ಬೆಂಗಳೂರು: ಕಳೆದ 2020 ಜನವರಿ ಒಂದರಿಂದ 2023 ಫೆಬ್ರವರಿ 28ರ ನಡುವೆ ನಿವೃತ್ತರಾದ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ ಈವರೆಗೂ ವೇತನ ಹೆಚ್ಚಳದ ಹಿಂಬಾಕಿ ಕೊಡದೆ ಸಬೂಬು ಹೇಳಿಕೊಂಡು ಬರುತ್ತಿರುವ ಬಗ್ಗೆ ಕರಾರಸಾನಿಗಮಗಳ ನಿವೃತ್ತ ನೌಕರರ ಹಿತರಕ್ಷಣ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ಹಾಲಿ ಕರ್ತತ್ಯ ನಿರತ ನೌಕರರಿಗೆ 1.1.2020 ರಿಂದ ಜಾರಿಗೆ ಬಂದಿರುವ ವೇತನ ಪರಿಷ್ಕರಣೆಯ ಸೌಲಭ್ಯಗಳನ್ನು ನಿವೃತ್ತ ನೌಕರರಿಗೂ 1-1- 2020 ರಿಂದ ಪಿಕ್ಸೇಷನ್ ಮಾಡಿ, ಸೌಲಭ್ಯಗಳನ್ನು ವಿಸ್ತರಿಸುವ ಮತ್ತು ಹಿಂಬಾಕಿ ಹಣವನ್ನು ನೀಡುವ ಬಗ್ಗೆ 19-10-2023 ರಂದು ಒಂದು ದಿನದ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಅಂದು ಕೆಎಸ್‌ಆರ್‌ಟಿಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಧರಣಿ ಸ್ಥಳಕ್ಕೆ ಬಂದು ಬೇಡಿಕೆಯನ್ನು ಅತೀ ಶೀಘ್ರದಲ್ಲೇ ಆದೇಶ ಮಾಡಿ ಬಗೆಹರಿಸುವುದಾಗಿ ಭರವಸೆ ನೀಡಿ ಹೋದರು. ಅವರು ಕೊಟ್ಟ ಭರವಸೆ 4 ತಿಂಗಳು ಕಳೆದರೂ ಇನ್ನೂ ಈಡೇರಿಲ್ಲ. ಈ ಬಗ್ಗೆ ಹಲವು ಬಾರಿ ಸಚಿವರು ಮತ್ತು ವ್ಯವಸ್ಥಾಪಕ ನಿರ್ದೇಶಕರ ಸಮ್ಮುಖದಲ್ಲಿ ಚರ್ಚಿಸಿ ಕೂಡಲೇ ಆದೇಶ ಮಾಡುವಂತೆ ಒತ್ತಾಯಿಸಿದ್ದೆವು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಾರಿಗೆ ಸಚಿವರು ಈ ವಿಷಯದಲ್ಲಿ ಕೊಡಲೇ ತೀರ್ಮಾನ ತೆಗೆದುಕೊಳ್ಳುವ ಭರವಸೆ ನೀಡುತ್ತಲೇ ಇದ್ದು ಇದುವರೆವಗೂ ಯಾವುದೇ ಅಂತಿಮ ಆದೇಶ ಹೊರಡಿಸಿಲ್ಲ.
ಹೀಗಾಗಿ ನಿವೃತ್ತ ನೌಕರರಿಗೆ ವೇತನ ಪಿಕ್ಸೇಷನ್ ಮಾಡಿ ಅದರ ಆರ್ಥಿಕ ಸೌಲಭ್ಯ ಮತ್ತು ವೇತನ ಬಾಕಿ ನೀಡುವ ಬಗ್ಗೆ ಮುಂದಿನ ಚಳವಳಿಯನ್ನು ನಿರ್ಧಾರ ಮಾಡಲು ಪೂರ್ವಭಾವಿ ಸಭೆಯನ್ನು ಇದೇ ಜ. 17ರ ಬುಧುವಾರ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ, ವಿಲ್ಸನ್ ಗಾರ್ಡನ್ನಿನಲ್ಲಿರುವ ಕನ್ನಡ ಭವನದಲ್ಲಿ ಕರೆಯಲಾಗಿದೆ.
ನಿವೃತ್ತ ನೌಕರರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಈ ಸಭೆಯನ್ನು ಆಯೋಜನೆ ಮಾಡಲಾಗಿದ್ದು, ಪ್ರತಿ ವಿಭಾಗದಿಂದ ಆಯ್ದ ಪ್ರಮುಖರು ಭಾಗವಹಿಸ ಬೇಕು ಎಂದು ನಿವೃತ್ತ ನೌಕರರ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.