ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನಿವೃತ್ತ ನೌಕರರಿಗೆ ಕೋವಿಡ್ ನೆಪವೊಡ್ಡಿ 1ನೇ ಜನವರಿ 2020ರಿಂದ ಜಾರಿಯಾಗಿರುವ ವೇತನ ಪರಿಷ್ಕರಣೆಯನ್ನು 2020 ಜನವರಿಯಿಂದ 2023ರ ಫೆಬ್ರವರಿ ನಡುವೆ ನಿವೃತ್ತರಾದ ನೌಕರರಿಗೆ ಕೊಡದೆ ವಂಚಿಸಲು ಕೆಲ ಸಂಘಟನೆಗಳೇ ಪಿತೋರಿ ನಡೆಸುತ್ತಿವೆ ಎಂದು ನಿವೃತ್ತ ನೌಕರರು ಆರೋಪಿಸಿದ್ದಾರೆ.
ಕೋವಿಡ್ ನೆಪ ಹೇಳಿಕೊಂಡು 2020 ಮತ್ತು 2021ರ ವರೆಗೆ ಅಂದರೆ 2 ವರ್ಷದ ವೇತನ ಪರಿಷ್ಕರಣೆಯ ಹಿಂಬಾಕಿಯನ್ನು ಕೊಡದೆ 2022ರಿಂದ ಕೊಡುವುದಕ್ಕೆ ಸಾರಿಗೆ ನಿಗಮಗಳ ಆಡಳಿತ ಮಂಡಳಿ ತೀರ್ಮಾಸಲು ಹೊರಟಿದೆ. ಇದಕ್ಕೆ ನೌಕರರ ಕೆಲ ಸಂಘಟನೆಗಳು ಒಳ ಒಪ್ಪಂದ ಮಾಡಿಕೊಂಡು ಒಪ್ಪಿಕೊಂಡಿವೆ ಎಂದು ನಿವೃತ್ತ ನೌಕರರು ಕಿಡಿಕಾರುತ್ತಿದ್ದಾರೆ.
ಇನ್ನು ಈ 2020 ಮತ್ತು 2021ರ ನಡುವೆ ನಿವೃತ್ತರಾಗಿರುವ ಸಾರಿಗೆ ನೌಕರರಿಗಷ್ಟೇ ಈ ಅನ್ಯಾಯವಾಗುತ್ತಿದ್ದು ಇವರೆಲ್ಲರೂ ಒಟ್ಟಾಗಿ ಸೇರಿ ಕೋರ್ಟ್ ಮೊರೆಹೋಗುವುದಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಸಾರಿಗೆ ನಿಗಮಗಳ ಆಡಳಿತ ಮಂಡಳಿ ಈ ರೀತಿ ತೀರ್ಮಾನವನ್ನು ಇನ್ನೂ ತೆಗೆದುಕೊಳ್ಳದಿದ್ದರೂ ಕೆಲ ಸಂಘಟನೆಗಳ ಮುಖಂಡರು ಇದೇ ರೀತಿ ಮಾಡಿ ಎಂದು ಸಲಹೆ ನೀಡುತ್ತಿರುವುದರಿಂದ ನಮಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ನಮ್ಮ ಪರ ಧ್ವನಿ ಎತ್ತಬೇಕಾದ ಈ ಮೂರ್ಖರು ಈ ರೀತಿ ಇಬ್ಬಗೆ ನೀತಿ ಅನುಸರಿಸುತ್ತಿರುವುದರಿಂದ ನಮಗೆ ಮಾತ್ರ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಉಳಿದಂತೆ 2022ರ ಜನವರಿಯಿಂದ ಈಚೆಗೆ ನಿವೃತ್ತರಾಗುತ್ತಿರುವ ನೌಕರರಿಗೆ ಇದು ಅನ್ವಯವಾಗುವುದಿಲ್ಲ. ಅವರಿಗೆ ಬರುಬೇಕಿರುವ ಎಲ್ಲ ಸೌಲಭ್ಯಗಳು ಸಿಗುತ್ತಿವೆ. ನಮಗೆ ಮಾತ್ರ ಈರೀತಿ ಅನ್ಯಾಯಮಾಡಲು ಹೊರಟಿರುವುದು ಯಾವ ನ್ಯಾಯ ಎಂದು ಪ್ರಶ್ನಿಸುತ್ತಿದ್ದಾರೆ.
ಇತ್ತ ಕೋವಿಡ್ ವೇಳೆ ಯಾವುದೇ ಜನಪ್ರತಿನಿಧಿಯಾಗಲೀ ಇಲ್ಲ ಯಾವುದೇ ಸರ್ಕಾರಿ ನೌಕರರಾಗಲಿ ಅಥವಾ ಬೇರೆ ನಿಗಮಗಳ ನೌಕರರಾಗಲಿ ಈ ರೀತಿ ಬರಬೇಕಿರುವುದನ್ನು ಬಿಟ್ಟಿಲ್ಲ. ಎಲ್ಲರೂ ವೇತನ ಹೆಚ್ಚಳ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. ಆದರೆ ನಮಗೆ ಮಾತ್ರ ಏಕೆ 2 ವರ್ಷದ ಸೌಲಭ್ಯವನ್ನು ಕೊಡಲಾಗುತ್ತಿಲ್ಲ ಎಂದು ಹೇಳಬೇಕು. ಇದಕ್ಕೆ ಕುಂಟುನೆಪ ಸಲ್ಲದು ಎಂದು ಕಿಡಿಕಾರಿದ್ದಾರೆ.
ಸಾರಿಗೆ ನಿಗಮಗಳಲ್ಲಿ ದುಡಿಯುವವರಿಗೆ ಇಷ್ಟೊಂದು ಅನ್ಯಾಯವಾಗುತ್ತಿದ್ದರು ಕೇಳಬೇಕಾದ ಕೆಲ ಸಂಘಟನೆಗಳು ಕಣ್ಣುಮುಚ್ಚಿ ಕುಳಿತಿದ್ದರೆ ಇನ್ನು ಕೆಲ ಸಂಘಟನೆಗಳು ಈ ಎರಡು ವರ್ಷ ನಿಗಮಕ್ಕೆ ನಷ್ಟವಾಗಿದೆ ಹಾಗಾಗಿ ಕೊಡದಿದ್ದರೂ ನಡೆಯುತ್ತದೆ ಎಂದು ಸಲಹೆ ನೀಡುತ್ತಿವೆ. ನಮ್ಮ ಪರ ನಿಲ್ಲಬೇಕಾದ ಸಂಘಟನೆಗಳೇ ನಮ್ಮ ವಿರುದ್ಧ ನಿಂತರೆ ನಾವು ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ ಸರ್ಕಾರ ಮತ್ತು ಸಾರಿಗೆ ನಿಗಮ ಮಂಡಳಿಗಳ ಆಡಳಿತ ಈರೀತಿ ತಾರತಮ್ಯತೆ ಮಾಡಿದರೆ ನಾವು ಕೋರ್ಟ್ ಮೊರೆ ಹೋಗುವುದು ಖಚಿತ ಎಂದು ನಿವೃತ್ತ ನೌಕರರು ಹೇಳುತ್ತಿದ್ದಾರೆ. ಇನ್ನು ಈ ನಾವು ಕೋರ್ಟ್ ಮೊರೆ ಹೋದರೆ ಸಾರಿಗೆಯ ನಾಲ್ಕೂ ನಿಗಮ ಮಂಡಿಗಳಿಗಳ ಆಡಳಿತಕ್ಕೆ ಕೋರ್ಟ್ ಛೀಮಾರಿ ಹಾಕಲಿದೆ. ಜತೆಗೆ ನಮಗೆ ಬರಬೇಕಿರುವುದನ್ನು ಕೊಡಿಸಲಿದೆ ಎಂಬ ನಂಬಿಕೆ ಇದೆ ಎಂದು ಹೇಳುತ್ತಿದ್ದಾರೆ.