ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಸ್‌ಗಳಲ್ಲಿ ಕಳೆದ 2023ರ ಜೂನ್ 11ರಿಂದ ಆರಂಭವಾಗಿರುವ ಶಕ್ತಿಯೋಜನೆಯಡಿ ಮಹಿಳೆಯರು ಈಗಾಗಲೇ ರಾಜ್ಯಾದ್ಯಂತ ಉಚಿತವಾಗಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ.
ಅದೇರೀತಿ ಕೆಎಸ್ಆರ್ಟಿಸಿ ಬಸ್‌ಗಳಲ್ಲಿ ಹಿರಿಯ ನಾಗರಿಕರು ಅಂದ್ರೆ ಅರವತ್ತು ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯರಿ ಪುರುಷರು ಮಹಿಳೆಯರಂತೆಯೇ ರಾಜ್ಯಾದ್ಯಂತ ಉಚಿತ ಪ್ರಯಾಣ ಮಾಡುವುದಕ್ಕೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.
ಲೋಕಸಭೆ ಚುನಾವಣೆ ಮುಗಿದ ನಂತರ ಗ್ಯಾರಂಟಿ ಯೋಜನೆಗಳು ನಿಲ್ಲುತ್ತವೆ ಎಂಬುದಾಗಿ ನಾಡಿನ ಜನರು ಮೇಲಾಗಿ ವಿಪಕ್ಷಗಳು ಭಾವಿಸಿದ್ದವು. ಆದರೆ ಸರ್ಕಾರ ಈ ವಿಚಾರದ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ್ದು ಯಾವುದೇ ಕಾರಣಕ್ಕೂ ಉಚಿತ ಯೋಜನೆಗಳನ್ನು ನಿಲ್ಲಿಸೊಲ್ಲ ಎಂದು ಹೇಳಿದೆ.
ಅದರ ಜತೆಗೆ ಶೀಘ್ರದಲ್ಲೇ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು, ಇದು ಜಾರಿಗೆ ಬಂದರೆ 60ವರ್ಷ ದಾಟಿದ ಪುರುಷರು ಕೂಡ ತಮ್ಮ ಮುಸ್ಸಂಜೆಯ ವಯಸ್ಸಿನಲ್ಲಿ ಗುಡಿ ಗುಂಡಾರಗಳನ್ನು ಪ್ರದಕ್ಷಿಣೆ ಹಾಕುವುದಕ್ಕೆ ಅನುಕೂಲವಾಗಲಿದೆ.
ಆದರೆ, ಇದು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಖಂಡಿತವಾಗಿಯೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಇರುವ ರೀತಿಯಲ್ಲೇ ಈ ಯೋಜನೆ ಕೂಡ ಜಾರಿಗೆ ಬಂದರೆ ಸಾಕಷ್ಟು ಜನಪ್ರಿಯವಾಗಲಿದೆ. ಆದರೆ ಇದಕ್ಕೆಲ್ಲ ಸರ್ಕಾರ ಹೇಗೆ ಹಣಹೊಂದಿಸುತ್ತಿದೆ ಎಂಬುವುದು ಯಕ್ಷಪ್ರಶ್ನೆಯಾಗಿದೆ.
ಇನ್ನೊಂದೆಡೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು ಮತ್ತು ನೌಕರರು ಸೇರಿ 1.25 ಲಕ್ಷ ಮಂದಿಗೆ 2023ರ ಜನವರಿ ಒಂದರಿಂದ ಶೇ.15ರಷ್ಟು ಹೆಚ್ಚಳವಾಗಿರುವ ವೇತನದ 38 ತಿಂಗಳ ಹಿಂಬಾಕಿಯನ್ನೇ ಇನ್ನೂ ಕೊಟ್ಟಿಲ್ಲ. ಇದರ ಜತೆಗೆ ಈಗಾಗಲೇ ಮತ್ತೆ 2024ರ ಜನವರಿ 1ರಿಂದ ಮತ್ತೆ ಸಾರಿಗೆ ನಿಗಮಗಳ ನೌಕರರಿಗೆ ವೇತನ ಪರಿಷ್ಕರಣೆ ಆಗಬೇಕಿದೆ. ಅದಕ್ಕೂ ಈವರೆಗೂ ಸರ್ಕಾರ ಯಾವುದೆ ಕ್ರಮ ತೆಗೆದುಕೊಂಡಿಲ್ಲ.
ಇನ್ನು ಬಸ್‌ಗಳಲ್ಲಿ ಈಗಾಗಲೇ ಉಚಿತವಾಗಿ ಪ್ರಯಾಣಿಸಿರುವ ಮಹಿಳೆಯರ ಟಿಕೆಟ್ ಮೌಲ್ಯದ ನೂರಾರು ಕೋಟಿ ಹಣವನ್ನು ಬಾಕಿ ಉಳಿಸಿಕೊಂಡಿದೆ ಸರ್ಕಾರ. ಈ ಎಲ್ಲದರ ನಡುವೆ ಹಣ ಕ್ರೋಢೀಕರಣಕ್ಕೆ ಹೆಣಗಾಡುತ್ತಿದ್ದು, ಈವರೆಗೂ ನೌಕರರಿಗೆ ಕೊಡಬೇಕಿರುವುದನ್ನೇ 5 ವರ್ಷವಾಗುತ್ತಿದ್ದರು ಕೊಟ್ಟಿಲ್ಲ. ಹೀಗಿರುವಾಗ ಮತ್ತೆ ಉಚಿತ ಖಚಿತ ಎಂಬುವುದು ಸರ್ಕಾರಕ್ಕೆ ಬೇಕಾ ಎನ್ನುತ್ತಿದ್ದಾರೆ ಪ್ರಜ್ಞಾವಂತ ನಾಗರಿಕರು.