ಬೆಂಗಳೂರು: ಸರ್ಕಾರಿ ಇಲಾಖೆಗಳು ಸೇರಿದಂತೆ ಎಲ್ಲ ನಿಗಮಗಳಲ್ಲೂ ಮುಖ್ಯ ವೇತನ ಶ್ರೇಣಿ ಪದ್ದತಿ ಅಳವಡಿಸಿಕೊಳ್ಳಲಾಗಿದೆ ಅದರಂತೆ ಕೆಎಸ್ಆರ್ಟಿಸಿಯ ನಾಲ್ಕೂ ನಿಗಮಗಳಲ್ಲೂ ಮುಖ್ಯ ವೇತನ ಶ್ರೇಣಿ ಅಳವಡಿಸಬೇಕು. ಕಾರಣ ಮುಖ್ಯ ವೇತನ ಶ್ರೇಣಿ ಇಲ್ಲದೆ ವೇತನ ಹೆಚ್ಚಖ ಮಾಡುವುದು ತಲೆ ಇಲ್ಲದ ಮುಂಡಕ್ಕೆ ಸಮಾನ ಎಂದು ಅಧಿಕಾರಿಗಳು ಮತ್ತು ನೌಕರರು ಆಗ್ರಹಿಸಿದ್ದಾರೆ.
ಹೌದು! ಸಾರಿಗೆಯ 4ನಿಗಮಗಳಲ್ಲೂ ವಾರ್ಷಿಕ ವೇತನ ಬಡ್ತಿಗಳು 14, ಅವುಗಳ ಅವಧಿ ಹುದ್ದೆವಾರು 2,3,4,5,6 ಹೀಗೆ ಬೇರೆ ಬೇರೆ ಆಗಿವೆ, ಕಾರಣ ಮುಖ್ಯ ವೇತನ ಶ್ರೇಣಿ ಅಳವಡಿಸಿಕೊಂಡಿಲ್ಲದಿರುವುದು. ಇನ್ನು BWSSBಯಲ್ಲೂ ಕೂಡ 12 ರೀತಿ ವಾರ್ಷಿಕ ವೇತನ ಬಡ್ತಿಗಳಿವೆ, ಅವುಗಳ ಅವಧಿ ಎಲ್ಲ ಹುದ್ದೆಗಳಿಗೆ ಒಂದೆ ಆಗಿದೆ, ಕಾರಣ ಅಲ್ಲಿ ಮುಖ್ಯ ವೇತನ ಶ್ರೇಣಿ ಪದ್ಧತಿ ಅಳವಡಿಸಿಕೊಂಡಿರುವುದರಿಂದ.
ಅದೇ ರೀತಿ ಸಾರಿಗೆ ನಿಗಮಗಳಲ್ಲೂ ವಾರ್ಷಿಕ ವೇತನ ಬಡ್ತಿಗಳು ಎಷ್ಟೇ ಇದ್ದರೂ ಅವುಗಳ ಅವಧಿ ಎಲ್ಲ ಹುದ್ದೆಗಳಿಗೂ ಒಂದೆ ಆಗಬೇಕು. ಅದಕ್ಕೆ ಮುಖ್ಯ ವೇತನ ಶ್ರೇಣಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ನೌಕರರು ಒತ್ತಾಯಿಸಿದ್ದಾರೆ.
ಇನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ಅಧಿಕಾರಿಗಳು ಮತ್ತು ನೌಕರರು ಎಂಬ ಭೇದಭಾವವಿಲ್ಲದೆ ಎಲ್ಲರಿಗೂ ಕಳೆದ 2018ರಲ್ಲಿ ಆದ ವೇತನ ಪರಿಷ್ಕರಣೆ ವೇಳೆ ಶೇ.33ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ.
ಅದೇ ರೀತಿ ಕೆಪಿಟಿಸಿಎಲ್‌ನಲ್ಲೂ ಅಧಿಕಾರಿಗಳು ಮತ್ತು ನೌಕರರು ಎಂದು ಭಾಗಮಾಡದೆ ಅವರ ಹುದ್ದೆಗೆ ತಕ್ಕುದಾದ ವೇತನವನ್ನು ಕಾಲಕಾಲಕ್ಕೆ ಹೆಚ್ಚಳ ಮಾಡಲಾಗುತ್ತಿದೆ. ಅಲ್ಲದೆ ಮುಂಬಡ್ತಿಯನ್ನು ಕೂಡ ಕೊಡಲಾಗುತ್ತಿದೆ.
ಉದಾ: BWSSB ಮಂಡಳಿಯ ಅಧಿಕಾರಿ/ನೌಕರರಿಗೆ ಹಾಗೂ ಪಿಂಚಣಿದಾರರಿಗೆ 01.07.2018 ರಿಂದ ಕ್ರಮವಾಗಿ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನ ನಿಗದೀಕರಣ ಹಾಗೂ ಪರಿಷ್ಕೃತ ಪಿಂಚಣಿ, ಪರಿಷ್ಕೃತ ವೇತನ ಶ್ರೇಣಿಗಳು, ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ಕಾಲಮಿತಿ ವೇತನ ಬಡ್ತಿಗಳು, ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ ಹಾಗೂ ಇತರೆ ಭತ್ಯೆಗಳನ್ನು ಹೆಚ್ಚಳ ಮಾಡಿ ಆದೇಶಿಸಲಾಗಿದೆ.
ಆ ಪರಿಷ್ಕೃತ ವೇತನ ಶ್ರೇಣಿಗಳು 2018 ಜುಲೈ 01 ರಿಂದ ಜಾರಿಗೆ ಬರುತ್ತದೆ ಹಾಗೂ ಇದರ ಅವಧಿಯು 01.07.2018 ರಿಂದ ಐದು ವರ್ಷಗಳವರೆಗೆ ಚಾಲ್ತಿಯಲ್ಲಿರುತ್ತದೆ. ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನ ನಿಗದಿ ಮಂಡಳಿಯ ಅಧಿಕಾರಿ/ನೌಕರರ ಪ್ರಾರಂಭಿಕ ವೇತನವನ್ನು ಸಂವಾದಿ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಮುಂದಿನ ವಿಧಾನದಲ್ಲಿ ನಿಗದಿಪಡಿಸತಕ್ಕದ್ದು.
01.07.2018ರಲ್ಲಿ ಇದ್ದಂತಹ ಮೂಲ ವೇತನದ ಶೇ. 33 ರಷ್ಟು ಹೆಚ್ಚಳ, 01.07.2017ರಿಂದ ಮೂಲ ವೇತನ ಮೇಲೆ ಮೇಲೆ ಲಭ್ಯವಿರುವ ಶೇ. 45.25 ರಷ್ಟು ತುಟ್ಟಿಭತ್ಯೆ. (ಈಗಾಗಲೇ 01.04.2018 ರಿಂದ “ಅಧಿಕ ಮೂಲ ವೇತನ” ಎಂದು ಪರಿಗಣಿಸಲಾಗಿರುವ ಮೊತ್ತ).
ಮೂಲ ವೇತನ ಎಂದರೆ ಮಂಡಳಿಯ ಅಧಿಕಾರಿ/ ನೌಕರರು ಪ್ರಸಕ್ತ ಶ್ರೇಣಿಯಲ್ಲಿ 2018ರ ಜುಲೈ 1 ರಂದು ಅಥವಾ ಆ ತರುವಾಯ ಯಾವುದೇ ದಿನಾಂಕದಂದು “ಪರಿಷ್ಕೃತ ಶ್ರೇಣಿಯಲ್ಲಿ” ವೇತನವನ್ನು ಪುನಃ ನಿಗದಿಪಡಿಸಲಾಗುವ ದಿನಾಂಕದಂದು ಪಡೆಯುತ್ತಿದ್ದ ಮೂಲವೇತನ ಮತ್ತು ಅದು ಮುಂದಿನವುಗಳನ್ನು ಒಳಗೊಂಡಿರುತ್ತದೆ ಅಂದರೆ,
ಅ) ವಾರ್ಷಿಕ ವೇತನ ಬಡ್ತಿ, ಆ) ಪ್ರಸಕ್ತ ಶ್ರೇಣಿಯಲ್ಲಿ ಗರಿಷ್ಠ ವೇತನಕ್ಕಿಂತ ಹೆಚ್ಚಿಗೆಯಾಗಿ ನೀಡಲಾದ ಸ್ಥಗಿತ ವೇತನ ಬಡ್ತಿ, ಇ) ವೈಯಕ್ತಿಕ ವೇತನ. (ಸಣ್ಣ ಕುಟುಂಬ ವೇತನ ಬಡ್ತಿ ಹೊರತುಪಡಿಸಿ). ಹೀಗೆ ಸೇರಿಸಿ ಹೆಚ್ಚಿಸಿದ ನಂತರ ಬರುವ ಉಪಲಬ್ಧವನ್ನು ಸಂವಾದಿ ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿಗದಿಪಡಿಸತಕ್ಕದ್ದು ಎಂದು ಆದೇಶಿಸಲಾಗಿದೆ.
30.06.2018ರ ನಂತರ ನೇಮಕವಾದ ಸಂಬಂಧದಲ್ಲಿ ಪ್ರಸ್ತುತ ಹೊಂದಿರುವ ವೇತನ ಶ್ರೇಣಿಗೆ ಸಮನಾದ ಪರಿಷ್ಕೃತ ಶ್ರೇಣಿಯನ್ನು ವಿಸ್ತರಿಸಿ ಕನಿಷ್ಟ ವೇತನವನ್ನು ನಿಗದಿಪಡಿಸುವುದು. ತದನಂತರ ಹಿಂದಿನ ವೇತನ ಶ್ರೇಣಿಯಲ್ಲಿ ವಾರ್ಷಿಕ ವೇತನ ಬಡ್ತಿಗಳೇನಾದರೂ ಗಳಿಸಿದ್ದ ಪಕ್ಷದಲ್ಲಿ ಸದರಿ ದಿನಾಂಕಕ್ಕೆ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವಾರ್ಷಿಕ ವೇತನ ಬಡ್ತಿಗಳನ್ನು ಬಿಡುಗಡೆಗೊಳಿಸಿ ವೇತನವನ್ನು ನಿಗದಿಗೊಳಿಸಬೇಕು ಎಂದು ತಿಳಿಸಲಾಗಿದೆ.
ಈ ಪದ್ಧತಿಯನ್ನೇ ಸಾರಿಗೆ ನಿಗಮಗಳಲ್ಲೂ ಅಳವಡಿಸಿಕೊಂಡರೆ ನೌಕರರು ಮತ್ತು ಅಧಿಕಾರಿಗಳ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಬರುವುದಿಲ್ಲ. ಜತೆಗೆ ವೇತನ ಪರಿಷ್ಕರಣೆ ವೇಳೆ ಎಲ್ಲರಿಗೂ ಅವರವರ ಹುದ್ದೆಗೆ ತಕ್ಕಂತೆ ವೇತನ ಪರಿಷ್ಕರಣೆ ಆಗುವುದರಿಂದ ತಾರತಮ್ಯತೆ ಹೋಗುತ್ತದೆ. ಇನ್ನು ಪ್ರಮುಖವಾಗಿ ವೇತನ ಹೆಚ್ಚಳವಾಗಬೇಕು ಎಂದಾಗ ಅಧಿಕಾರಿಗಳು ಕೂಡ ಹೋರಾಟಕ್ಕೆ ಇಳಿಯುತ್ತಾರೆ.