ಚಿಕ್ಕಮಗಳೂರು: ಬಸ್ ಚಾಲನೆ ಮಾಡುತ್ತಿರುವಾಗಲೇ ಎದೆ ನೋವು ಕಾಣಿಸಿದ್ದು, ಸಮಯಪ್ರಜ್ಞೆ ಮೆರೆದ ಚಾಲಕ ರಸ್ತೆ ಮಧ್ಯೆ ಬಸ್ ನಿಲ್ಲಿಸಿ ಪ್ರಯಾಣಿಕರ ಪ್ರಾಣ ಉಳಿಸಿ ತನ್ನ ಜೀವವನ್ನು ಬಿಟ್ಟಿರುವ ಘಟನೆ ಮೂಡಿಗೆರೆ ತಾಲೂಕಿನ ಹೆಸ್ಗೋಡ್ ಗ್ರಾಮದ ಬಳಿ ನಡೆದಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಹೆ ಸಂಸ್ಥೆಯ ಬಸ್ ಚಾಲಕ ರವಿ ಲಮಾಣಿ (46) ಎಂಬುವರೆ ಹೃದಯಾಘಾತದಿಂದ ಕೊನೆಯುಸಿರೆಳೆದವರು ಇವರು ಕೊಪ್ಪಳದ ಕುಕನೂರು ಗ್ರಾಮದ ನಿವಾಸಿಯಾಗಿದ್ದರು.
ಬಸ್ ಚಾಲನೆ ಮಾಡಿಕೊಂಡು ಮೂಡಿಗೆರೆ, ಗುತ್ತಿಹಳ್ಳಿ ಮಾರ್ಗವಾಗಿ ಹೆಸ್ಗೋಡ್ ಗ್ರಾಮಕ್ಕೆ ಹೋಗುವ ದಾರಿ ಮಧ್ಯೆ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡಿದೆ. ಇದರಿಂದಾಗಿ ಹೆಸ್ಗೋಡ್ ಗ್ರಾಮದ ಬಳಿಯ ರಸ್ತೆ ಮಧ್ಯೆದಲ್ಲೇ ಬಸ್ ನಿಲ್ಲಿಸಿದ್ದಾರೆ.
ಬಸ್ನಲ್ಲಿದ್ದ ಪ್ರಯಾಣಿಕರು, ಸ್ಥಳೀಯರು ಕೂಡಲೇ ಚಾಲಕ ರವಿ ಲಮಾಣಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ ಅಷ್ಟರಲ್ಲಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.
ಹಲವಾರು ಪ್ರಯಾಣಿಕರ ಪ್ರಾಣ ಉಳಿಸಿ ಜೀವಬಿಟ್ಟ ಚಾಲಕ ರವಿ ನಿಜವಾಗಲು ಪ್ರಯಾಣಿಕರ ಪಾಲಿನ ದೇವರಾಗಿದ್ದಾರೆ. ಇವರ ಬಗ್ಗೆ ನಾವು ದುಃಖ ವ್ಯಕ್ತಪಡಿಸಬೇಕೋ ಇಲ್ಲ ದೇವರಾದ ರವಿ ಎಂದು ಕೈ ಮುಗಿಯಬೇಕೋ ಗೊತ್ತಾಗುತ್ತಿಲ್ಲ ಎಂದು ಬಸ್ನಲ್ಲಿದ್ದ ಕೆಲ ಪ್ರಯಾಣಿಕರು ಮಾತನಾಡಿಕೊಳ್ಳುತ್ತಿದ್ದರು.