ಹನೂರು: ಶಾಲಾ – ಕಾಲೇಜು ಮುಗಿಸಿ ಮನೆಗೆ ತೆರಳುವ ವೇಳೆ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ಯಂತ್ರ (ETM) ಕೆಟ್ಟಿದ್ದರಿಂದ ತಾಲೂಕಿನ ಅಜ್ಜಿಪುರ ಸಮೀಪದಲ್ಲಿ ಮಹಿಳೆಯರು ಮತ್ತು ಶಾಲಾ ವಿದ್ಯಾರ್ಥಿನಿಯರನ್ನು ಕಾಡಿನ ಮಧ್ಯೆಯೆ ಇಳಿಸಿ ಬಸ್ ವಾಪಸ್ ಹೋದ ಘಟನೆ ಶನಿವಾರ ಜರುಗಿದೆ.
ಕೊಳ್ಳೇಗಾಲ ಡಿಪೋ ಬಸ್‌ನ ಟಿಕೆಟ್ ನೀಡುವ ಯಂತ್ರ ಕೈಕೊಟ್ಟಿದ್ದರಿಂದ ಮಹಿಳೆಯರಿಗೆ ಉಚಿತ ಟಿಕೆಟ್ ಇರುವ ಕಾರಣ ಅವರಿಗೆ ಟಿಕೆಟ್ ವಿತರಿಸಲು ಸಾಧ್ಯವಾಗಿಲ್ಲ. ಇದರಿಂದ ಮಹಿಳಾ ಪ್ರಯಾಣಿಕರನ್ನು ದಾರಿ ಮಧ್ಯೆ ಇಳಿಸಿ ವಾಪಸ್ ಹನೂರು ಬಸ್‌ನಿಲ್ದಾಣಕ್ಕೆ ಬಸ್ ಹೋಗಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ಕೊಳ್ಳೇಗಾಲದಿಂದ ಹನೂರು ರಾಮಾಪುರ ಮಾರ್ಗದಿಂದ ಹುಗ್ಯಾಮ್ ಕಡೆ ತೆರಳುತಿದ್ದ ಬಸ್ ಕಾಡಿನ ಮದ್ಯೆ ನಿಲ್ಲಿಸಿ ವಿದ್ಯಾರ್ಥಿನಿಯರು ಮತ್ತು ಮಹಿಳೆಯರನ್ನು ಅರಣ್ಯ ವಲಯದಲ್ಲಿ ಇಳಿಸಿ ನಂತರ ಹನೂರು ಬಸ್ ನಿಲ್ದಾಣಕ್ಕೆ ಹಿಂದಿರುಗಿದೆ ಎಂದು ವಿದ್ಯಾರ್ಥಿನಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕೊಳ್ಳೇಗಾಲ ಡಿಪೋನ ಬಸ್ ಇದಾಗಿದ್ದು ಈ ರೀತಿಯ ನಡೆ ನಿಜಕ್ಕೂ ವಿಷಾದನೀಯ. ಮಹಿಳೆಯರು ಮತ್ತು ವಿದ್ಯಾರ್ಥಿನಿಯರನ್ನು ಕಾಡಿನ ಮಧ್ಯೆ ಇಳಿಸಿ ಸಾರಿಗೆ ನೌಕರರು ಮತ್ತು ಅಧಿಕಾರಿಗಳು ವಿಕೃತಿ ಮೆರೆದಿದ್ದಾರೆ. ಈ ಕಾಡಿನಲ್ಲಿ ಕಾಡು ಮೃಗಗಳು ಇವೆ ಒಂದು ವೇಳೆ ಆ ಕಾಡು ಪ್ರಾಣಿಗಳು ದಾಳಿ ಮಾಡಿದ್ದರೆ ಏನಾಗುತ್ತಿತ್ತು ಎಂದು ಸ್ಥಳೀಯರು ಕಿಡಿಕಾರಿದ್ದಾರೆ.
ಇನ್ನು ಬಸ್‌ನಿಂದ ಇಳಿಸಿ ವಾಪಸ್ ಹೋಗಿದ್ದರಿಂದ ಕುಪಿತಗೊಂಡ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಸಾರಿಗೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಆ ಕೋಪದಲ್ಲೇ ನಡೆದುಕೊಂಡೆ ತಮ್ಮ ಗ್ರಾಮವನ್ನು ಸೇರಿದ್ದಾರೆ. ಸದ್ಯ ಯಾವುದೇ ಅನಾಹುತವಾಗಿಲ್ಲ.
ನಿಜಕ್ಕೂ ಇಡೀ ರಾಜ್ಯವೇ ತಲೆತಗ್ಗಿಸುವಂತಹ ಕೆಲಸ ಇದಾಗಿದೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡು ಯಾರು ತಪ್ಪು ಮಾಡಿದ್ದಾರೋ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಮುಂದೆ ಇಂಥ ಅನಾಹುತಗಳು ನಡೆಯದಂತೆ ಎಚ್ಚರ ವಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.