ಬೆಂಗಳೂರು: ಸಾರಿಗೆ ನಿಗಮಗಳ ನೌಕರರಿಗೆ ವೇತನ ಹೆಚ್ಚಳ ಮಾಡಿ ಅಂದ್ರೆ, ಸರ್ಕಾರ ಅದನ್ನು ಬಿಟ್ಟು ಉಳಿದ ಎಲ್ಲವನ್ನೂ ಮಾಡ್ತಾ ಇದೆ. ನೌಕರರ ರಕ್ಷಣೆಯ ಬಗ್ಗೆ ಕಾಳಜಿ ಇರುವ ಸರ್ಕಾರಕ್ಕೆ ಅವರ ಕುಟುಂಬ ನಿರ್ವಹಣೆಗೆ, ಕುಟುಂಬ ರಕ್ಷಣೆಗೆ ಸರಿಯಾದ ವೇತನ ಕೊಡುವ ಯೋಚನೆ ಮತ್ತು ಯೋಜನೆಯನ್ನು ಏಕೆ ಮಾಡುತ್ತಿಲ್ಲ.
ಹೌದು! ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಸುರಕ್ಷತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ, ಮಹತ್ವದ ಕ್ರಮವಾಗಿ, ಸರ್ಕಾರ 347 ಬ್ರೆತ್ ಅನಲೈಸರ್ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಮೂಲಕ ಮದ್ಯಪಾನ ಮಾಡುವ ಬಸ್ ಚಾಲಕರ ಪತ್ತೆಗೆ ಮಹತ್ವದ ಕ್ರಮ ಕೈಗೊಂಡಿದೆ.
ಈ ಕುರಿತಂತೆ ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿ ಹೊರಡಿಸಿದ್ದು, ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಮಗ್ರ ಕ್ರಿಯಾ ಯೋಜನೆಯ ಕ್ರಮದನ್ವಯ 2.9 ಕೋಟಿ ರೂ. ವೆಚ್ಚದಲ್ಲಿ ಒಟ್ಟು 347 ಬ್ರೆತ್ ಅನಲೈಸರ್ ಗಳನ್ನು ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದಿದ್ದಾರೆ.
ಅಂದಹಾಗೇ 2.9 ಕೋಟಿ ರೂ. ವೆಚ್ಚದಲ್ಲಿ ಕೆಎಸ್ ಆರ್ ಟಿ ಸಿಗೆ 100, ಬಿಎಂಟಿಸಿ, ಕೆಕೆ ಆರ್ ಟಿಸಿ ಮತ್ತು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗಳಿಗೆ ತಲಾ 60 ಹಾಗೂ ಸಾರಿಗೆ ಇಲಾಖೆಗೆ 67 ಬ್ರೆತ್ ಅನಲೈಸರ್ ಗಳನ್ನು ಖರೀದಿಸಲು ಅನುಮತಿಸಿದೆ.
ಹೀಗೆ ಖರೀದಿಸುವುದರಿಂದ ಸಾರ್ವಜನಿಕರ ತೆರೆಹಣ ಪೋಲಾಗುತ್ತದೆಯೇ ಹೊರತು ಇದರಿಂದ ಯಾರಿಗೂ ಪ್ರಯೋಜನವಿಲ್ಲ. ಇಂಥ ನಿರ್ಧಾರಗಳನ್ನು ಏಕೆ ತೆಗೆದುಕೊಳ್ಳಲಾಗುತ್ತದೋ ಆ ದೇವರಿಗೆ ಗೊತ್ತು.
ಕಳೆದ 2020ರ ಜನವರಿಯಿಂದ ಸಾರಿಗೆ ನಿಗಮಗಳ ಅಧಿಕಾರಿಗಳು ನೌಕರರಿಗೆ ವೇತನ ಹೆಚ್ಚಳಮಾಡಬೇಕಗಿದ್ದು ಆ ಬಗ್ಗೆ ಈವರೆಗೂ ಚಕಾರವೆತ್ತುತ್ತಿಲ್ಲ. ಆದರೆ, ಜನರಿಗೆ ಉಚಿತ ಪ್ರಯಾಣ, ಹೀಗೆ ಬ್ರೆತ್ ಅನಲೈಸರ್ ಖರೀದಿ ಎಂಬ ಬೇಡದ ಕೆಲಸಗಳಿಗೆ ಸರ್ಕಾರ ಕೈಹಾಕಿ ಮಾಡಬೇಕಾದನ್ನು ಮರೆಯುತ್ತಿದೆ.
ಇನ್ನಾದರೂ ಈ ಸರ್ಕಾರ ಜನರಿಗೆ ಮತ್ತು ಸಂಸ್ಥೆಯ ನೌಕರರಿಗೆ ಒಳ್ಳೆಯದಾಗುವ ನಿಟ್ಟಿನಲ್ಲಿ ಕ್ರಮತೆಗೆದುಕೊಳ್ಳಬೇಕಿದೆ. ಅದನ್ನು ಬಿಟ್ಟು ಈ ರೀತಿಯ ನಿರ್ಧಾರದಿಂದ ಯಾರದೋ ಜೇಬು ತುಂಬುತದೆಯೇ ಹೊರತು ನೌಕರರ ತುತ್ತಿನ ಚೀಲ ತುಂಬುವುದಿಲ್ಲ ಅಲ್ವೇ?
ಇನ್ನು ಒಂದು ಬ್ರೆತ್ ಅನಲೈಸರ್ (Alcohol Breath Analyzer) ಬೆಲೆ 60 ಸಾವಿರ ರೂಪಾಯಿ ಎಂದು ತಿಳಿದು ಬಂದಿದೆ. ಆದರೆ ಇಷ್ಟು ಹಣಕೊಟ್ಟು ಎಷ್ಟು ಖರೀದಿಸುವ ಈ ಬ್ರೆತ್ ಅನಲೈಸರ್ ನಿಂದ ಎಷ್ಟು ಮಂದಿಯ ತಪಾಸಣೆಯನ್ನು ನಿತ್ಯ ಮಾಡಲಾಗುತ್ತದೋ ಗೊತ್ತಿಲ್ಲ.
ಜತೆಗೆ ಆ ತಪಾಸಣೆ ಮಾಡುವವರು ಯಾರು ಅದಕ್ಕೂ ಹೊಸದಾಗಿ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಎತ್ತು ಈಯಿತು ಅಂದರೆ ಕೊಟ್ಟಿಗೆಗೆ ಕಟ್ಟು ಎಂಬಂತೆ ಸರ್ಕಾರದ ಈ ರೀತಿಯ ನಡೆ ನಿಜಕ್ಕೂ ಬೇಸರದ ಸಂಗತಿಯೇ ಆಗಿದೆ.