NEWSನಮ್ಮಜಿಲ್ಲೆನಮ್ಮರಾಜ್ಯ

KSRTC ನೌಕರರು ಆತಂಕದಲ್ಲಿದ್ದಾರೆ: ಸಿಎಂ ಸಭೆ ಆಯೋಜಿಸಲು ಸಾರಿಗೆ ಸಚಿವರಿಗೆ ಕೂಟ ಮನವಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರಿಗೆ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ನೀಡಿರುವ ಪ್ರಣಾಳಿಕೆ ಭರವಸೆಯಂತೆ ಸರ್ಕಾರ ವೇತನ ಹೆಚ್ಚಳ ಮತ್ತು ಇತರೆ ಬೇಡಿಕೆಗಳ ಈಡೇರಿಕೆಗಾಗಿ ಮುಖ್ಯಮಂತ್ರಿಗಳ ಅಧ್ಯಕ್ಷತೆ ಸಭೆ ಆಯೋಜಿಸುವಂತೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರಿಗೆ ಸಾರಿಗೆ ನೌಕರರ ಕೂಟ ಮನವಿ ಪತ್ರ ಸಲ್ಲಿಸಿದೆ.

ಈ ಸಂಬಂಧ ನಿನ್ನೆ ಶನಿವಾರ ವಿಧಾನಸೌಧದ ಸಾರಿಗೆ ಸಚಿವರ ಕಚೇರಿಗೆ ಮನವಿ ಪತ್ರ ಸಲ್ಲಿಸಿರುವ ಕೂಟ ಸಾರಿಗೆ ನೌಕರರ ವೇತನ ಹೆಚ್ಚಳ ಹಾಗೂ ಇತರೆ ಬೇಡಿಕೆಗಳ ವಿಚಾರಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಹಲವು ಸಭೆಗಳು ತಮ್ಮ ಹಾಗೂ ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದಿವೆ.

ಇನ್ನು ಕಳೆದ ಏ.15 ರಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು. ಈ ಸಭೆಯಲ್ಲಿ ಸಿಎಂ ನಾವು ಮಂಡಿಸಿದ ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಗಳ ಹಾಗೂ ಸಾರಿಗೆ ನೌಕರರಿಗೆ ನೀಡಿದ ಪ್ರಣಾಳಿಕೆ ಭರವಸೆಯಂತೆ ಸಾರಿಗೆ ನೌಕರರಿಗೂ ಸರ್ಕಾರಿ ನೌಕರರಿಗೆ ಇರುವ ಸರಿ ಸಮಾನ ವೇತನ ನೀಡುವ ಭರವಸೆ ನೀಡಿದ್ದಾರೆ.

ಅಲ್ಲದೆ ಬಾಕಿ ಇರುವ38 ತಿಂಗಳ ವೇತನ ಹೆಚ್ಚಳದ ಹಿಂಬಾಕಿಯನ್ನು ನೀಡಬೇಕೆಂದು ಹಾಗೂ ಇತರೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಸಾರಿಗೆ ನಿಗಮಗಳ ನೌಕರರ ಸಂಘಟನೆಗಳ ಒಕ್ಕೂಟದ ವತಿಯಿಂದ ಮನವಿ ಸಲ್ಲಿಸಲಾಗಿದೆ.

ಆ ವೇಳೆ ಮುಖ್ಯ ಮಂತ್ರಿಗಳು ಅತಿ ಶೀಘ್ರದಲ್ಲಿ ತಮ್ಮ, ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಉನ್ನತ ಅಧಿಕಾರಿಗಳ ಜತೆ ಸಭೆ ಮಾಡಿ ನಂತರ ಸಂಘಟನೆಗಳ ಜತೆಯಲ್ಲಿ ಸಭೆ ಮಾಡಿ ನಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ನೀಡಿದ್ದರು.

ಆದರೆ, ಸಭೆ ನಡೆದು ಈಗಾಗಲೇ 25 ದಿನಗಳು ಆಗಿದ್ದು, ಈ ವರೆಗೂ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯ ಸಭೆ ಕರೆಯದೆ ಇರುವುದರಿಂದ ಸಾರಿಗೆ ನೌಕರರಿಗೆ ಆತಂಕ ಮತ್ತು ಗೊಂದಲ ಉಂಟಾಗಿ ಹತಾಶ ಭಾವನೆಗೆ ವ್ಯಕ್ತಪಡಿಸುತ್ತಿದ್ದಾರೆ.

ಆದ ಕಾರಣ, ದಯಮಾಡಿ ತಾವೂ ಕೂಡಲೇ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯ ಸಭೆ ಆಯೋಜಿಸಿ, ಸಾರಿಗೆ ನೌಕರರಿಗೆ ನೀಡಿರುವ ಪ್ರಣಾಳಿಕೆ ಭರವಸೆಯಂತೆ ಸರ್ಕಾರಿ ನೌಕರರಂತೆ ಸರಿಸಮಾನ ವೇತನ ಹಾಗೂ 38 ತಿಂಗಳ ಹಿಂಬಾಕಿ ಮತ್ತು ಇತರೆ ಮುಖ್ಯ ಬೇಡಿಕೆಗಳನ್ನು ಈಡೇರಿಸುವಂತೆ ಸಮಸ್ತ ಸಾರಿಗೆ ನೌಕರರ ಪರವಾಗಿ ವಿನಂತಿಸುತ್ತೇವೆ ಎಂದು ಕೂಟದ ಅಧ್ಯಕ್ಷ ಚಂದ್ರಶೇಖರ್‌ ಮನವಿ ಸಲ್ಲಿಸಿದ್ದಾರೆ.

Megha
the authorMegha

Leave a Reply

error: Content is protected !!