ಅಧಿಕೃತವಾಗಿ ರಸ್ತೆಗಿಳಿದ KSRTC ನಮ್ಮ ಕಾರ್ಗೋ ಟ್ರಕ್‌ಗಳು : ವರ್ಷದೊಳಗೆ 500 ಟ್ರಕ್‌ಗಳ ಸೇರ್ಪಡೆ ಎಂದ ಸಚಿವರು
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ನೂತನವಾಗಿ ಪ್ರಾರಂಭ ಮಾಡಿರುವ ನಮ್ಮ ಕಾರ್ಗೋ- “ಟ್ರಕ್ ಸೇವೆ“ ಯೋಜನೆಗೆ ಶನಿವಾರ ಚಾಲನೆ ನೀಡುವ ಮೂಲಕ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ 20 ನೂತನ ಟ್ರಕ್‌ಗಳಿಗೆ ಹಸಿರು ನಿಶಾನೆ ತೋರಿಸಿ ಅಧಿಕೃತವಾಗಿ ರಸ್ತೆಗಿಳಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಮುಂದಿನ ಒಂದು ತಿಂಗಳಿನಲ್ಲಿ 100 ಟ್ರಕ್‌ಗಳನ್ನು, ಒಂದು ವರ್ಷದೊಳಗಾಗಿ 500 ಟ್ರಕ್‌ಗಳನ್ನು ಸೇರ್ಪಡೆ ಮಾಡಲಾಗುವುದು ಮತ್ತು ಪ್ರಸಕ್ತ ಪೀಣ್ಯದಲ್ಲಿರುವ ನಿಗಮದ ಬಸವೇಶ್ವರ ಬಸ್ ನಿಲ್ದಾಣವನ್ನು ಈ ನಮ್ಮಕಾರ್ಗೋ ಟ್ರಕ್ ಟರ್ಮಿನಲ್ ಆಗಿ ಪರಿವರ್ತನೆ ಮಾಡಲಾಗುವುದು ಎಂದು ತಿಳಿಸಿದರು.
ಇನ್ನು ಇದನ್ನು ಕಾರ್ಯಾಚರಣೆ ಹಾಗೂ ನಿರ್ವಹಣೆಗಾಗಿ ಘಟಕವನ್ನಾಗಿ ಬಳಸಿ ಬಸ್ ನಿಲ್ದಾಣದಲ್ಲಿರುವ ಸ್ಥಳವನ್ನು ಸರ್ಕಾರಿ ಸಂಸ್ಥೆಗಳಿಗೆ ನೀಡಿ ವಾಣಿಜ್ಯ ಉಪಯೋಗಕ್ಕಾಗಿ ಬಳಸಲು ಉದ್ದೇಶಿಸಲಾಗಿದೆ ಎಂದ ಅವರು, ಟ್ರಕ್ ಸೇವೆಯು ಬೆಂಗಳೂರು, ಮೈಸೂರು, ತುಮಕೂರು, ಹಾಸನ, ಮಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಕೋಲಾರ, ದಾವಣಗೆರೆಯಿಂದ ಕರ್ನಾಟಕ ರಾಜ್ಯದ ವಿವಿಧ ಸ್ಥಳಗಳಿಗೆ ಲಭ್ಯವಿರಲಿದೆ ಎಂದು ಹೇಳಿದರು.
ಕೆಎಸ್‌ಆರ್‌ಟಿಸಿ 2021 ರಲ್ಲಿಯೇ ಸರಕುಗಳನ್ನು ಸಾಗಿಸಲು ಬಸ್‌ಗಳನ್ನು ಬಳಸಲು ಪ್ರಾರಂಭಿಸಿತು. ಇದೀಗ ಸಾರಿಗೆ ಸಂಸ್ಥೆ ಹೆಚ್ಚು ಭಾರವಾದ ಸರಕುಗಳನ್ನು ಸಾಗಿಸಲು ಟ್ರಕ್‌ಗಳನ್ನು ಬಳಸಲು ಪ್ರಾರಂಭಿಸಿದೆ. ಈ ಆರು ಚಕ್ರಗಳ ಟ್ರಕ್ನಲ್ಲಿ 6 ಟನ್ ಸರಕುಗಳನ್ನು ಸಾಗಿಸಬಹುದಾಗಿದೆ ಎಂದು ತಿಳಿಸಿದರು.
ನಿಗಮವು ಗ್ರಾಹಕರ ಅಗತ್ಯತೆಗನುಗುಣವಾಗಿ ಟ್ರಕ್ ಸೇವೆ ಒದಗಿಸಲಿದ್ದು, ಆಸಕ್ತ ಗ್ರಾಹಕರು ತಮ್ಮ ಅಗತ್ಯತೆಗಳ ಮಾಹಿತಿ / ವಿವರಗಳನ್ನು ಒದಗಿಸುವಂತೆ ಕೋರಿದರು. ಹೆಚ್ಚಿನ ಮಾಹಿತಿಗಾಗಿ : ಕಾಲ್ ಸೆಂಟರ್ ಸಂಖ್ಯೆ – 080-26252625
ಇ-ಮೇಲ್ ವಿಳಾಸ – [email protected] ಅನ್ನು ಸಂಪರ್ಕಿಸಲು ತಿಳಿಸಿದರು.
ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್, ನಿರ್ದೇಶಕರು (ಸಿಬ್ಬಂದಿ ಮಾತ್ತು ಜಾಗೃತೆ) ಡಾ. ನಂದಿನಿ ದೇವಿ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.