ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರು ಟಿಕೆಟನ್ನು ಪಡೆಯದೆ ಅನಧಿಕೃತವಾಗಿ ಪ್ರಯಾಣ ಮಾಡಿದವರಿಂದ ಸುಮಾರು 6ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ.
ಅನಧಿಕೃತವಾಗಿ ಪ್ರಯಾಣ ಮಾಡುವುದು ಮತ್ತು ಸಂಸ್ಥೆಯ ಸಾರಿಗೆ ಆದಾಯದ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ, ರಾಜ್ಯಾದ್ಯಂತ ಸಂಚರಿಸುವ ವಾಹನಗಳನ್ನು ಸಂಸ್ಥೆಯ ತನಿಖಾ ತಂಡಗಳು ಮೇ-2023 ರ ಮಾಹೆಯಲ್ಲಿ ಒಟ್ಟು 3266 ಪ್ರಕರಣಗಳನ್ನು ಪತ್ತೆಹಚ್ಚಿ, 3636 ಟಿಕೆಟ್ ರಹಿತ ಪ್ರಯಾಣಿಕರಿಂದ ಒಟ್ಟು 5,89,453 ರೂ.ದಂಡ ವಸೂಲಿ ಮಾಡಿ ಸಂಸ್ಥೆಯ ನಿರ್ವಾಹಕರ ವಿರುದ್ದವೂ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಇನ್ನು ನಿಗಮದ ಆದಾಯದಲ್ಲಿ ಸೋರಿಕೆ ಆಗುತ್ತಿದ್ದ 73,859 ರೂ.ಗಳನ್ನುತನಿಖಾಧಿಕಾರಿಗಳು ಮತ್ತಹಚ್ಚಿದ್ದಾರೆ. ಜತೆಗೆ ತಪಿತಸ್ಥ ನೌಕರರ ವಿರುದ್ಧ ಇಲಾಖಾ ರಿತ್ಯಾ ಸೂಕ್ತ ಶಿಸ್ತಿನ ಕ್ರಮವನ್ನು ಜರುಗಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಯಾಣಿಕರು ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸುವಾಗ ಅಧಿಕೃತ ಟಿಕೆಟ್, ದಿನದ ಪಾಸು, ಮಾಸಿಕ ಪಾಸುಗಳನ್ನು ಹೊಂದಿ ಪ್ರಯಾಣಿಸಬೇಕು. ಇದರಿಂದ ಅನಗತ್ಯ ದಂಡ ಕಟ್ಟುವುದನ್ನು ತಡೆಯಬಹುದಾಗಿದೆ. ಜತೆಗೆ ಇಂತಹ ಪ್ರವೃತ್ತಿಯಿಂದ ಸಂಸ್ಥೆಯು ಉತ್ತಮ ಸೇವೆಯನ್ನು ಪ್ರಯಾಣಿಕರಿಗೆ ನೀಡಲು ಸಹಾಯವಾಗುತ್ತದೆ ಎಂದು ತಿಳಿಸಿದ್ದಾರೆ.
ಜನರು ಕೂಡ ಬಸ್‌ನಲ್ಲಿ ಪ್ರಯಾಣಿಸುವಾಗ ಸಂಸ್ಥೆಯ ಸಿಬ್ಬಂದಿಯೊಂದಿಗೆ ಸಹಕರಿಸುವ ಮೂಲಕ ಸಂಸ್ಥೆಯ ಸೇವೆಯನ್ನು ಉಪಯೋಗಿಸಿಕೊಳ್ಳಬೇಕು. ಇದರ ಜತೆಗೆ ಸಂತಸದಿಂದ ತಾವು ತಲುಪಬೇಕಿರುವ ಸ್ಥಳವನ್ನು ತಲುಪಿ ಎಂದು ಮನವಿ ಮಾಡಿದ್ದಾರೆ.