ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರಿಗೂ ಕೂಡ ಸರ್ಕಾರಿ ನೌಕರರಿಗೆ ವೇತನ ಪಾವತಿಸುವ ಮಾದರಿಯಲ್ಲಿಯೇ ಎಚ್‌ಆರ್‌ಎಂಎಸ್ ತಂತ್ರಾಂಶದ ಮೂಲಕ ಇದೇ ಆಗಸ್ಟ್ ವೇತನ ಪಾವತಿಸಲು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ರಾಜ್ಯದ ಎಲ್ಲ ಸರ್ಕಾರಿ ನೌಕರರಿಗೆ ವೇತನ ಪಾವತಿಸುವ ಮಾದರಿಯಲ್ಲೇ ಇನ್ನು ಮುಂದೆ KSRTC ನೌಕರರಿಗೂ ಕೂಡ ವೇತನ ಪಾವತಿಸಬೇಕು. ಹೀಗಾಗಿ ಎಚ್‌ಆರ್‌ಎಂಎಸ್ ತಂತ್ರಾಂಶದ ಮೂಲಕ ವೇತನ ಪಾವತಿಸಲು ಕೂಡಲೇ ಮುಂದಾಗಬೇಕು ಎಂದು ನಿಗಮದ ಎಂಡಿ ಅನ್ಬುಕುಮಾರ್ ಆದೇಶಿಸಿದ್ದಾರೆ.
ಈ ಆದೇಶದ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿಯ ಎಲ್ಲ ನೌಕರರಿಗೆ ಆಗಸ್ಟ್ ತಿಂಗಳಿಂದ HRMS ತಂತ್ರಾಂಶದನ್ವಯ ವೇತನ ಪಾವತಿಸಲಾಗುವುದು. ಇನ್ನು ಈ ಎಚ್‌ಆರ್‌ಎಂಎಸ್ ತಂತ್ರಾಂಶದಲ್ಲಿ ದಾಖಲಾಗುವ ಹಾಜರಾತಿ ಮತ್ತು ರಜೆ ಮಂಜೂರಾತಿಯನ್ವಯ ವೇತನ ಪಾವತಿ ಕಡ್ಡಾಯವಾಗಲಿದೆ.
ಇನ್ನು HRMS ವೇತನ ಹೊರತುಪಡಿಸಿ ಬೇರೆ ಮಾದರಿಯ ವೇತನ ಬಿಲ್ಲು ತಯಾರಿಸಲು ಇನ್ನು ಮುಂದೆ ಅವಕಾಶವಿಲ್ಲ. ನೌಕರರು ಕೂಡ ಎಚ್‌ಆರ್‌ಎಂಎಸ್ ಅಡಿಯಲ್ಲೇ ಸಂಬಳ ಕೊಡುವಂತೆ 2020 ರಿಂದ ಬೇಡಿಕೆ ಇಡುತ್ತಲೇ ಬಂದಿದ್ದರು. ಈ ಹಿನ್ನೆಲೆಯಲ್ಲಿ ಬಹುದಿನಗಳ ನೌಕರರ ಬೆಡಿಕೆ ಸದ್ಯಕ್ಕೆ KSRTCಯಲ್ಲಿ ಮಾತ್ರ ಈಡೇರಿದ್ದು, ಇನ್ನೂ BMTC, KKRTC ಮತ್ತು NWKRTC ನಿಗಮಗಳಲ್ಲಿ ಜಾರಿಗೆ ಬರಬೇಕಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರಿಗೆ ಆಗಸ್ಟ್ ತಿಂಗಳ ವೇತನದಿಂದಲೇ ಹೊಸ ತಂತ್ರಾಂಶದ ಮೂಲಕ ವೇತನ ನೀಡಲಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ಆದೇಶ ಹೊರಡಿಸಿದ್ದು, ಅದರಂತೆಯೇ ಮುಂದೆ ಪ್ರತಿ ತಿಂಗಳು ಸಂಸ್ಥೆಯ ಅಧಿಕಾರಿಗಳು ಮತ್ತು ನೌಕರರು ವೇತ ಪಡೆಯಲಿದ್ದಾರೆ.
ಎಚ್‌ಆರ್‌ಎಂಎಸ್ ಸೌಲಭ್ಯ: ಸರ್ಕಾರಿ ನೌಕರರು ತಮ್ಮ ಕೆಜಿಐಡಿ ಸಂಖ್ಯೆಯ ಮೂಲಕ ನೋಂದಣಿಯಾಗಿ ನೇರವಾಗಿ ತಮ್ಮ ವೇತನ ಚೀಟಿಯನ್ನು (Pay Slip) ಅನ್ನು ಪಡೆಯಬಹುದು. ನೌಕರರು ತಮ್ಮ ರಜೆ ಬಾಕಿಯನ್ನು ವೀಕ್ಷಿಸಬಹುದು.
ನೌಕರರು ಸಾಲ ಅಥವಾ ಮುಂಗಡದ ವಿವರಗಳನ್ನು ವೀಕ್ಷಿಸಬಹುದು. ನೌಕರರು ತಮ್ಮ ಕಡಿತಗಳಾದ ಆದಾಯ ತೆರಿಗೆ (IT), ಕೆಜಿಐಡಿ, ಸಾಮಾನ್ಯ ಭವಿಷ್ಯ ನಿಧಿ (GPF), ಎನ್‌ಪಿಎಸ್ ಮುಂತಾದವುಗಳನ್ನು ನೋಡಬಹುದು.
ನೌಕರರು ತಮ್ಮ ವಿಮೆಗಳಾದ ಕೆಜಿಐಡಿ, ಜಿಪಿಎಫ್ ಮುಂತಾದ ವಿವರಗಳನ್ನು ಸಹ ವೀಕ್ಷಿಸಬಹುದು. ನೌಕರರ ಸೇವಾ ವಹಿಯನ್ನು ವಿದ್ಯುನ್ಮಾನ ಸೇವಾ ವಹಿ (ESR) ಯಲ್ಲಿ ಅಪ್‌ಲೋಡ್ ಮಾಡಿ ಪಬ್ಲಿಷ್ ಮಾಡಿದ ಇ-ಸೇವಾ ಪುಸ್ತಕವನ್ನು ಈ ಪರದೆಯಲ್ಲಿ ನೋಡಬಹುದು.
ಆಫೀಸ್‌ಗೆ 50 ಮೀಟರ್ ಇರುವಾಗಲೇ HRMS ತಂತ್ರಾಂಶ ಸ್ವಯಂಚಾಲಿತವಾಗಿ ಲಾಗಿನ್ ಆಗಲಿದೆ. ಅಂತ್ಯೆಯೆ ಆಫೀಸ್‌ನಿಂದ ನೌಕರರು ದೂರ ಹೋಗುತ್ತಿದಂತೆ ಆಟೋಮೆಟಿಕ್ ಲಾಗ್ಔಟ್ ಆಗಲಿದೆ. ನೌಕರರು ಎಚ್‌ಆರ್‌ಎಂಎಸ್‌ನಲ್ಲಿ ಸೃಜಿಸಿದ ಟಿಕೆಟ್‌ನ ವಿವರಗಳನ್ನು ವೀಕ್ಷಿಸಬಹುದಾಗಿದೆ.