ಬೆಂಗಳೂರು: ಇಪಿಎಸ್ ನಿವೃತ್ತರ ಬೃಹತ್ ಪ್ರತಿಭಟನೆ ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ರಾಷ್ಟ್ರೀಯ ಸಂಘರ್ಷ ಸಮಿತಿ, ಬಿಎಂಟಿಸಿ & ಕೆಎಸ್ಆರ್ಟಿಸಿ ವತಿಯಿಂದ ಜರುಗಿತು.
ರಾಷ್ಟ್ರೀಯ ಸಂಘರ್ಷ ಸಮಿತಿ ಅಧ್ಯಕ್ಷ ಕಮಾಂಡರ್ ಅಶೋಕ್ ರಾವುತ್ ಅವರು ದೇಶಾದ್ಯಂತ ಇರುವ ಎಲ್ಲ ಇಪಿಎಸ್ ಪಿಂಚಣಿದಾರರಿಗೆ ಕರೆ ನೀಡಿದ್ದ ಮಾರ್ಚ್ 11ರ ಪ್ರತಿಭಟನೆ ಹಿನ್ನೆಲೆಯಲ್ಲಿ ವಿವಿಧ ಬೇಡಿಕೆಗಳ ಈಡೇರಿಸಿ ಆಗ್ರಹಿಸಿ, ಮನವಿ ಪತ್ರವನ್ನು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರಿಗೆ ಸಲ್ಲಿಸಲಾಯಿತು.
ಪ್ರತಿಭಟಮನೆಯಲ್ಲಿ ಭಾಗವಹಿಸಿದ್ದ ನೂರಾರು ಮಂದಿ ನಿವೃತ್ತ ನೌಕರರು ಇಪಿಎಫ್ಒ ಅಧಿಕಾರಿಗಳ ವಿರುದ್ಧ ಕೂಗಿದ ಧಿಕ್ಕಾರದ ಘೋಷಣೆ ಕಚೇರಿ ಆವರಣದಲ್ಲಿ ಮಾರ್ಧನಿಸಿತು.
ಈ ವೇಳೆ ಎನ್ಎಸಿ ಮುಖ್ಯ ಸಂಯೋಜಕ ರಮಾಕಾಂತ ನರಗುಂದ ಮಾತನಾಡಿ, ಪಾರ್ಲಿಮೆಂಟ್ ಚುನಾವಣಾ ಪ್ರಕ್ರಿಯೆ ದಿನಾಂಕ ಇನ್ನೆರಡು ದಿನಗಳಲ್ಲಿ ಘೋಷಣೆಯಾಗಲಿದ್ದು, ಅದಕ್ಕೂ ಮುಂಚೆ ಕೇಂದ್ರ ಸರ್ಕಾರ, ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಭರವಸೆಯಿದೆ. ಕೇಂದ್ರ ಸರ್ಕಾರ ಹಾಗೂ ಇಪಿಎಫ್ಒ ಅಧಿಕಾರಿಗಳ ಜತೆ ಮಹತ್ವದ ಮಾತುಕತೆ ನಡೆಯಲಿದ್ದು, ನಿರೀಕ್ಷಿತ ಫಲಿತಾಂಶ ಬರಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
ಬಿಎಂಟಿಸಿ & ಕೆಎಸ್ಆರ್ಟಿಸಿ ನಿವೃತ್ತ ನೌಕರರ ಸಂಘಟನೆಯ ಕಾರ್ಯಾಧ್ಯಕ್ಷ ನಂಜುಂಡೇಗೌಡ ಮಾತನಾಡಿ, ಇಪಿಎಸ್ ನಿವೃತ್ತರು ನಿರಾಶರಾಗುವುದು ಬೇಡ, ನಮ್ಮ ಈ ಹೋರಾಟಕ್ಕೆ ಶೀಘ್ರದಲ್ಲೆ ಪ್ರತಿಫಲ ಸಿಗಲಿದೆ ಎಂದರು.
ಎನ್ಎಸಿ ರಾಜ್ಯಾಧ್ಯಕ್ಷ ಜಿಎಸ್ಎಂ ಸ್ವಾಮಿ ಮಾತನಾಡಿ, ಇದು ನಮ್ಮ ಕಟ್ಟ ಕಡೆಯ ಹೋರಾಟ, ಬೇಡಿಕೆ ಈಡೇರದೆ ಹೋದಲ್ಲಿ, ಈ ಚುನಾವಣೆಯಲ್ಲಿ ನಿವೃತ್ತರು ತೆಗೆದುಕೊಳ್ಳುವ ನಿರ್ಧಾರ ಕೇಂದ್ರ ಸರ್ಕಾರದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂಬ ಎಚ್ಚರಿಕೆಯ ಸಂದೇಶ ನೀಡಿದರು.
ಅಧ್ಯಕ್ಷ ಶಂಕರ್ ಕುಮಾರ್ ಮಾತನಾಡಿ, ಹತ್ತಾರು ವರ್ಷಗಳಿಂದ ನಿವೃತ್ತರು ಸಂಕಷ್ಟಗಳನ್ನೇ ಅನುಭವಿಸುತ್ತಿದ್ದು, ಕೇರಳ ರಾಜ್ಯದ 69 ವರ್ಷದ ಶಿವರಾಮನ್ ಅವರಿಗೆ ಪಿಂಚಣಿ ನೀಡಿದೆ ಆತ್ಮಹತ್ಯೆಗೆ ದೂಡಿದ ಇಪಿಎಫ್ಒ ಅಧಿಕಾರಿಗಳ ವರ್ತನೆ ಖಂಡನೀಯ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿಡೋಲಪ್ಪನವರು, ಪದಾಧಿಕಾರಿಗಳಾದ ನಾಗರಾಜು ಹಾಗೂ ಮನೋಹರ್ ಸೇರಿದಂತೆ ನೂರಾರು ನಿವೃತ್ತರು ಭಾಗವಹಿಸಿದ್ದರು.