CRIMENEWS

ಬೈಕ್‌ ಗುದ್ದಿ ರಸ್ತೆಬದಿ ನಿಂತಿದ್ದ ಮೂವರು ಮೃತ, ಇಬ್ಬರಿಗೆ ಗಾಯ

ವಿಜಯಪಥ ಸಮಗ್ರ ಸುದ್ದಿ

ತಿ.ನರಸೀಪುರ: ಕೇರಳ ಮೂಲದ ಬೈಕ್ ಸವಾರನೊಬ್ಬ ಅತೀ ವೇಗವಾಗಿ ಬೈಕ್‌ ಓಡಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತಿದ್ದವರಿಗೆ ಡಿಕ್ಕಿಯೊಡೆದ ಪರಿಣಾಮ ಮಹಿಳೆ ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ತಾಲೂಕಿನ ಮೂಗೂರು ಗ್ರಾಮದಲ್ಲಿ ಮಹಾ ಶಿವರಾತ್ರಿ ದಿನವಾದ ಶುಕ್ರವಾರ ಮದ್ಯಾಹ್ನ ನಡೆದಿದೆ.

ತಾಲೂಕಿನ ಕರೋಹಟ್ಟಿ ಗ್ರಾಮದ ಲೇಟ್ ಜವರೇಗೌಡ ಎಂಬುವರ ಪುತ್ರ ಬಸವರಾಜು ಆಲಿಯಾಸ್ ಬಸವಣ್ಣ(55), ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದ ವೆಂಕಟರಮಣಶೆಟ್ಟಿ ಎಂಬುವರ ಪುತ್ರ ಗೋವಿಂದಶೆಟ್ಟಿ(40) ಹಾಗೂ ತಾಲೂಕಿನ ಮೂಗೂರು ಹೊಸಹಳ್ಳಿ ಗ್ರಾಮದ ಲೇಟ್ ಮಾದಯ್ಯ ಎಂಬುವರ ಪತ್ನಿ ಚಿಕ್ಕಮ್ಮ(55) ಮೃತಪಟ್ಟವರು. ಚಾಮರಾಜನಗರ ತಾಲೂಕಿನ ಬಾಗಳಿ ಗ್ರಾಮದ ಲೇಟ್ ಮಾದಶೆಟ್ಟಿ ಎಂಬುವರ ಪುತ್ರ ಮಹದೇವಶೆಟ್ಟಿ(50) ಹಾಗೂ ಬೈಕ್ ಸವಾರ ಕೇರಳದ ದಕ್ಷಿಣ ವೆಲ್ಲುವಾಂಗಡದ ಸೈಫಯನ್ನೀಷಾ ಎಂಬುವರ ಪುತ್ರ ಕೆ.ಸಲ್ಮಾನ್ ಸೇಟ್(35) ಗಂಭೀರವಾಗಿ ಗಾಯಗೊಂಡು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ತುರ್ತು ನಿಗಾಘಟಕದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ನಿಂತಿದ್ದವರ ಮೇಲೆ ಬೈಕ್ ಬಿಟ್ಟ: ಪಟ್ಟಣದ ಕಡೆಯಿಂದ ಮೂಗೂರು ಗ್ರಾಮದ ರಾಷ್ಟ್ರೀಯ ಹೆದ್ಧಾರಿ 212ರ ಮಾರ್ಗವಾಗಿ ಕೇರಳಕ್ಕೆ ತೆರಳಲು ಕೆ.ಸಲ್ಮಾನ್ ಸೇಟ್ ಆರ್ನೇಟ್ ಹೊಂಡಾ ಬೈಕ್(ಕೆಎಲ್ 10, ಎ ಎಕ್ಸ್ 3938)ನಲ್ಲಿ ಅತಿವೇಗವಾಗಿ ಅಡ್ಡಾದಿಡ್ಡಿಯಾಗಿ ಓಡಿಸಿಕೊಂಡು ಬಂದು ಮೂಗೂರು ಗ್ರಾಮದ ಬಸ್ ನಿಲ್ದಾಣದಲ್ಲಿ ನಿಂತಿದ್ದವರ ಮೇಲೆ ಬೈಕನ್ನು ಬಿಟ್ಟದ್ದರಿಂದ ಈ ದುರ್ಘಟನೆ ನಡೆಯಿತು.

ಮೊದಲು ರಸ್ತೆ ಬದಿಯಲ್ಲಿ ಟಿವಿಎಸ್ ಎಕ್ಸೇಲ್ ಮೊಪೆಡ್ ನಿಲ್ಲಿಸಿಕೊಂಡು ನಿಂತಿದ್ದ ಬಸವರಾಜು ಆಲಿಯಾಸ್ ಬಸವಣ್ಣ ಅವರಿಗೆ ಡಿಕ್ಕಿಯೊಡೆದ, ನಂತರ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ಗೋವಿಂದಶೆಟ್ಟಿ ಹಾಗೂ ಚಿಕ್ಕಮ್ಮ ಅವರಿಗೆ ಡಿಕ್ಕಿಯೊಡೆದ ಬಳಿಕ ಮಹದೇವಶೆಟ್ಟಿ ಅವರಿಗೆ ಡಿಕ್ಕಿಯೊಡೆದು ಅವರ ಜೊತೆಯಲ್ಲಿಯೇ ತಾನೂ ಕೂಡ ಬಿದ್ದಿದ್ದಾನೆ.
ಅವಘಡದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದರು. ಬೈಕಿನ ವೇಗದ ರಭಸಕ್ಕೆ ಚಿಕ್ಕಮ್ಮ ಅವರು ನಿಂತಿದ್ದ ಸ್ಥಳದಿಂದ ಹತ್ತು ಅಡಿಗಳಷ್ಟು ದೂರಕ್ಕೆ ಹಾರಿ ಹೋಗಿ ಬಿದ್ದಿದ್ದರು. ರಸ್ತೆಯ ಸೂಚನಾ ಫಲಕವೂ ಕೂಡ ಬೆಂಡಾಗಿತ್ತು. ತೀವ್ರವಾಗಿ ಗಾಯಗೊಂಡು ನರಳಾಡುತ್ತಿದ್ದ ಮಹದೇವಶೆಟ್ಟಿ ಹಾಗೂ ಕೆ.ಸಲ್ಮಾನ್ ಸೇಟ್ ಅವರಿಬ್ಬರನ್ನೂ ಅಂಬುಲೆನ್ಸ್ ನಲ್ಲಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕರೆದೋಯ್ಯಲಾಯಿತು.

ಮಹಾ ಶಿವರಾತ್ರಿ ದಿನದಂದು ಮೂವರು ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದನ್ನು ಕಂಡು ನಿಂತಿದ್ದ ಜನರೆಲ್ಲರೂ ಬೆಚ್ಚಿಬಿದ್ದರು. ಮೂಗೂರು ಗ್ರಾಮದಲ್ಲಿಯೂ ದುಃಖದ ಛಾಯೆ ಆವರಿಸಿತು. ಘಟನಾ ಸ್ಥಳಕ್ಕೆ ಎಎಸ್ಪಿ ಪಿ.ವಿ.ಸ್ನೇಹ, ನಂಜನಗೂಡು ಉಪ ವಿಭಾಗದ ಡಿವೈಎಸ್ಪಿ ಪ್ರಭಾಕರ್ ರಾವ್ ಶಿಂಧೆ ಹಾಗೂ ಸಿಪಿಐ ಎಂ.ಆರ್.ಲವ ಬೇಟಿ ನೀಡಿ ಪರಿಶೀಲಿಸಿದರು. ಪೊಲೀಸ್ ಸಬ್ ಇನ್ಸ್ಪೆಕ್ಟರ್ ಷಬ್ಬೀರ್ ಹುಸೇನ್ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Deva
the authorDeva

Leave a Reply

error: Content is protected !!