NEWSನಮ್ಮಜಿಲ್ಲೆನಮ್ಮರಾಜ್ಯಲೇಖನಗಳು

ಮೊಮ್ಮಗನ ಹಗರಣ ತಾತನಿಗೆ ಮುಳುವಾಯಿತೇ!!

ವಿಜಯಪಥ ಸಮಗ್ರ ಸುದ್ದಿ

*ರಂಗಸುತ
ರಿಸ್ಥಿತಿಯ ಕೈಗೂಸಾಗಿ 1983ರಲ್ಲಿ ರಾಮಕೃಷ್ಣ ಹೆಗಡೆಯವರು ರಾಜ್ಯದ ಮುಖ್ಯಮಂತ್ರಿಯಾದರು. ಕಾಂಗ್ರೆಸ್ಸಿನಿಂದ ಹೊರಬಿದ್ಧ ಸಾರೆಕೊಪ್ಪ ಬಂಗಾರಪ್ಪನವರು ಕರ್ನಾಟಕ‌ ಕ್ರಾಂತಿ ರಂಗವನ್ವು ಸ್ಥಾಪಿಸಿದರು. 1983ರ ರಾಜ್ಯ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಿದ ಕ್ರಾಂತಿ ರಂಗ 95 ಸ್ಥಾನಗಳನ್ನು ಗಳಿಸಿತಾದರೂ ಸರ್ಕಾರ ರಚಿಸುವಷ್ಟು ಅಂದರೆ 114 ಸ್ಥಾನ ಯಾರಿಗೂ ಬರಲಿಲ್ಲ ಆಗ ಬಿಜೆಪಿ 18 ಸ್ಥಾನಗಳಿಸಿ ಮೂರನೇ ಅತಿ ದೊಡ್ಡ ಪಕ್ಷವಾಗಿತ್ತು.

ಬಿಜೆಪಿ ಮತ್ತು ಎರಡು ಕಮ್ಯುನಿಸ್ಟ್ ಪಕ್ಷಗಳ ಬೆಂಬಲದೊಂದಿಗೆ ಪ್ರಥಮ ಕಾಂಗ್ರೆಸ್ಸೇತರ ಸರ್ಕಾರ ರಚನೆಗೆ ಪ್ರಯತ್ನಗಳು ಆರಂಭವಾದವು. ಆಗ ಅಸ್ತಿತ್ವದಲ್ಲಿದ್ದ ಜನತಾ ಪಕ್ಷದ ಧುರೀಣ ಜಾರ್ಜ್ ಫರ್ನಾಂಡಿಸ್ ಮತ್ತು ಹಿರಿಯ ಪತ್ರಕರ್ತ ಖಾದ್ರಿ ಶಾಮಣ್ಣ ಮುಂತಾದವರು ಸಂಧಾನ‌ ನಡೆಸಿ 95 ಸ್ಥಾನ ಗೆಲ್ಲಿಸಿಕೊಂಡು ಬಂದ ಬಂಗಾರಪ್ಪನವರನ್ನು ಮೂಲೆಗೆ ಒತ್ತರಿಸಿ ರಾಜ್ಯಸಭಾ ಸದಸ್ಯ ದಿ.ರಾಮಕೃಷ್ಣ ಹೆಗಡೆಯವರನ್ನು ಮುಖ್ಯ ಮಂತ್ರಿ ಗದ್ದುಗೆಯ ಮೇಲೆ ಪ್ರತಿಷ್ಠಾಪಿಸಿದರು.

1985ರವರೆಗೆ ಆಡಳಿತ ನಡೆಸಿದ ಹೆಗಡೆಯವರು ಕಿಚಡಿ ಸರ್ಕಾರದ ಕಿರಿಕಿರಿಯಿಂದ ಬೇಸತ್ತು1985ರಲ್ಲಿ ವಿಧಾನಸಭೆ ವಿಸರ್ಜಿಸಿ ಹೊಸ ಚುನಾವಣೆಗೆ ಹೋದರು. ಅದಾಗಲೇ ಉತ್ತಮ ಆಡಳಿತ ನೀಡಿ ಜನಪ್ರಿಯರಾಗಿದ್ದ ಹೆಗಡೆ ಆ ಚುನಾವಣೆ ಯಲ್ಲಿ 139 ಸ್ಥಾನಗಳೊಂದಿಗೆ ಪ್ರಚಂಡ ಜಯ ಗಳಿಸಿದರು.

ಹೆಗಡೆಯವರ ಈ ಸಂಪುಟದಲ್ಲಿ ಲೋಕೋಪಯೋಗಿ ಸಚಿವ ರಾಗಿದ್ಧ ದೇವೇಗೌಡರು ಹೆಗಡೆ ಅವರೊಂದಿಗಿನ ಭಿನ್ನಾಭಿಪ್ರಾಯದಿಂದ ಸಚಿವ ಸ್ದಾನ ಹಾಗೂ ಜನತಾಪಕ್ಷಕ್ಕೆ ರಾಜೀನಾಮೆ ನೀಡಿ ಸಮಾಜವಾದೀ ಜನತಾದಳ ಎಂಬ ಹೊಸ ಪಕ್ಷ ಸ್ಥಾಪಿಸಿದರು.

1989ರ ವಿಧಾನ ಸಭಾ ಚುನಾವಣೆಯಲ್ಲಿ ಈ ಪಕ್ಷ 222 ಸ್ಥಾನಗಳಿಗೆ ಸ್ಪರ್ಧಿಸಿತ್ತು. ಕೇವಲ 4 ಸ್ಥಾನಗಳಲ್ಲಿ ಮಾತ್ರ ಗೆದ್ದಿತು. ಕಾಂಗ್ರೆಸ್ 139 ಸ್ಥಾನಗಳಲ್ಲಿ ಗೆಲುವು ಸಾಧಿಸಿತು .ಇದು ದೇವೇಗೌಡರು ಕಾಂಗ್ರೆಸ್ಸಿಗೆ ನೀಡಿದ ಉಡುಗೊರೆ. ಮಾಜಿ ಮುಖ್ಯ ಮಂತ್ರಿ ವೀರೇಂದ್ರ ಪಾಟೀಲರು ಮತ್ತೆ ಮುಖ್ಯ ಮಂತ್ರಿಯಾದರು.

ಮುಂದಿನ ದಿನಗಳಲ್ಲಿ ಪತ್ರಿಕಾ ರಂಗದ ಭೀಷ್ಮ ಎಂದೇ ಗುರುತಿಸಲ್ಪಡುತ್ತಿದ್ದ ದಿ. ಕೆ ಶಾಮರಾವ್ ಸೇರಿದಂತೆ ಹಲವರ ಪ್ರಯತ್ನದ ಫಲವಾಗಿ ದೊಡ್ಡ ಗೌಡರು ಮತ್ತು ಹೆಗಡೆಯವರ ನಡುವೆ ರಾಜಿಯಾಗಿ ರಾಜ್ಯಾದ್ಯಂತ ಇಬ್ಬರೂ ಒಟ್ಟಾಗಿ ಕ್ಷಮಾಯಾತ್ರೆ ಮಾಡಿದರು. 1994ರ ಚುನಾವಣೆಯಲ್ಲಿ ಮತದಾರರು ಇವರ ಕೈ ಹಿಡಿದರು.

ದೊಡ್ಡ ಗೌಡರೇ ಮುಖ್ಯ ಮಂತ್ರಿ ಆಗುತ್ತಾರೆಂಬುದು ಜಗಜ್ಜಾಹೀರಾಯಿತು. ‌ವಿಧಾನ ಸೌಧದಲ್ಲಿ ಶಾಸಕಾಂಗ ಪಕ್ಷದ ಸಭೆಗೆ ಮುನ್ನ ಹೆಗಡೆಯವರು ಒಂದು ಸಣ್ಣ ಕಡ್ಡಿಯಾಡಿಸಿದರು. ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ. ಯಾರೂ ಬೇಕಾದರೂ ಸ್ಪರ್ಧಿಸಬಹುದು. ಜೆ.ಎಚ್. ಪಟೇಲರೂ ಇದ್ದಾರೆ ಎಂದುಬಿಟ್ಟರು.  ಈ ಹೇಳಿಕೆಯಿಂದ ದೇವೇಗೌಡರ ಬೆಂಬಲಿಗರ ಹೊಟ್ಟೆಗೆ ಬೆಂಕಿ ಬಿದ್ದಿತ್ತು. ಜೋರು ದಾಂಧಲೆ ಆರಂಭವಾಯಿತು. ವಿಧಾನ ಸೌಧದಲ್ಲಿದ್ದ ಪಾಟುಗಳನ್ನು ಕೆಳಗೆ ಎಸೆದರು. ಕಿಟಕಿ ಗಾಜು ಒಡೆದರು. ಹೆಗಡೆಯವರಿಗೆ ಮುತ್ತಿಗೆ ಹಾಕಿದರು. ಪಾದರಕ್ಷಾ ಪ್ರಯೋಗವೂ ಆಯಿತು. ಅಂತೂ ಇಂತೂ ದೊಡ್ಡ ಗೌಡ್ರು ಮುಖ್ಯ ಮಂತ್ರಿಯಾದರು. ಇದು ಇತಿಹಾಸ.

ಈ ಇತಿಹಾಸವನ್ನು ಕೆದಕಲು ಕಾರಣವೂ ಇದೆ. 1997ರಲ್ಲಿ ಪ್ರಖ್ಯಾತ ಖಗೋಳ ಶಾಸ್ತ್ರಜ್ಞರೂ ವಿದ್ವಾನ್ ಬೆಳ್ಳೂರು ಶಂಕರನಾರಾಯಣ ಸತ್ಯನಾರಾಯಣ ಅವರ ಸಂಪರ್ಕ ನನಗಾಯಿತು. ಇವರು ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಆಭಿಯಂತರರು ಸಮಯ ಸಿಕ್ಕಿಗಲೆಲ್ಲಾ ನಾವು ಮಾಡಿದ ಕರ್ಮ ತೀರಿಸಲೇಬೇಕಾ ಮತ್ತು ಖಗೋಳ ಶಾಸ್ತ್ರ, ಜ್ಯೋತಿಷ. ಭವಿಷ್ಯದ ನಿಖರತೆ, ಮಹತ್ವದ ಬಗ್ಗೆ ಚರ್ಚಿಸುತ್ತಿದ್ದೆ. ಪಾಪ, ಪುಣ್ಯ ಕರ್ಮ, ಸ್ವರ್ಗ ನರಕ, ಮೋಕ್ಷ, ಪುನರಪಿ ಜನನ, ಪುನರಪಿ ಮರಣ ಇವೆಲ್ಲ ನಮ್ಮ ದೇಶದಲ್ಲೇ ಏಕಿವೆ? ಉಳಿದಲ್ಲೆಲ್ಲಾ ಏಕಿಲ್ಲಾ ಎಂದು ಪ್ರಶ್ನಿಸುತ್ತಿದ್ದೆ.

ಭಾರತ, ಇದು ಕರ್ಮ ಭೂಮಿ. ಮೋಕ್ಷಾಕಾಂಕ್ಷಿಗಳು ಭಾರತದಲ್ಲೇ ಹುಟ್ಟಬೇಕು. ಬೇರೆಡೆ ಇರುವ ಮತ್ತು ಮೋಕ್ಷ ಬಯಸುವ ಯಾರಾದರೂ ಆ ಸಾಧನೆಗೆ ಭಾರತಕ್ಕೆ ಬರಲೇಬೇಕು. ಕೆಲವರು ಬರುತ್ತಲೂ ಇದ್ದಾರೆ. ಧರ್ಮ ಕರ್ಮ ಸಂಯೋಗ, ಪತಿ- ಪತ್ನಿ ಆಪ್ಪ- ಅಮ್ಮ ಮುಂತಾದ ಬಾಂಧವ್ಯ ಏಕ ಪತ್ನಿತ್ವ ಮುಂತಾದ ಹಲವಾರು ವ್ಯವಸ್ಥೆಗಳು ಭಾರತದಲ್ಲಿ ಮಾತ್ರ ಇವೆ ಬೇರೆಲ್ಲೂ ಇಲ್ಲ ಎಂದರು.

ಹಾಗಿದ್ದರೆ 95 ಸ್ಥಾನ ಗಳಿಸಿಯೂ ಮುಖ್ಯಮಂತ್ರಿಯಾಗದ ಬಂಗಾರಪ್ಪ ಅವರದ್ದೂ ಕರ್ಮವೇ ಎಂದು ಪ್ರಶ್ನಿಸಿದೆ. ನೂರಕ್ಕೆ ನೂರರಷ್ಟು ಎಂದರು. ಅದು ಹೇಗೆ ಎಂದೆ. ಬಂಗಾರಪ್ಪ ಸಮಾಜವಾದಿ ಚಿಂತಕ, ಹಿಂದುಳಿದ ಸಮಾಜದಿಂದ ಬಂದವರು ಎಂದು ಗಮನಿಸಿದ ದೇವರಾಜ ಅರಸು ಅವರು ಉಪ ಮುಖ್ಯ ಮಂತ್ರಿ ಸ್ಥಾನ ಕೊಟ್ಟು ಪ್ರೋತ್ಸಾಹಿಸಿ ದರು. ಆದರೆ ಇಂದಿರಾ ಗಾಂಧಿಯವರ ಜೊತೆ ಭಿನ್ನಮತ ಬಂದಾಗ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಯಿತು. ಆಗ ಬಂಗಾರಪ್ಪ ಅರಸು ಅವರ ಜೊತೆಗೇ ಉಳಿದರು.

ಒಮ್ಮೆ ಅರಸು ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ರಾತ್ರಿ 12ಗಂಟೆ ಸಮಯಕ್ಕೆ ಬಂಗಾರಪ್ಪ ಬಂದರು. ಅರಸು ಅವರ ಪಾದ ಮುಟ್ಟಿ ನಮಸ್ಕರಿಸಿದರು. ಬಂಗಾರಪ್ಪ ನೀವೇನೋ ಇಂದಿರಾ ಕಾಂಗ್ರೆಸ್ಸಿಗೆ ಹೋಗುತ್ತಿದ್ದೀರೆಂಬ ವದಂತಿ ಇದೆ.. ಹೋಗಿ ಪರವಾಗಿಲ್ಲ. ನಮ್ಮೆದೆಲ್ಲ ಮುಗಿಯಿತು. ನೀವಿನ್ನೂ ಯುವಕರು. ಉಜ್ವಲ ಭವಿಷ್ಯವಿದೆ. ಆದರೆ ಹೋಗುತ್ತಿದ್ದೀನೆಂದು ತಿಳಿಸಿ ಹೋಗಿ ಅಂದರು.

ಆದರೆ ಅದನ್ನು ಖಂಡತುಂಡವಾಗಿ ನಿರಾಕರಿಸಿ ನಾನೇನಿದ್ದರೂ ನಿಮ್ಮ ಪಾದಸೇವಕ, ಅಂಥ ದ್ರೋಹ ಮಾಡಲಾರೆ ಎಂದು ಹೇಳಿ ಬಾಲಬ್ರೂಯಿಯಿಂದ ಹೊರನಡೆದರು. ಅವರು ಕಾರು ಹತ್ತುವ ಮುನ್ನವೇ ಇಂದಿರಾ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ಸುದ್ದಿ ಟೆಲಿಶ ಪ್ರಿಂಟರಿನಲ್ಲಿ ಬರುತ್ತಿತ್ತು. ಈ ಕರ್ಮವೇ 95ಸ್ಥಾನ ಗೆದ್ದರೂ ಮುಖ್ಯಮಂತ್ರಿ ಪದವಿದೊರೆಯಲಿಲ್ಲ ಮತ್ತು ಎರಡು ಬಾರಿ ಮುಖ್ಯ ಮಂತ್ರಿಯಾದರೂ ಅವರು ಪೂರ್ಣಾವಧಿ ಮುಗಿಸಲಿಲ್ಲ ಎಂದು ಕರ್ಮ ಫಲವನ್ನು ವಿವರಿಸಿದರು.

ಹಾಗೆಯೇ ಮಾಜಿ ಮುಖ್ಯ ಮಂತ್ರಿ ರಾಮಕೃಷ್ಣ ಹೆಗಡೆಯವರ ಮೇಲೆ ಅಯಾಚಿತವಾಗಿ ನಡೆದ ಪಾದರಕ್ಷಾ ಪ್ರಯೋಗವೂ ದೊಡ್ಡಗೌಡರ ಕರ್ಮವೇ ಎಂದು ಪ್ರಶ್ನಿಸಿದೆ. ಖಂಡಿತ ಹೌದು ಎಂದರು. ಅವರು ಅಷ್ಟಕ್ಕೇ ನಿಲ್ಲಿಸಲಿಲ್ಲ. ದೊಡ್ಡಗೌಡರ ಅಥವಾ ಅವರ ಅನುಯಾಯಿಗಳು ಮಾಡಿದ ಈ ಕರ್ಮಕ್ಕೆ ದೊಡ್ಡ ಗೌಡರೇ ಬೆಲೆ ತೆರಬೇಕಾಗುತ್ತದೆ ಆದ್ದರಿಂದಲೇ ಅವರು ಮುಖ್ಯ ಮಂತ್ರಿಯಾದರೂ ಅಧಿಕಾರದಲ್ಲಿದ್ದದ್ದು ಎರಡು ವರ್ಷ, ಹತ್ತು ತಿಂಗಳು ಮಾತ್ರ ಪ್ರಧಾನಿಯಗಿದದ್ದು ಎಂದೂ ಹೇಳಿದರು.

ಪ್ರಜ್ವಲ್ ರೇವಣ್ಣ ಅವರ ಪ್ರಸಕ್ತ ಹಗರಣದ ನಂತರ ಖಗೋಳ ಶಾಸ್ತ್ರಜ್ಞರು ಅಂದು ಹೇಳಿದ್ದ ಕರ್ಮ ಸವೆ‌ಯಲೇ ಬೇಕೆಂಬ ಅವರ ಭವಿಷ್ಯದ ಬಗ್ಗೆ ನಾನು ಮೆಲುಕು ಹಾಕಲಾರಂಭಿಸುತ್ತಿದ್ದೇನೆ. ಕಾಕತಾಳೀಯವೋ ಎಂಬಂತೆ ಅವರ ಪುತ್ರ ಮಾಜಿ ಮುಖ್ಯ ಮಂತ್ರಿ ಎಚ್. ಡಿ. ಕುಮಾರಸ್ವಾಮಿಯವರೂ ಇಂದು ….”ಇದು ಅವನ ಕರ್ಮ ಅನುಭವಿಸಲೇಬೇಕು. ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂಬ ಮಾತನ್ನೇ ಹೇಳಿದ್ದಾರೆ.

ಲೇಖಕರು ಹಿರಿಯ ಪತ್ರಕರ್ತರು

Leave a Reply

error: Content is protected !!
LATEST
20 ದಿನದೊಳಗೆ ರೈತರಿಗೆ ಬರ ಪರಿಹಾರ ನೀಡದಿದ್ದರೆ ರಾಜ್ಯಾದ್ಯಂತ ಹೋರಾಟ: ಕುರುಬೂರು ಶಾಂತಕುಮಾರ್ ಎಚ್ಚರಿಕೆ KSRTC: ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಬಸ್‌ -6ಮಂದಿಗೆ ಗಾಯ KSRTC ಗುಂಡ್ಲುಪೇಟೆ ಘಟಕ: ನೌಕರರಿಗೆ ಡ್ಯೂಟಿ ಕೊಡದೆ ಕಿರುಕುಳ ನೀಡುತ್ತಿರುವ ಡಿಎಂ, ಎಟಿಎಸ್‌ - DC ಮೌನ NWKRTC: ಬಸ್‌ನಿಂದ ಆಯತಪ್ಪಿ ಬಿದ್ದು ಚಕ್ರದಡಿ ಸಿಲುಕಿ ಮಹಿಳೆ ಧಾರುಣಸಾವು ಬಸ್‌ - ಟ್ರ್ಯಾಕ್ಟರ್‌ ನಡುವೆ ಭೀಕರ ಅಪಘಾತ : ನಾಲ್ವರು ಮೃತ, ಹಲವರಿಗೆ ಗಾಯ KSRTC ಬಸ್‌ - ಕಾರು ನಡುವೆ ಅಪಘಾತ: ಕಾರಿನಲ್ಲಿದ್ದ ನಾಲ್ವರು ಸೇರಿ ಹಲವರಿಗೆ ಗಾಯ NWKRTC: ಕರ್ತವ್ಯ ನಿರತರಾಗಿದ್ದಾಗಲೇ ಚಾಲಕರಿಗೆ ಹೃದಯಘಾತ - ವಿಜಯಪುರ ಬಸ್‌ ನಿಲ್ದಾಣದಲ್ಲೇ ಕುಸಿದು ಬಿದ್ದು ನಿಧನ ಕನ್ನಡ ಮಾಧ್ಯಮ ಶಾಲೆಗಳ ವೈಫಲ್ಯ, ಕೇಂದ್ರದ ಹಿಂದಿ ಹೇರಿಕೆಯಿಂದ ನಾಶವಾಗುತ್ತಿದೆ ಕನ್ನಡ : ರಮೇಶ್‌ ಬೆಳ್ಳಮ್ಕೊಂಡ KSRTC: 2024ರ ವೇತನ ಪರಿಷ್ಕರಣೆ ಸುಳಿವು ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ KKRTC ವಿಜಯಪುರ: ತಪ್ಪು ಮಾಡಿ ಅಮಾನತಾದ ಡಿಸಿ ಪರ ನಿಂತರೆ ನಿಗಮದ ಅಧಿಕಾರಿಗಳು!!?