
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ ಚಾಲಕರನ್ನು ಕಾಯಂ (Permanent) ಮಾಡಿಸುತ್ತೇನೆ ಎಂದು ವ್ಯಕ್ತಿಯೊಬ್ಬ 1ಲಕ್ಷ ರೂಪಾಯಿವರೆಗೂ ಫೋನ್ ಪೇ ಮಾಡಿಸಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ರೀತಿ ನಂಬಿಸಿ ಹಂತಹಂತವಾಗಿ ಒಂದು ಲಕ್ಷ ರೂಪಾಯಿ ವರೆಗೂ ಫೋನ್ ಫೇ ಮಾಡಿಸಿಕೊಂಡಿರುವ ಈತ ಕೆಎಸ್‌ಆರ್‌ಟಿಸಿ ನಿಗಮದ ನೌಕರ ಎಂದು ಹೇಳಲಾಗುತ್ತಿದೆ. ಆದರೆ, ಹಣ ಕೊಟ್ಟಿರುವವರು ಈತನ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.
ಇನ್ನು ಈತ ಸಾರಿಗೆ ಸಂಸ್ಥೆಯ ಡ್ರೈವರ್‌ಗಳನ್ನು ಯಾವುದೇ ಚಾಲನಾ ಪರೀಕ್ಷೆ ಮಾಡದೆ ಹಾಗೂ ಯಾವುದೇ ನಿಯಮಗಳು ಇಲ್ಲದಂತೆ ಸಾರಿಗೆ ಸಂಸ್ಥೆಯಲ್ಲಿ ಕಾಯಂ (Permanent) ಮಾಡಿಸುತ್ತೇನೆ ಎಂದು ಕಳೆದ 2024ರ ಸೆಪ್ಟೆಂಬರ್‌ನಿಂದಲೂ ಹಂತಹಂತವಾಗಿ 1 ಲಕ್ಷ ರೂಪಾಯಿವರೆಗೆ ವಸೂಲಿ ಮಾಡಿದ್ದು, ಈತನ ಹಿಂದೆ ಯಾರೆಲ್ಲ ಇದ್ದಾರೆ ಎಂಬುದರ ಬಗ್ಗೆ ಸಂಸ್ಥೆಯಿಂದ ತನಿಖೆ ನಡೆಯಬೇಕಿದೆ.
ಅಲ್ಲದೆ ಈ ರೀತಿ ಸಂಸ್ಥೆಗೆ ಕೆಟ್ಟ ಹೆಸರು ಬರುವಂತೆ ಮಾಡುತ್ತಿರುವ ಈ ಆರೋಪಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಸಂಸ್ಥೆಗೆ ಯಾವುದೇ ರೀತಿಯ ಅಗೌರವ ಬರದಂತೆ ನೋಡಿಕೊಳ್ಳಬೇಕಿರುವುದು ಸಂಬಂಧಪಟ್ಟ ಕಾನೂನು ವಿಭಾಗದ ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ನೌಕರರು ಒತ್ತಾಯಿಸಿದ್ದಾರೆ.
ಇನ್ನು ಒಂದು ಮೂಲಗಳ ಪ್ರಕಾರ ಈ ವ್ಯಕ್ತಿಯು ಸಾರಿಗೆ ಸಂಸ್ಥೆಯಲ್ಲಿಯೇ ಕೆಲಸ ಮಾಡುತ್ತಿದ್ದಾನೆ ಎಂಬ ಮಾಹಿತಿ ಇದೆ. ಈತ ರಾಮನಗರ, ಮಂಡ್ಯ, ಬೆಂಗಳೂರು ಕೇಂದ್ರೀಯ ವಿಭಾಗ, ಚಿಕ್ಕಬಳ್ಳಾಪುರ, ತುಮಕೂರು ಕಡೆಯಲ್ಲೆಲ್ಲ ತನ್ನ ಈ ರೀತಿ ಜಾಲವನ್ನು ಹರಡಿದ್ದು ಹಣ ಲಪಟಾಯಿಸಿ ವಂಚಿಸುವುದೇ ಈತನ ಮುಖ್ಯ ಕಾಯಕವಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಲಂಚದ ಹಣವನ್ನು ಫೋನ್ ಪೇ ಮೂಲಕ ತೆಗೆದುಕೊಂಡಿರುವ ಹಾಗೂ ಹಣ ಕೊಟ್ಟಿರುವ ಬಗ್ಗೆ ದಾಖಲೆ ಸಹಿತ ಮತ್ತು ಆಡಿಯೋ ಕೂಡ ಇದೆ. ಈತ ಹಣವನ್ನು ಯಾವ ರೀತಿ ಕಬಳಿಸಲು ಸಂಚು ರೂಪಿಸಿದ್ದಾನೆ ಎಂಬುದರ ಬಗ್ಗೆ ಆಡಿಯೋ ಇದ್ದು, ನಾಗರಾಜು ಎಂಬ ಹೆಸರಿನ ಬ್ಯಾಂಕ್ ಖಾತೆಗೆ ಹಣವನ್ನು ಫೋನ್ ಪೇ ಮಾಡಿಸಿಕೊಂಡಿದ್ದಾನೆ.
ಈ ನಾಗರಾಜು ಎಂಬಾತ ಯಾರು? ಈತ ಸಾರಿಗೆಯ ಯಾವ ಡಿಪೋದಲ್ಲಿ ಕೆಲಸ ಮಾಡುತ್ತಿದ್ದಾನೆ? ಈತನ ಹಿನ್ನೆಲೆ ಏನು? ಸಾರಿಗೆ ಸಂಸ್ಥೆಯ ಅಧಿಕಾರಿಗಳು ಈತನೊಂದಿಗೆ ಕೈ ಜೋಡಿಸಿದ್ದಾರೆಯೇ? ಇಲ್ಲ ಈತನೊಬ್ಬನೆ ಈರೀತಿ ಮಾಡುತ್ತಿದ್ದಾನೆಯೇ ಎಂಬ ಬಗ್ಗೆ ಸಂಸ್ಥೆಯ ಹಾಗೂ ಪೊಲೀಸರ ತನಿಖೆಯಿಂದಷ್ಟೇ ತಿಳಿಯಬೇಕಿದೆ.
