NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಏಪ್ರಿಲ್‌-ಜೂನ್‌ ಪೀಕ್‌ ಸೀಸನ್‌ ಎಂದು ಚಾಲನಾ ಸಿಬ್ಬಂದಿಗಳಿಗೆ ರಜೆ ಕೊಡದೆ ಹಿಂಸಿಸುತ್ತಿರುವ ಅಧಿಕಾರಿಗಳು..!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿಗಳು ವಾರದ ರಜೆ ಸೇರಿ ತುರ್ತು ಸಂದರ್ಭಗಳಲ್ಲೂ ರಜೆ ಸಿಗದೆ ಪರದಾಡುತ್ತಿದ್ದಾರೆ.

ವಿಶೇಷವಾಗಿ ಚಾಲನಾ ಸಿಬ್ಬಂದಿಗಳಿಗೆ ಇದೇ ಏಪ್ರಿಲ್‌ನಿಂದ ಜೂನ್‌ ಅವರೆಗೂ ಕೆಲಸದ ಒತ್ತಡ ಹೆಚ್ಚಾಗುತ್ತಿದ್ದು, ಇವರು ತಮ್ಮ ಮನೆಯಲ್ಲೇ ನಡೆಯುವ ವಿಶೇಷ ಸಮಾರಂಭಗಳಲ್ಲೂ ಭಾಗವಹಿಸಲಾಗದ ಸ್ಥಿತಿ ಮುಖ್ಯ ಸಂಚಾರ ವ್ಯವಸ್ಥಾಪಕರು ಹೊರಡಿಸಿರುವ ಆ ಒಂದು ಆದೇಶದಿಂದ ಉದ್ಬವವಾಗಿದೆ.

ಮುಖ್ಯ ಸಂಚಾರ ವ್ಯವಸ್ಥಾಪಕರು ಹೊರಡಿಸಿರುವ ಆದೇಶವನ್ನೇ ನೌಕರರ ಮೇಲೆ ಅಸ್ತ್ರವಾಗಿ ಪ್ರಯೋಗಿಸುತ್ತಿರುವ ಬಹುತೇಕ ಎಲ್ಲ ಡಿಪೋಗಳ ಅಧಿಕಾರಿಗಳು ಚಾಲನಾ ಸಿಬ್ಬಂದಿಗಳಿಗೆ ವಾರದ ರಜೆಯಲ್ಲೂ ಕೆಲಸ ಮಾಡುವಂತೆ ಒತ್ತಡ ಹೆರುತ್ತಿದ್ದಾರೆ. ಇನ್ನು ತಮ್ಮದೆ ಮನೆಯಲ್ಲಿ ನಡೆಯುವ ವಿಶೇಷ ಸಮಾರಂಭಗಳಿಗೂ ರಜೆ ಕೊಡುತ್ತಿಲ್ಲ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ನಾವು ಸಂಸ್ಥೆಯಲ್ಲಿ ದುಡಿಯುತ್ತಿರುವುದು ಏತಕ್ಕೆ? ನಮ್ಮ ಕುಟುಂಬದವರೊಂದಿಗೆ ವಿಶೇಷ ದಿನಗಳಲ್ಲೂ ಇರುವುದಕ್ಕೆ ಆಗುತ್ತಿಲ್ಲ ಎಂದರೆ, ಆನಾರೋಗ್ಯಕ್ಕೆ ಒಳಗಾಗಿರುವ ಸಂಬಂಧಿಕರನ್ನು ನೋಡಲಾಗುತ್ತಿಲ್ಲ ಎಂದರೆ ಈ ಕೆಲಸ ಮಾಡಿಯಾದರೂ ಪ್ರಯೋಜನವೇನು ಎಂದು ಅಳಲು ತೋಡಿಕೊಂಡಿದ್ದಾರೆ.

ಮುಖ್ಯ ಸಂಚಾರ ವ್ಯವಸ್ಥಾಪಕರ ಆದೇಶದಲ್ಲೇನಿದೆ? : ಏಪ್ರಿಲ್‌ನಿಂದ ಜೂನ್ ತಿಂಗಳುಗಳು ಪೀಕ್‌ಸೀಸನ್‌ ಆಗಿದ್ದು ಈ ಅವಧಿಯಲ್ಲಿ ಮದುವೆ, ಗೃಹಪ್ರವೇಶ ಇತ್ಯಾದಿ ವಿಶೇಷ ಕಾರ್ಯಕ್ರಮಗಳ ಪ್ರಯುಕ್ತ ಜನ ಸಂಚಾರ ಹೆಚ್ಚಾಗಿರುವುದರಿಂದ ನಿಗಮದ ಬಸ್‌ಗಳಲ್ಲಿ ಹೆಚ್ಚು ಪ್ರಯಾಣಿಕರು ಓಡಾಡುತ್ತಾರೆ.

ಹೀಗಾಗಿ ಈ ಅವಧಿಯಲ್ಲಿ ಬಸ್‌ಗಳನ್ನು ಯೋಜನಾಬದ್ಧವಾಗಿ ಆಚರಣೆ ಮಾಡಿ ನಿಗಮದ ಆದಾಯವನ್ನು ಹೆಚ್ಚಿಸಲು ಉಲ್ಲೇಖಿತ ಸುತ್ತೋಲೆಯಲ್ಲಿ ನೀಡಿರುವ ಅಂಶಗಳ ಬಗ್ಗೆ ಕ್ರಮ ಕೈಗೊಳ್ಳುವುದಲ್ಲದೇ ಕೆಲ ಪ್ರಮುಖ ಕ್ರಮವನ್ನು ತೆಗೆದುಕೊಳ್ಳಬೇಕು.

ಹಾಲಿ ಆಚರಣೆಯಲ್ಲಿ ಇರುವ ಎಲ್ಲ ಅನುಸೂಚಿಗಳನ್ನು ಯಾವುದೇ ಕಾರಣಕ್ಕೂ ರದ್ದುಗೊಳಿಸದೆ ಯೋಜನಾಬದ್ಧವಾಗಿ ಆಚರಣೆ ಮಾಡುವುದು ಹಾಗೂ ಕಿಮೀ ರದ್ದತಿಯನ್ನು ನಿಯಂತ್ರಣಗೊಳಿಸುವುದು ಮತ್ತು ಯಾವುದೇ ಯೋಜನೆ ರದ್ದು ಮಾಡದಂತೆ ಕ್ರಮ ಕೈಗೊಳ್ಳುವುದು.

ಇದರ ಜತೆಗೆ ಮುಂಗಡ ಟಿಕೆಟ್‌ ಬುಕಿಂಗ್ ಹೆಚ್ಚಾಗುವಂತೆ ನೋಡಿಕೊಂಡು ಆದಾಯವನ್ನು ಹೆಚ್ಚಿಸುವುದು ಮತ್ತು ಹೆಚ್ಚು ಸಾರಿಗೆ ಮುಂಗಡ ಬುಕಿಂಗ್‌ಅನ್ನು ವ್ಯವಸ್ಥೆಯಲ್ಲಿ ಅಳವಡಿಸುವುದು.

ಇನ್ನು ಪ್ರಮುಖವಾಗಿ ಚಾಲನಾ ಸಿಬ್ಬಂದಿಗಳ ರಜೆ ಮತ್ತು ಗೈರುಹಾಜರಾತಿಯನ್ನು ನಿಯಂತ್ರಿಸುವುದು. ಚಾಲನಾ ಸಿಬ್ಬಂದಿಗಳನ್ನು ತರಬೇತಿಗೆ ನಿಯೋಜಿಸುವಾಗ ಕಡಿಮೆ ಪ್ರಮಾಣದಲ್ಲಿ ನಿಯೋಜಿಸಿ ಕಾರ್ಯಾಚರಣೆಗೆ ಹೆಚ್ಚು ಚಾಲನಾ ಸಿಬ್ಬಂದಿಗಳು ಲಭ್ಯವಾಗುವಂತೆ ನೋಡಿಕೊಳ್ಳಬೇಕು.

ವಿಭಾಗಗಳಲ್ಲಿ ಭಾರಿ ಕವಚ ದುರಸ್ಥಿಗಿರುವ / ಆಫ್‌ ರೋಡ್‌ ಆಗಿರುವ ವಾಹನಗಳನ್ನು ತ್ವರಿತವಾಗಿ ಸುಸ್ಥಿತಿಗೊಳಿಸಿ, ವಾಹನಗಳನ್ನು ಕಾರ್ಯಾಚರಣೆಗೆ ಲಭ್ಯವಿರಿಸಿಕೊಳ್ಳುವುದು ಅದೇ ರೀತಿ ಎಫ್ಸಿ ನವೀಕರಣ prepone ಮಾಡಿಕೊಂಡು ಪೀಕ್‌ ಅವಧಿಯಲ್ಲಿ ವಾಹನಗಳು ಕಾರ್ಯಾಚರಣೆಗೆ ಲಭ್ಯವಿಲ್ಲದಂತಾಗುವುದನ್ನು ತಪ್ಪಿಸಬೇಕು.

ಇನ್ನು ಜನಸಂದಣಿ ಹೆಚ್ಚು ಇರುವ ದಿನಗಳಲ್ಲಿ ಬಸ್ ನಿಲ್ದಾಣಗಳಲ್ಲಿ ಅಧಿಕಾರಿ/ಮೇಲ್ವಿಚಾರಕ ಸಿಬ್ಬಂದಿಗಳನ್ನು ನಿಯೋಜನೆ ಮಾಡಿ ಕಾರ್ಯಾಚರಣೆ ಉಸ್ತುವಾರಿ ನೋಡಿಕೊಳ್ಳುವುದು.

ಈ ನಡುವೆ ಚಾಲನಾ ಸಿಬ್ಬಂದಿಗಳ ಶಿಸ್ತು ಪ್ರಕರಣಗಳಲ್ಲಿ ತೀರಾ ಅವಶ್ಯಕತೆ ಇರುವ ಪ್ರಕರಣಗಳ ವಿಚಾರಣೆಯನ್ನು ಮಾತ್ರ ಮಾಡುವುದು. ಉಳಿದ ವಿಚಾರಣೆಗಳನ್ನು ಪೀಕ್ ಸೀಸನ್ ಅವಧಿಯ ನಂತರ ಮಾಡಬೇಕು ಎಂಬುವುದು ಸೇರಿ 10 ಸೂಚನೆಗಳನ್ನು ಮುಖ್ಯ ಸಂಚಾರ ವ್ಯವಸ್ಥಾಪಕರು ಡಿಪೋ ಮಟ್ಟದ ಅಧಿಕಾರಿಗಳಿಗೆ ತಮ್ಮ ಆದೇಶದಲ್ಲಿ ನೀಡಿದ್ದಾರೆ.

ಈ ಆದೇಶವನ್ನೇ ಆಧಾರವಾಗಿ ಇಟ್ಟುಕೊಂಡು ಚಾಲನಾ ಸಿಬ್ಬಂದಿಗಳಿಗೆ ರಜೆ ಕೊಡದೆ ಹೆಚ್ಚು ಸಮಯ ದುಡಿಸಿಕೊಳ್ಳಲಾಗುತ್ತಿದೆ. ಇತ್ತ ಹೆಚ್ಚು ಸಮಯ ದುಡಿಯುತ್ತಿರುವ ನಮಗೆ ಒಟಿಯನ್ನು ಕೊಡುತ್ತಿಲ್ಲ. ವಾರದ ರಜೆಯಲ್ಲಿ ಕೆಲಸ ಮಾಡಿದರೆ ಡಬಲ್‌ ವೇತನವನ್ನಾದರೂ ಕೊಟ್ಟರೆ ಓಕೆ ಅದನ್ನು ಮಾಡುತ್ತಿಲ್ಲ. ಜತೆಗೆ ವಾರದ ರಜೆಯಲ್ಲಿ ಕರ್ತವ್ಯ ನಿರ್ವಹಿದ್ದು ಬೇರೊಂದು ದಿನ ಸಿಆಫ್‌ ಕೊಡಿ ಎಂದರೂ ಕೊಡುತ್ತಿಲ್ಲ ಎಂದು ಹೆಸರೇಳದೆ ನೌಕರರೊಬ್ಬರು ನೋವು ತೋಡಿಕೊಂಡಿದ್ದಾರೆ.

ಇನ್ನು ಈ ಬಗ್ಗೆ ನಿಗಮದ ಯಾವ ಡಿಪೋಗಳಲ್ಲಿ ಎಷ್ಟೆಷ್ಟು ನೌಕರರು ವಾರದ ರಜೆಯಲ್ಲೂ ಕರ್ತವ್ಯ ನಿರ್ವಾಹಿಸಿದ್ದಾರೆ? ಏಕೆ ಆವರಿಗೆ ರಜೆ ಕೊಡುತ್ತಿಲ್ಲ ಎಂಬುದರ ಬಗ್ಗೆ ವಿಜಯಪಥ ಮಾಹಿತಿ ಸಂಗ್ರಹಿಸುತ್ತಿದ್ದು ಎಲ್ಲವನ್ನು ಶೀಘ್ರದಲ್ಲೇ ಸಂಬಂಧಪಟ್ಟ ಸಚಿವರು ಅಧಿಕಾರಿಗಳ ಗಮನಕ್ಕೆ ತರಲಿದೆ.

Leave a Reply

error: Content is protected !!
LATEST
ಮೊಮ್ಮಗನ ಹಗರಣ ತಾತನಿಗೆ ಮುಳುವಾಯಿತೇ!! ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕಾರ ಬೆನ್ನೆಲ್ಲೇ ಮಾಜಿ ಸಚಿವ ಎಚ್.ಡಿ.ರೇವಣ್ಣ ಬಂಧನ ಪ್ರಜ್ವಲ್ ರೇವಣ್ಣ ಸರಣಿ ಅತ್ಯಾಚಾರ ಪ್ರಕರಣದ ನೊಂದ ಮಹಿಳೆಯರ ಬೆಂಬಲಕ್ಕೆ ನಿಂತ ಆಮ್ ಆದ್ಮಿ ಪಾರ್ಟಿ ಬಿಜೆಪಿ ಗೆದ್ದರೆ ಸರ್ವಾಧಿಕಾರ ಆಡಳಿತ ಬರುವುದರಲ್ಲಿ ಯಾವುದೇ ಸಂಶಯವಿಲ್ಲ: ಮುಖ್ಯಮಂತ್ರಿ ಚಂದ್ರು ಬಿಸಿಲ ಝಳಕ್ಕೆ ಬಿಎಂಟಿಸಿ ನಿರ್ವಾಹಕ ಸೇರಿ ಇಬ್ಬರು ಮೃತ ಬೇಸಿಗೆಯ ಬಿರು ಬಿಸಿಲು- ತಂಪೆರೆದ ಭರಣಿ ಮಳೆ: ರೈತರ ಮುಖದಲ್ಲಿ ಮಂದಹಾಸ ಬೇಟಿ ಬಚಾವೋ ಬೇಟಿ ಪಢಾವೋ ಎಂದರೆ ಅತ್ಯಾಚಾರಿಗಳಿಗೆ ಟಿಕೆಟ್‌ ನೀಡುವುದೇ?:  ಮುಖ್ಯಮಂತ್ರಿ ಚಂದ್ರು ಪ್ರಶ್ನೆ ಪ್ರಜ್ವಲ್ ರೇವಣ್ಣನಿಂದ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ರಕ್ಷಣೆ ನೀಡಿ: ಮೋಹನ್ ದಾಸರಿ ಆಗ್ರಹ ಕೊರೊನಾದಿಂದ ಜೀವಕಳೆದುಕೊಂಡ KSRTCಯ 114ಕ್ಕೂ ಹೆಚ್ಚು ನೌಕರರ ಕುಟುಂಬಕ್ಕೆ ಇನ್ನೂ ಸಿಕ್ಕಿಲ್ಲ 30 ಲಕ್ಷ ಪರಿಹಾರ!!? ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿಗಳ ಬಂಧಿಸುವ ಅಧಿಕಾರ ಎಸ್‌ಐಟಿಗೆ ಇಲ್ಲ - ವಕೀಲ ಶಿವರಾಜು