KSRTC: ₹30 ಸಾವಿರ ಲಂಚ ಪಡೆದ ಬಳಿಕ ಗುತ್ತಿಗೆ ಚಾಲಕರ ನೇಮಕ – 11 ತಿಂಗಳ ಬಳಿಕ ₹30 ಸಾವಿರದಿಂದ ₹18 ಸಾವಿರಕ್ಕೆ ಇಳಿದ ವೇತನ!!?
ತುಮಕೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿರುವ ಚಾಲಕರಿಂದ ತಲಾ 30 ಸಾವಿರ ರೂಪಾಯಿ ಲಂಚ ತೆಗೆದುಕೊಂಡು ನೇಮಕ ಮಾಡಿಕೊಳ್ಳಲಾಗಿದೆ ಎಂದು ಸ್ವತಃ ಚಾಲಕರೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ.
ಇನ್ನು ಈ ಚಾಲಕರಿಂದ ಯಾರು ಲಂಚ ಪಡೆದುಕೊಂಡಿದ್ದಾರೆ ಎಂಬುವುದನ್ನು ಮಾತ್ರ ಸ್ಪಷ್ಟವಾಗಿ ಹೇಳುತ್ತಿಲ್ಲ. ಆದರೆ ಯಾರೆ ಲಂಚ ಪಡೆದುಕೊಂಡಿದ್ದರು ಅದು ವಿಭಾಗ ಮಟ್ಟದ ಅಧಿಕಾರಿಗಳ ಜೇಬು ಸೇರಿದೆ ಎಂಬುವುದು ಮಾತ್ರ ಖಾತರಿಯಾಗಿದೆ.
ಇನ್ನು ಈ ರೀತಿ ಲಂಚ ಪಡೆದು ಖಾಸಗಿಯಾಗಿ ಚಾಲಕರನ್ನು ಏಜೆನ್ಸಿ ಮೂಲಕ ನೇಮಿಸಿಕೊಂಡಿರುವ ಸಂಸ್ಥೆಯಲ್ಲಿ ಈ ಚಾಲಕರಿಗೆ ಹೇಳಿದಂತ ವೇತನ, ಒಟಿ ಹಣ ಜತೆಗೆ ಪ್ರಮುಖವಾಗಿ ರಜೆಯನ್ನು ಕೊಡುತ್ತಿಲ್ಲ. ಈ ಎಲ್ಲದರ ನಡುವೆ ದಂಡ ಪ್ರಯೋಗ ಕೂಡ ಮಾಡುತ್ತಿದ್ದು, ಚಾಲಕರ ಸ್ಥಿತಿ ಈಗ ಹೇಳತೀರದ ಮಟ್ಟಕ್ಕೆ ಬಂದು ನಿಂತಿದೆ.
ಅಲ್ಲದೆ ನಮ್ಮಿಂದ ನಾವು ಕೆಲಸಕ್ಕೆ ಸೇರಿದ ವೇಳೆ 30 ಸಾವಿರ ರೂಪಾಯಿ ಲಂಚ ಪಡೆದುಕೊಂಡಾಗ ಇದು ನಿಮ್ಮ ಭದ್ರತೆಗೆ ಎಂದು ಹೇಳಿದ್ದರು. ಬಳಿಕ ಈ 30 ಸಾವಿರದಲ್ಲಿ ನೀವು ಬಿಟ್ಟು ಹೋಗುವಾಗ 10 ಸಾವಿರ ರೂಪಾಯಿ ವಾಪಸ್ ಕೊಡುತ್ತೇವೆ ಎಂದು ಹೇಳಿದ್ದರು. ಆದರೆ ಈಗ ನಾವು ನಿಮಗೆ ಯಾವುದೇ ಹಣ ಕೊಡುವುದಿಲ್ಲ ಎನ್ನುತ್ತಿದ್ದಾರೆ ಎಂದು ಚಾಲಕರು ಕಿಡಿಕಾರಿದ್ದಾರೆ.
ನಮಗೆ ಕೊಡುವ ಬಸ್‌ಗಳು ಹಳೆಯದಾಗಿದ್ದು ಅವುಗಳು ಸುಸ್ಥಿತಿಯಲ್ಲಿ ಇಲ್ಲ. ನಾವು ಬ್ರೇಕ್ ಹಾಕಿದರೆ ಅದು ಎಡಗಡೆ ಇಲ್ಲ ಬಲಗಡೆಗೋ ಎಳೇದುಕೊಂಡು ಹೋಗುತ್ತದೆ. ಇನ್ನು ಕೆಲ ಬಸ್‌ಗಳು ನಾವು ಬ್ರೇಕ್ ಹಾಕಿದ ಮೇಲೆ ಸುಮಾರು ದೂರ ಹೋಗಿ ನಿಲ್ಲುತ್ತಿವೆ. ಈ ವೇಳೆ ಏನಾದರೂ ಅಪಘಾತ ಸಂಭವಿಸಿದರೆ ನಮ್ಮ ಕುಟುಂಬಕ್ಕೆ ಯಾವುದೇ ಆರ್ಥಿಕ ಭದ್ರತೆ ಇಲ್ಲ ಎಂದು ನಿಗಮದ ಅಧಿಕಾರಿಗಳೇ ಹೇಳುತ್ತಾರೆ.
ಇನ್ನು ಹಳೇ ಬಸ್ ಇದು ಸುಸ್ಥಿತಿಯಲ್ಲಿ ಇಲ್ಲ ರೆಡಿ ಮಾಡಿಕೊಡಿ ಎಂದು ಕೇಳಿದರೆ ನಮ್ಮ ನಿಗಮದ ಚಾಲಕರು ಓಡಿಸುತ್ತಿದ್ದಾರೆ. ಅವರು ಯಾವುದೆ ದೂರು ಹೇಳುವುದಿಲ್ಲ. ಆದರೆ ನೀವು ಸರಿಯಿಲ್ಲ ಎಂದು ಹೇಳುತ್ತೀರಿ. ಇರೋದೆ ಇದು ತೆಗೆದುಕೊಂಡು ಹೋಗಿ ಎನ್ನುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಎಲ್ಲವನ್ನು ಗಮನಿಸಿದರೆ ದಿನದಿಂದ ದಿನಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ ಚಾಲಕರ ಸಮಸ್ಯೆ ಬಿಗಡಾಯಿಸುತ್ತಿದೆ. ಹೀಗಾಗಿ ಸೂಕ್ತ ಪರಿಹಾರಕ್ಕಾಗಿ ತುಮಕೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿ ಬಳಿ ನಿನ್ನೆ ಅಂದರೆ ನ.15ರಂದು ಬೆಳಗ್ಗೆ 7ಗಂಟೆಯಿಂದ 10ಗಂಟೆ ವರೆಗೂ ಪ್ರತಿಭಟನೆ ಮಾಡಿದ್ದರು.
ಆದರೆ, ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳಿಂದ ಸಮಂಜಸವಾದ ಯಾವುದೆ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ನಾವು ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ್ ಅವರನ್ನು ಭೇಟಿ ಮಾಡುವುದಕ್ಕೆ ಮನೆ ಬಳಿ ಬಂದಿದ್ದೇವೆ. ಅವರು ಏನು ಹೇಳುತ್ತಾರೋ ಕೇಳಿದ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಚಾಲಕರು ತಿಳಿಸಿದರು.
ಇನ್ನು ನಿಗಮದಲ್ಲಿ ನಾವು ಹೊಸದಾಗಿ ಕೆಲಸಕ್ಕೆ ಸೇರಿದಾಗ 28ರಿಂದ30 ಸಾವಿರ ರೂಪಾಯಿವರೆಗೂ ವೇತನ ಪಡೆಯುತ್ತಿದ್ದೆವು. ಇಂದು ಅದೇ ರೀತಿ ಕೆಲಸ ಮಾಡುತ್ತಿದ್ದರೂ ನಮಗೆ 18ರಿಂದ 22 ಸಾವಿರ ರೂಪಾಯಿವರೆಗಷ್ಟೇ ವೇತನ ಕೊಡುತ್ತಿದ್ದಾರೆ. ಕೇಳಿದರೆ ಆ ದಂಡ ಈ ದಂಡ ಎಂದು ಸಬೂಬು ಹೇಳುತ್ತಿದ್ದಾರೆ. ಈ ರೀತಿ ಮಾಡಿದರೆ ನಮ್ಮ ಕುಟುಂಬವನ್ನು ಸಾಕುವುದು ಹೇಗೆ ಎಂದು ಚಾಲಕರು ಕೇಳುತ್ತಿದ್ದಾರೆ.
ಅಲ್ಲದೆ ನಮಗೆ ವೇತನ ಹೆಚ್ಚಳವಾಗಬೇಕು ಆದರೆ ಇಲ್ಲಿ 10ರಿಂದ 12 ಸಾವಿರ ರೂಪಾಯಿ ವರೆಗೂ ಕಡಿಮೆ ಆಗಿದೆ. ನಾವು ತುಮಕೂರು ವಿಭಾಗದಲ್ಲಿ 300 ಮಂದಿ ಚಾಲಕರಿದ್ದೇವೆ. ಅದೇರೀತಿ ನಿಗಮದಲ್ಲಿ 2500ರಿಂದ 3ಸಾವಿರ ಗುತ್ತಿಗೆ ಚಾಲಕರು ಇದ್ದೇವೆ ಎಂದು ತಿಳಿಸಿದರು.