ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ 2021-22 ಹಾಗೂ 2023-24ನೇ ಸಾಲಿಗೆ ಸಮವಸ್ತ್ರದ ಬದಲಿಗೆ ನಗದು ಹಾಗೂ ಹೊಲಿಗೆ ವೆಚ್ಚ ನೀಡಬೇಕು ಎಂದು ನಿಗಮದ ಸಿಬ್ಬಂದಿ ಮತ್ತು ಜಾಗ್ರತಾ ದಳದ ನಿರ್ದೇಶಕರು ಸೂಚನೆ ನೀಡಿದ್ದಾರೆ.
ಕಳೆದ ಏಪ್ರಿಲ್ 24ರಂದು ಆದೇಶ ಹೊರಡಿಸಿದ್ದು, ನಿಗಮದ 3 ಮತ್ತು 4ನೇ ದರ್ಜೆಯ ಸೇವೆಯಲ್ಲಿರುವ ತರಬೇತಿ ನೌಕರರು ಸೇರಿದಂತೆ ಅರ್ಹ ಸಿಬ್ಬಂದಿಗೆ ಆರ್ಥಿಕ ವರ್ಷ 2021-22 ಮತ್ತು 2023-24ನೇ ಸಾಲಿಗೆ ಅನ್ವಯವಾಗುವಂತೆ ಸಮವಸ್ತ್ರವಕ್ಕೆ ಬದಲಾಗಿ ನಗದನ್ನು ಹೊಲಿಗೆ ವೆಚ್ಚ ಸೇರಿಸಿ ಕೊಡಬೇಕು ಎಂದು ತಿಳಿಸಿದ್ದಾರೆ.
ಒಂದು ವರ್ಷಕ್ಕೆ ಖಾಕಿ ಸೂಟಿಂಗ್ಸ್ 2 ಪ್ಯಾಂಟ್ ಮತ್ತು 2 ಶರ್ಟ್ಗಳಿಗೆ 5.6 ಮೀಟರ್ನಂತೆ 742 ರೂಪಾಯಿ, ಅದೇರೀತಿ ನೀಲಿ ಸೂಟಿಂಗ್ಸ್ 2 ಪ್ಯಾಂಟ್ ಮತ್ತು 2 ಶರ್ಟ್ಗಳಿಗೆ 5.6 ಮೀಟರ್ನಂತೆ 740 ರೂಪಾಯಿ, ಬಿಳಿ ಸೂಟಿಂಗ್ಸ್ 2 ಪ್ಯಾಂಟ್ ಮತ್ತು 2 ಶರ್ಟ್ಗಳಿಗೆ 5.6 ಮೀಟರ್ನಂತೆ 741 ರೂಪಾಯಿ ಜತೆಗೆ ಹೊಲಿಗೆ ವೆಚ್ಚವನ್ನು ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಇನ್ನು ಮಹಿಳಾ ಸಿಬ್ಬಂದಿಗೆ ಒಂದು ವರ್ಷಕ್ಕೆ ಖಾಕಿ ಅಥವಾ ನೀಲಿ ಸೀರೆ ಮತ್ತು ರವಿಕೆ 5.20 ರಿಂದ 6.30 ಮೀಟರ್ ಬದಲಿಗೆ 1707 ರೂಪಾಯಿಯ ಜತೆಗೆ ಹೊಲಿಗೆ ವೆಚ್ಚವನ್ನು ಸೇರಿಸಿ ಕೊಡಬೇಕು ಎಂದು ನಿರ್ದೇಶಕರು ತಿಳಿಸಿದ್ದು, ಇದೇ ಮೇ 5ರಂದು ಸಂಬಂಧಪಟ್ಟ ಸಿಬ್ಬಂದಿಗಳ ಬ್ಯಾಂಕ್ ಖಾತೆಗಳಿಗೆ 2021-22ನೇ ಸಾಲಿನ ಸಮವಸ್ತ್ರದ ನಗದನ್ನು ವೆಚ್ಚ ಸೇರಿಸಿ ಜಮೆ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.
ಇನ್ನು 2023-24ನೇ ಸಾಲಿನ ಸಮವಸ್ತ್ರದ ಬದಲಿಗೆ ನಗದನ್ನು ಹೊಲಿಗೆ ವೆಚ್ಚದೊಂದಿಗೆ, ಪ್ರತಿ ಅರ್ಹ ಸಿಬ್ಬಂದಿಗೆ ಅವರ ಅರ್ಹತಾ ದಿನಾಂಕದ ಪ್ರಕಾರ ಮಾಹೆವಾರು ವೇತದನಲ್ಲಿ ಸೇರಿಸಿ ಪಾವತಿಸಬೇಕು ಎಂದು ತಿಳಿಸಿದ್ದಾರೆ. ಆದರೆ, ಹೊಲಿಗೆ ವೆಚ್ಚ ಎಷ್ಟು ಎಂದು ಇಲ್ಲಿ ಸ್ಪಷ್ಟವಾಗಿ ಹೇಳಿಲ್ಲ ಬದಲಿಗೆ ಹೊಲಿಗೆ ವೆಚ್ಚವನ್ನು ಸುತ್ತೋಲೆ ಸಂ.09/2014-15 ದಿನಾಂಕ 27.08.2014ರ ದರದಂತೆ ಪಾವತಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಇನ್ನು 2022-23ನೇ ಸಾಲಿನ ಸಮವಸ್ತ್ರದ ಬದಲಿಗೆ ನಗದು ಪಾವತಿ ಕುರಿತು ಮುಂದಿನ ದಿನಗಳಲ್ಲಿ ಪ್ರತ್ಯೇಕ ಆದೇಶ ನೀಡಲಾಗುವುದು ಎಂದು ತಿಳಿಸಿದ್ದಾರೆ. ಈ ರೀತಿ ಒಂದು ವರ್ಷವನ್ನು ಜಂಪ್ ಮಾಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ. ಕಾರಣ ನಿಗಮದ ಸಿಬ್ಬಂದಿಗಳು ಹೇಳುವ ಪ್ರಕಾರ 2019-20 ಹಾಗೂ 2020-21ನೇ ಸಾಲಿನಲ್ಲಿ ಸಮವಸ್ತ್ರವನ್ನಾಗಲಿ ಅಥವಾ ನಗದನ್ನಾಗಲಿ ಕೊಟ್ಟಿಲ್ಲ. ಆ ಬಗ್ಗೆ ಈವರೆಗೂ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸಿಲ್ಲ ಎನ್ನುತ್ತಿದ್ದಾರೆ.
ಇನ್ನು 2019-20 ಮತ್ತು 2020-21ರಂತೆ ಈಗ 2022-23ನೇ ಸಾಲಿನ ಸಮವಸ್ತ್ರದ ಬದಲಿಗೆ ಕೊಡಬೇಕಿರುವ ನಗದನ್ನು ಯಾಮಾರಿಸುವ ಕುತಂತ್ರವನ್ನು ಮಾಡದೆ ನಮಗೆ ಸಿಗಬೇಕಿರುವುದನ್ನು ಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ 2019-20 ಮತ್ತು 2020-21ನೇ ಸಾಲಿನಲ್ಲಿ ಏನಾಗಿದೆ ಎಂಬುದರ ಬಗ್ಗೆ ಅಧಿಕಾರಿಗಳು ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ.