್ಕೆ ನಮ್ಮ ಜನರ ಮನಸ್ಥಿತಿಯೇ ಬಹು ಮುಖ್ಯ ಕಾರಣವಾಗಿದ್ದು ಇದು ಬದಲಾಗಬೇಕಾಗಿದೆ. ಇಲ್ಲದಿದ್ದರೆ ಇಷ್ಟರಲ್ಲೇ ಸರ್ಕಾರಿ ಶಾಲೆಗಳು ಸಂಪೂರ್ಣವಾಗಿ ಮುಚ್ಚಿ ಹೋಗುವ ಬಹುದೊಡ್ದ ಅಪಾಯವಿದೆಯೆಂದು ಹೇಳಿದರು.

ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷರೂ ಆದ ವಿಶ್ರಾಂತ ಶಿಕ್ಷಕ ಎ.ಸಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾವೇರಿ ಬಳಗದ ಅಧ್ಯಕ್ಷೆ ಎನ್. ಕೆ. ಕಾವೇರಿಯಮ್ಮ ಅವರು ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಾದ ಸೌಜನ್ಯ, ಸೈಯದ್ ಅಖಿಲ್, ಹೇಮಂತ್ ಹಾಗೂ ಐಶ್ವರ್ಯ ಅವರುಗಳಿಗೆ ಬಹುಮಾನ ವಿತರಿಸಿದರು.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಮೈಸೂರು ಜಿಲ್ಲೆಯ ಅಧ್ಯಕ್ಷ, ವಿಶ್ರಾಂತ ಶಿಕ್ಷಕ ಎಚ್. ವಿ. ಮುರಳೀಧರ್ ಅವರು ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ಮತ್ತು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವಂತಹ ವಿವಿಧ ಕಥಾ ಪುಸ್ತಕಗಳನ್ನು ನೀಡಿ ಶುಭ ಹಾರೈಸಿದರು.

ಶಾಲೆಯ ಮುಖ್ಯ ಶಿಕ್ಷಕಿ ಎನ್. ಆರ್. ಸುಮಾ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿಯರಾದ ಕೆ.ಲಕ್ಷ್ಮಿ ಮತ್ತು ಬಿ.ಎಸ್ ರೂಪಾ ಹಾಗೂ ಅನುಭವ ಟುಟೋರಿಯಲ್ಸ್ ನ ಶಿಕ್ಷಕ ವಿ.ನಾರಾಯಣರಾವ್ ಮುಂತಾದವರು ಉಪಸ್ಥಿತರಿದ್ದರು.ಪ್ರಾರಂಭದಲ್ಲಿ ಮಕ್ಕಳೊಡನೆ ಸೇರಿ ವೇದಿಕೆಯಲ್ಲಿದ್ದ ಗಣ್ಯರೆಲ್ಲರೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪುತ್ಥಳಿಗೆ ಪುಷ್ಮ ನಮನ ಸಲ್ಲಿಸಿದರು.

 

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು