ಚಿಕ್ಕಮಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕಮಗಳೂರು ವಿಭಾಗದ ಕಡೂರು ಘಟಕದಲ್ಲಿ ಅಧಿಕಾರಿಗಳು ತಮಗಿಷ್ಟ ಬಂದಂತೆ ಫಾರಂ-4 ಬದಲಾಯಿಸಿ ನೌಕರರಿಗೆ ಕಳೆದ 2017ರಿಂದ ಈವರೆಗೂ ಸರಿಯಾಗಿ ಓಟಿ ಕೊಡದೆ ಸುಮಾರು 12 ಕೋಟಿ ರೂ.ಗಳನ್ನು ನಷ್ಟಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕಳೆದ 2017ಕ್ಕೂ ಹಿಂದೆ ನೌಕರರಿಗೆ ಡ್ಯೂಟಿ ಮತ್ತು ಓವರ್ ಟೈಮ್ ಡ್ಯೂಟಿಗೆ ತಕ್ಕ ಓಟಿ ಕೊಡುತ್ತಿದ್ದರು. ಆದರೆ 2017 ಮತ್ತು ನಂತರ ಬಂದ ಅಧಿಕಾರಿಗಳು ಮನಬಂದಂತೆ ಫಾರಂ-4 ಬದಲಾಯಿಸಿ ಈ ಹಿಂದೆ ಇದ್ದ 4ರಿಂದ 5 ಗಂಟೆ ಓಟಿಯನ್ನು ಕೇವಲ 1.30 ಗಂಟೆಗೆ ಬದಲಾಯಿಸಿ ಚಾಲನಾ ಸಿಬ್ಬಂದಿಗಳ ಶ್ರಮಕ್ಕೆ ತಕ್ಕ ಓಟಿ ಕೊಡದೆ ಕಾಡುತ್ತಿದ್ದಾರೆ.
ಇನ್ನು ಈ ಅಧಿಕಾರಿಗಳ ದರ್ಪಕ್ಕೆ ನೌಕರರು ಅಮಾನತಿಗೂ ಒಳಗಾಗುತ್ತಿದ್ದಾರೆ. ನಾವು ಮಾಡಿದ್ದೇ ರೂಲ್ಸ್ ಅದನ್ನು ನೀನು ಪಾಲಿಸಬೇಕು ಅಷ್ಟೆ ಎಂದು ನೌಕರರಿಗೆ ತಾಕೀತು ಮಾಡುವ ಮೂಲಕ ಸರ್ವಾಧಿಕಾರಿಗಳಾಗಿ ವರ್ತಿಸುತ್ತಿದ್ದಾರೆ ಇಲ್ಲಿನ ಅಧಿಕಾರಿಗಳು. ಇನ್ನು ಸಾರಿಗೆ ನಿಗಮಗಳಲ್ಲಿ ಓವರ್ ಟೈಂ ಕೆಲಸಕ್ಕೆ ಅಂದರೆ ಎಂಟು ಗಂಟೆ ಕರ್ತವ್ಯದ ಬಳಿಕ ಮಾಡುವ ಹೆಚ್ಚುವರಿ ಕೆಲಸಕ್ಕೆ ಒಂದೂವರೆ ಪಟ್ಟು ಹೆಚ್ಚುವರಿ ವೇತನ ಕೊಡಬೇಕು ಎಂದು ಕಾರ್ಮಿಕ ನಿಯಮ ಹೇಳುತ್ತದೆ. ಆದರೆ, ಆ ರೀತಿ ಮಾಡದೆ 4-5 ಗಂಟೆ ಮಾಡಿದರೂ ಬಿಡಿಗಾಸುಕೊಟ್ಟು ನೌಕರರನ್ನು ಯಾಮಾರಿಸುತ್ತಿದ್ದಾರೆ.
ಇದನ್ನು ಕೇಳಬೇಕಾದ ಸಂಘಟನೆಗಳ ಮುಖಂಡರು ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಕಳೆದ 30-40 ದಶಕಗಳಿಂದ ಚಾಲನಾ ಸಿಬ್ಬಂದಿಗಳಿಗೆ ನಷ್ಟವಾಗುತ್ತಿದ್ದರೂ ಸುಮ್ಮನಿದ್ದಾರೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಾರಿಗೆ ನೌಕರರ ಪರ ಇರುವ ಹಳೆಯ ಮತ್ತು ಹೊಸ ಸಂಘಟನೆಗಳ ಜವಾಬ್ದಾರಿ ಏನು? ಎಂಬುವುದೆ ಗೊತ್ತಾಗುತ್ತಿಲ್ಲ.
ಇನ್ನು ಕಡೂರು ಘಟಕದ ವಿಷಯಕ್ಕೆ ಬಂದರೆ, ಇಲ್ಲಿ 60 ರಿಂದ 70 ಅನುಸೂಚಿಗಳಿದ್ದು, ಈ ರೂಟ್ಗಳಲ್ಲಿ ಬಹುತೇಕ ಎಲ್ಲ BAR ಡ್ಯೂಟಿಗಳಾಗಿದ್ದು ಬೆಳಗ್ಗೆ 7ಗಂಟೆಗೆ ಡ್ಯೂಟಿ ಪ್ರಾರಂಭವಾದರೆ ನಾಳೆ ರಾತ್ರಿ 7.30ಕ್ಕೆ ಮುಗಿಯುತ್ತವೆ. ಅಂದರೆ ಕರ್ತವ್ಯದ ಅವಧಿ 34ರಿಂದ 35 ಗಂಟೆಗಳಿವೆ.ಈ 34ರಿಂದ 35 ಗಂಟೆಗಳು ಬಸ್ನಲ್ಲೇ ನೌಕರರು ಕಳೆಯುತ್ತಿದ್ದಾರೆ.
ಈದರಿಂದ ನೌಕರರಿಗೆ ಕುಟುಂಬದವರ ಜತೆಗೆ ಇರುವುದಕ್ಕೂ ಸಮಯ ಸಿಗುತ್ತಿಲ್ಲ. ಇನ್ನು ರಾತ್ರಿ ಬಸ್ನಲ್ಲೇ ಮಲಗಬೇಕು. ಆದರೆ, ಈ 34ರಿಂದ 35 ಗಂಟೆಗಳು ಬಸ್ನಲ್ಲೇ ಇದ್ದರೂ ಮೊದಲದಿನ 8 ಗಂಟೆ ಮತ್ತು ಎರಡನೇ ದಿನ 8 ಗಂಟೆ ಮತ್ತು ರಾತ್ರಿ ಮಲಗಲಿಕ್ಕೆ 8 ಗಂಟೆ ಎಂದು ಒಟ್ಟಾರೆ 24ಗಂಟೆ ತೆಗೆದರು ಹಾಕಿದರು, ಉಳಿದ ಇನ್ನೂ 10ರಿಂದ 11 ಗಂಟೆ ಹೆಚ್ಚುವರಿಯಾಗಿ ನೌಕರರು ಡ್ಯೂಟಿ ಮಾಡುತ್ತಿದ್ದಾರೆ.
ಅಂದರೆ 10ರಿಂದ 11 ಗಂಟೆಗಳು ಓಟಿ ಮಾಡುತ್ತಿದ್ದರೂ ನೌಕರರಿಗೆ ಕೇವಲ 1.30ಗಂಟೆಯಿಂದ 2ಗಂಟೆಯಷ್ಟೇ ಓಟಿ ಲೆಕ್ಕ ತೆಗೆದುಕೊಳ್ಳುತ್ತಿದ್ದಾರೆ. ಇದನ್ನು ಗಮನಿಸಿದರೆ ಮೊದಲದಿನ 13ಗಂಟೆಗಳು ನಿರಂತರವಾಗಿ ಮತ್ತು ಮಾರನೆಯ ದಿನವೂ ಕೂಡ 13ಗಂಟೆಗಳು ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಸರಿಯಾದ ಓಟಿ ಕೊಡದೆ ಅಧಿಕಾರಿಗಳು ನೌಕರರಿಂದ ಬಿಟ್ಟಿಯಾಗಿ ದುಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪವಿದೆ.
ಅಂದರೆ 9ರಿಂದ 9.30ಗಂಟೆಗಳು ಫ್ರೀಯಾಗಿ ನೌಕರರು ದುಡಿಯುತ್ತಿದ್ದಾರೆ. ಆದರೂ ಎಸಿ, ಫ್ಯಾನ್ ಕೆಳಗೆ ಕುಳಿತು ಫಾರಂ-4ಅನ್ನು ತಮಗಿಷ್ಟ ಬಂದರೀತಿ ಬದಲಾಯಿಸಿ ಈ ರೀತಿ ಕಷ್ಟಪಟ್ಟು ದುಡಿಯುತ್ತಿರುವ ನೌಕರರಿಗೆ ಅವರು ಮಾಡಿದ ಹೆಚ್ಚುವರಿ ಕೆಲಸಕ್ಕೆ ತಕ್ಕ ಓಟಿಯನ್ನು ಕೊಡದೆ ದರ್ಪಮೆರೆಯುತ್ತಿದ್ದಾರೆ ಎಂದರೆ ಇವರಿಗೆ ನಾಚಿಕೆಯಾಗಬೇಕು.
ಇನ್ನು ಖಾಸಗಿ ಕಂಪನಿಗಳಲ್ಲಿ ಡ್ಯೂಟಿ ಟೈಂ ಮಗಿದ ಮೇಲೆ 2ಗಂಟೆ ಓಟಿ ಮಾಡಿದರೆ ವೇತನದ ಒಂದೂವರೆ ಪಟ್ಟು ಹೆಚ್ಚು ವೇತನ ಕೊಡುತ್ತಿರುವುದು ಈ ಅಧಿಕಾರಿಗಳಿಗೆ ಗೊತ್ತಿಲ್ಲವೇ? ಅಥವಾ ಕಾರ್ಮಿಕ ನಿಯಮ ಸಾರಿಗೆ ಸಂಸ್ಥೆಯಲ್ಲಿ ಅನ್ವಯವಾಗುವುದಿಲ್ಲವೇ ಎಂಬ ಪ್ರಶ್ನೆ ಮೂಡುತ್ತಿದೆ.
ಅಧಿಕಾರಿಗಳು ನೌಕರರ ವಿಷಯದಲ್ಲಿ ಅತಿ ಬುದ್ಧಿವಂತರ ರೀತಿ ನಡೆದುಕೊಳ್ಳುವ ಮೂಲಕ ಕಷ್ಟಪಟ್ಟು ದುಡಿಯುತ್ತಿರುವ ನೌಕರರಿಗೆ ಅವರ ಶ್ರಮಕ್ಕೆ ಸಿಗಬೇಕಾದ ಫಲವನ್ನು ಕಸಿದುಕೊಳ್ಳುವುದು ಯಾವ ನ್ಯಾಯ? ಇನ್ನಾದರೂ ಕನಿಷ್ಠಪಕ್ಷ ಅವರ ಶ್ರಮಕ್ಕೆ ತಕ್ಕ ಓಟಿಯನ್ನು ಕೊಡಬೇಕಿದೆ.
ಇನ್ನು ಪ್ರಮುಖವಾಗಿ ಕಡೂರು ಡಿಪೋನಲ್ಲೇ 304 ಕಿಮೀಗೆ 2.15ಗಂಟೆ ಓಟಿ ಕೊಡುತ್ತಿದ್ದು, ಅದೇ ಡಿಪೋನಲ್ಲ 610 ಮತ್ತು 600 ಕಿಮಿಗೆ ಕೇವಲ 1.45ಗಂಟೆ ಮತ್ತು 1.30ಗಂಟೆ ಓಟಿ ಕೊಡುತ್ತಿದ್ದಾರೆ. ಈ ರೀತಿ ತಾರತಮ್ಯತೆಯನ್ನು ಅಧಿಕಾರಿಗಳು ಏಕೆ ಮಾಡುತ್ತಿದ್ದಾರೆ ಎಂಬುವುದೇ ಗೊತ್ತಿಲ್ಲ. ಆದರೆ, ಇಲ್ಲಿ ಅಧಿಕಾರಿಗಳು ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದಾರೆ ಎಂಬುದಕ್ಕೆ ಇದೇ ತಾಜಾ ನಿದರ್ಶನವಾಗಿದೆ. ಇದು ಮೊದಲು ನಿಲ್ಲಬೇಕು ನೌಕರರ ಹೆಚ್ಚುವರಿ ಕೆಲಸಕ್ಕೆ ತಕ್ಕ ಓಟಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ.