ಕೋಲಾರ: ಚಾಲಕನ ನಿಯಂತ್ರಣ ತಪ್ಪಿ ನಿಂತಿದ್ದ ಲಾರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿ ಮೂವರ ಸ್ಥಿತಿ ಗಂಭೀರವಾಗಿರುವ ಘಟನೆ ಆಂಧ್ರಪ್ರದೇಶ ಮತ್ತು ಕರ್ನಾಟಕ ಗಡಿ ಭಾಗದಲ್ಲಿ ಬುಧವಾರ ತಡರಾತ್ರಿ ಸುಮಾರು 12.30ರಲ್ಲಿ ನಡೆದಿದೆ.
ಬುಧವಾರ ತಡರಾತ್ರಿ ಅವಘಡ ಸಂಭವಿಸಿದ್ದು, ಅಪಘಾತದಲ್ಲಿ ಕೆಎಸ್‌ಆರ್‌ಟಿಸಿ ಕೋಲಾರ ಘಟಕದ ಬಸ್ ಚಾಲಕ ವಿನೋದ್ ಕುಮಾರ್, ನಿರ್ವಾಹಕ ಶಿವಶಂಕರ್ ಮತ್ತು ಓರ್ವ ಪ್ರಯಾಣಿಕರಿಗೆ ಗಂಭೀರಗಾಯವಾಗಿದ್ದು, ಬಸ್‌ನಲ್ಲಿದ್ದ 30ಕ್ಕೂ ಹೆಚ್ಚು ಪ್ರಯಾಣಿಕರು ಸಣ್ಣಪುಟ್ಟಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನು ಗಂಭೀರವಾಗಿ ಗಾಯಗೊಂಡಿರುವ ಚಾಲಕ ವಿನೋದ್ ಕುಮಾರ್, ನಿರ್ವಾಹಕ ಶಿವಶಂಕರ್ ಮತ್ತು ಪ್ರಯಾಣಿಕರೊಬ್ಬರನ್ನು ಕೋಲಾರದ ಆರ್‌ಎಲ್. ಜಾಲಪ್ಪ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಅವರಲ್ಲಿ ಚಾಲಕರಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿವರ: ಬುಧವಾರ ಬೆಳಗ್ಗೆ 10 ಗಂಟೆಗೆ ಕೋಲಾರ ಘಟಕದಿಂದ ಬಸ್ಸನ್ನು ಮಾರ್ಗಚರಣೆಗಾಗಿ ತೆಗೆದುಕೊಂಡ ಬಳಿಕ ಬೆಂಗಳೂರಿಗೆ ಬಂದು ಅಲ್ಲಿಂದ ತಿರುಪತಿಗೆ ಹೋಗಿದ್ದಾರೆ. ಬಳಿಕ ವಿಶ್ರಾಂತಿಯೂ ಇಲ್ಲದೆ ಮತ್ತೆ ತಿರುಪತಿಯಿಂದ ಬೆಂಗಳೂರಿಗೆ ವಾಪಸ್ ಆಗುತ್ತಿದ್ದು, ಈ ವೇಳೆ ಕೋಲಾರ ಸಮೀಪದ ಆಂಧ್ರ ಗಡಿಭಾಗದ ಹೆದ್ದಾರಿಯಲ್ಲಿ ಕೆಟ್ಟುನಿಂತಿದ್ದ ಲಾರಿಗೆ ಬಸ್ ಡಿಕ್ಕಿ ಹೊಡೆದಿದೆ.
ಇನ್ನು ರಾತ್ರಿಯಾಗಿದ್ದರಿಂದ ಲಾರಿ ನಿಂತಿದಿಯೋ ಇಲ್ಲ ಚಲಿಸುತ್ತಿದೆಯೋ ಎಂಬುವುದು ತಕ್ಷಣಕ್ಕೆ ಗೊತ್ತಾಗಿಲ್ಲ. ಅಲ್ಲದೆ ಓವರ್‌ಟೇಕ್ ಮಾಡುತ್ತಿದ್ದ ಮತ್ತೊಂದು ವಾಹನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಈ ವೇಳೆ ಲಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವುದಕ್ಕಾಗಿ ಬ್ರೇಕ್‌ಹಾಕಿದ್ದಾರೆ. ಆದರೆ ಬ್ರೇಕ್ ಬಿದ್ದಿಲ್ಲ ಪರಿಣಾಮ ಅವಘಡ ಸಂಭವಿಸಿದೆ.
ಅಪಘಾತಕ್ಕೀಡಾಗಿರುವ ಬಸ್ ಈಗಾಗಲೇ 13 ಲಕ್ಷ ಕಿಲೋ ಮೀಟರ್ ಓಡಿದ್ದು, ಸ್ಕ್ರ್ಯಾಪ್‌ಗಾಡಿಯನ್ನು ಅಂತಾರಾಜ್ಯ ಮಟ್ಟದಲ್ಲಿ ಕಾರ್ಯಚರಣೆಗೆ ಬಿಟ್ಟಿರುವುದರಿಂದ ದುರಂತಕ್ಕೆ ಕಾರಣವಾಗಿದೆ ಎಂದು ಘಟಕದ ನೌಕರರೊಬ್ಬರು ವಿಜಯಪಥಕ್ಕೆ ತಿಳಿಸಿದ್ದಾರೆ.
ಇನ್ನು ಈ ರೀತಿಯ ಅಪಘಾತಗಳಿಗೆ ನಿರಂತರವಾಗಿ ವಿಶ್ರಾಂತಿ ರಹಿತ ಡ್ಯೂಟಿ ಮಾಡುತ್ತಿರುವುದು ಕಾರಣ ಎನ್ನಲಾಗುತ್ತಿದೆ. ಕೋಲಾರ ವಿಭಾಗದಲ್ಲಿ ಇರುವ ಡಿಟಿಒ ಜಿ.ಶಾಂತಕುಮಾರ್ ಅವರು ಫಾರಂ – 4ನಲ್ಲಿ ತೋರಿಸಿರುವುದು ಒಂದು ಆದರೆ ಚಾಲನಾ ಸಿಬ್ಬಂದಿಗೆ ಫಾರಂ -4ನಲ್ಲಿ ಇರುವಂತೆ ಈವರೆಗೂ ಡ್ಯೂಟಿ ಮಾಡುವುದಕ್ಕೆ ಬಿಟ್ಟಿಲ್ಲ. ನಿರಂತರವಾಗಿ 14-15 ಗಂಟೆಗಳ ಕಾಲ ಡ್ಯೂಟಿ ಮಾಡಿಸುತ್ತಿದ್ದಾರೆ.
ಈ ಬಗ್ಗೆ ಕೇಳಲು ಹೋಗುವ ಚಾಲನ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಮೂಲಕ ದರ್ಪ ಮೆರೆಯುತ್ತಿದ್ದಾರೆ. ಇದರಿಂದ ಕೋಲಾರ ವಿಭಾಗದ ಚಾಲನಾ ಸಿಬ್ಬಂದಿ ಭಯದಿಂದ ಏನನ್ನೂ ಕೇಳದೆ ಡ್ಯೂಟಿ ಮಾಡುವ ಪರಿಸ್ಥಿತಿ ಇದೆ ಎಂದು ನೌಕರರು ಅಳಲು ತೋಡಿಕೊಂಡಿದ್ದಾರೆ.
ಇನ್ನು ಬೆಂಗಳೂರಿನಿಂದ ತಿರುಪತಿಗೆ ಹೋದ ಬಸ್ ಚಾಲಕನಿಗೆ ತಿರುಪತಿಯಲ್ಲಿ ವಿಶ್ರಾಂತಿ ನೀಡಲಾಗುತ್ತಿದೆ. ಅಲ್ಲದೆ ತಿರುಪತಿಯಿಂದ ಬೆಂಗಳೂರಿಗೆ ಮತ್ತೊಬ್ಬ ಚಾಲಕರನ್ನು ಡ್ಯೂಟಿಗೆ ಹತ್ತಿಸಲಾಗುತ್ತಿದೆ ಎಂದು ಫಾರಂ -4ರಲ್ಲಿ ತೋರಿಸಿದ್ದಾರೆ. ಆದರೆ ವಾಸ್ತವದಲ್ಲಿ ಇದು ಈವರೆಗೂ ಜಾರಿಗೆ ಬಂದಿಲ್ಲ. ಅಂದರೆ ಬೆಂಗಳೂರಿನಿಂದ ತಿರುಪತಿಗೆ ಮತ್ತು ತಿರುಪತಿಯಿಂದ ಬೆಂಗಳೂರಿಗೆ ಬಳಿಕ ಕೋಲಾರ ಡಿಪೋಗೆ ಒಬ್ಬನೇ ಚಾಲಕ ಡ್ಯೂಟಿ ಮಾಡುತ್ತಿದ್ದಾರೆ.
ಈ ರೀತಿ ವಿಶ್ರಾಂತಿ ರಹಿತವಾಗಿ ಡ್ಯೂಟಿ ಮಾಡಿಸಿಕೊಂಡರು ಚಾಲನಾ ಸಿಬ್ಬಂದಿಗೆ ಓಟಿಯನ್ನು ಸಹ ಕೊಡದೆ ಡಿಟಿಒ ಮತ್ತು ಇತರ ಅಧಿಕಾರಿಗಳು ದರ್ಪ ಮೆರೆಯುತ್ತಿದ್ದಾರೆ. ಇನ್ನು ಈ ಬಗ್ಗೆ ಘಟಕದ ಸಿಬ್ಬಂದಿಯೊಬ್ಬರು ಹಲವು ಬಾರಿ ಸಂಬಂಧಪಟ್ಟ ಎಂಡಿ ಮತ್ತು ಸಚಿವರ ಗಮನಕ್ಕೆ ತಂದರೂ ಈವರೆಗೂ ಯಾವುದೇ ಕ್ರಮ ಜರುಗಿಸಿಲ್ಲ. ಇದು ಎಂಡಿ ಅನ್ಬುಕುಮಾರ್ ಅವರ ಬೇಜವಾಬ್ದಾರಿಯನ್ನು ತೋರಿಸುತ್ತಿದೆ.