ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು ಮತ್ತು ನೌಕರರಿಗೆ ಶೇ.35ರಷ್ಟು ವೇತನ ಹೆಚ್ಚಳ ಮಾಡಬೇಕು ಎಂದು ಅಖಂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಕಾರ್ಮಿಕ ಮಹಾಮಂಡಳಿ ಆಗ್ರಹಿಸಿದೆ.
ಈ ಸಂಬಂಧ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಮಂಡಳಿಯ ಪ್ರಧಾನ ಕಾರ್ಯದರ್ಶಿ ಎ.ವಿ. ಬೋರಶೆಟ್ಟಿ, ‘ರಾಜ್ಯ ಸರ್ಕಾರಿ ನೌಕರರಿಗೆ ನೀಡುತ್ತಿರುವ 6ನೇ ವೇತನ ಆಯೋಗದ ಅನ್ವಯದಂತೆ ನಾಲ್ಕು ಸಾರಿಗೆ ನಿಗಮಗಳ ಅಧಿಕಾರಿಗಳು ಮತ್ತು ನೌಕರರಿಗೂ 2020ರ ಜ. 1ರಿಂದಲೇ ವೇತನ ಪಾವತಿಸಬೇಕು ಎಂದು ಒತ್ತಾಯಿಸಿದರು.
ಇನ್ನು ನಿಗಮಗಳ ಅಧಿಕಾರಿಗಳು ಮತ್ತು ನೌಕರರನ್ನು ಕೂಡ ಸರ್ಕಾರಿ ನೌಕರರೆಂದು ಘೋಷಿಸಬೇಕು. ನಾಲ್ಕು ನಿಗಮಗಳಲ್ಲಿರುವ ನೌಕರರ ಪರ ಸಂಘಟನೆಗಳಿಗೆ 30 ವರ್ಷಗಳಿಂದ ಚುನಾವಣೆ ನಡೆದಿಲ್ಲ. ಆದ್ದರಿಂದ ಕೂಡಲೇ ಚುನಾವಣೆ ನಡೆಸಬೇಕು ಎಂದು ಸರ್ಕಾರ ಮತ್ತು ಆಡಳಿತ ವರ್ಗಕ್ಕೆ ಆಗ್ರಹಿಸಿದರು.
ನಿಗಮಗಳಲ್ಲಿ ಇರುವ ಚಾಲಕರ ಟ್ರೈನಿ ಪದ್ಧತಿಯನ್ನು ರದ್ದುಗೊಳಿಸಿ, ಸದ್ಯ ಕೆಲಸ ಮಾಡುತ್ತಿರುವ ಟ್ರೈನಿಗಳಿಗೆ ತಿಂಗಳಿಗೆ ಕನಿಷ್ಠ ₹30 ಸಾವಿರ ವೇತನ ನೀಡಬೇಕು. ನೌಕರರಿಗೆ ನೀಡುತ್ತಿರುವ ದಿನಭತ್ಯೆ ಹಾಗೂ ಇತರೆ ಭತ್ಯೆಗಳನ್ನು ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು.
‘ಸರ್ಕಾರಿ ನೌಕರರಿಗೆ ನೀಡುವ ವೈದ್ಯಕೀಯ ಸೌಲಭ್ಯಗಳನ್ನು ಸಾರಿಗೆ ನೌಕರರಿಗೂ ಜಾರಿಗೊಳಿಸಬೇಕು. ಇಲ್ಲದಿದ್ದರೆ ಪ್ರತಿಯೊಬ್ಬ ನೌಕರನಿಗೂ ಮಾಸಿಕ ₹3 ಸಾವಿರ ವೈದ್ಯಕೀಯ ಭತ್ಯೆ ನೀಡಬೇಕು. ನಮ್ಮ ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಫೆ. 23ರಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.