ಬೆಂಗಳೂರು: ನಮ್ಮ ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆ ವೇಳೆ ಸಾರಿಗೆ ನೌಕರರಿಗೆ ಪ್ರಣಾಳಿಕೆ ಮೂಲಕ ಕೊಟ್ಟಿರುವ ಮಾತನ್ನು ಮರೆತಿಲ್ಲ. ನಿಮ್ಮ ವೇತನ ತಾರತಮ್ಯತೆಯನ್ನು ಆದಷ್ಟು ಶೀಘ್ರದಲ್ಲೇ ಸರಿಪಡಿಸುವ ಮೂಲಕ ಈ ನಾಲ್ಕು ವರ್ಷಕೊಮ್ಮೆ ವೇತನ ಸಂಬಂಧ ಆಗುತ್ತಿರುವ ಮುಷ್ಕರಕ್ಕೂ ಶಾಶ್ವತ ಪರಿಹಾರ ನೀಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಶನಿವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆಯ ಪದಾಧಿಕಾರಿಗಳು ಸಚಿವರ ಕಚೇರಿಯಲ್ಲಿ ಭೇಟಿ ಮಾಡಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದ ವೇಳೆ ಮಾತನಾಡಿದ ಅವರು ಈ ಭರವಸೆಯನ್ನು ನೀಡಿದರು.
ಇದೇ ವೇಳೆ ನೌಕರರ ಸಮಾನ ಮನಸ್ಕ ವೇದಿಕೆ ಪದಾಧಿಕಾರಿಗಳು ಸಾರಿಗೆ ನೌಕರರ ದೀರ್ಘಕಾಲದ ಸಮಸ್ಯೆಗಳ ಬಗ್ಗೆ 20-01-2024 ರಂದು ಮೈಸೂರಿನಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಸಭೆಯಲ್ಲಿ ಸಾರಿಗೆ ನೌಕರರ ಸಮಸ್ಯೆ ಮತ್ತು ಸರ್ಕಾರದ ಭರವಸೆಯನ್ನು ಈಡೇರಿಸಲು ತಳೆದಿರುವ ವಿಳಂಬ ನೀತಿಯ ಬಗ್ಗೆ ಸುದೀರ್ಘ ಚರ್ಚೆಯ ನಂತರ ಪ್ರಮುಖ ತೀರ್ಮಾನಗಳನ್ನು ಸರ್ವಾನುಮತದಿಂದ ಸಭೆಯಲ್ಲಿ ತೆದುಕೊಂಡಿದ್ದಾರೆ.
ಈ ನಿರ್ಣಾಯಗಳನ್ನು ಸಂಬಂಧಪಟ್ಟ ಇಲಾಖೆ ಮತ್ತು ಸರ್ಕಾರಕ್ಕೆ ಸಲ್ಲಿಸಲು ಸಮಲುವಾಗಿ ಶನಿವಾರ ಸಾರಿಗೆ ಸಚಿವರನ್ನು ಭೇಟಿ ಮಾಡಿದ್ದರು. ಈ ಹಿಂದೆ ಡಿಸೆಂಬರ್ 2020 ಮತ್ತು ಏಪ್ರಿಲ್ 2021ರ ಸಾರಿಗೆ ಮುಷ್ಕರಕ್ಕೆ ಸಂಬಂಧಿಸಿದಂತೆ ನೌಕರರ ಮೇಲೆ ಕೈಗೊಂಡ ಉಳಿದ ಎಲ್ಲ ಶಿಸ್ತಿನ ಕ್ರಮ, ಅಮಾನತು, ವರ್ಗಾವಣೆ, ಡಿಸ್ಮಿಸಲ್ಸ್ ಮತ್ತು ಪೊಲೀಸ್ ಪ್ರಕರಣಗಳನ್ನು ರದ್ದುಮಾಡಿ, ಅವರ ಮುಷ್ಕರ ಪೂರ್ವದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸುವಂತೆ ಸಚಿವರಲ್ಲಿ ಕೇಳಿಕೊಂಡರು.
ಇದೇ ವೇಳೆ ಸರ್ಕಾರವು ಚುನಾವಣಾ ಪೂರ್ವದಲ್ಲಿ ಘೋಷಿಸಿದ್ದ ಪ್ರಣಾಳಿಕೆಗಳಲ್ಲಿ ಒಂದಾದ ನಮ್ಮ ಸಂಘಟನೆಯ ಮುಖ್ಯ ಬೇಡಿಕೆಯಾದ ಸರ್ಕಾರಿ ನೌಕರರಿಗೆ, ಸರಿ ಸಮಾನ ವೇತನ ಮತ್ತು ಸವಲತ್ತುಗಳನ್ನು ಸಾರಿಗೆ ನೌಕರರಿಗೂ ಸಹ ಪರಿಗಣಿಸುವಂತೆ ನೀಡಿದ್ದ ಭರವಸೆಯನ್ನು ಸ್ವಾಗತಿಸಿ, ಅದರಂತೆ ಸರ್ಕಾರವು ಕಾಲ ವಿಳಂಬವಿಲ್ಲದೆ ಅನುಷ್ಠಾನಕ್ಕೆ ತಂದು, ಸಾರಿಗೆ ನೌಕರರಿಗೆ ನೀಡಿದ್ದ ಆಶ್ವಾಸನೆಯನ್ನು ಕೂಡಲೆ ಜಾರಿ ಮಾಡುವಂತೆ ಮನವಿ ಮಾಡಿದರು.
ಸಂಸ್ಥೆಯು 1996 ರಿಂದ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಚುನಾವಣೆ ನಡೆಸಿ ಸಂಘಗಳ ಮಾನ್ಯತೆ ಪ್ರಶ್ನೆಯನ್ನು ಪ್ರಜಾಪ್ರಭುತ್ವದನ್ವಯ ನಿರ್ಧರಿಸಬೇಕಿತ್ತು. ಆದರೆ ಅಂದಿನಿಂದ ಇದುವರೆವಿಗೂ ಚುನಾವಣೆ ಮಾಡದೆ ನೌಕರರ ಬಹುಮತ ಕಳೆದುಕೊಂಡಿರುವ ಸಂಘಗಳಿಗೆ ಮಾನ್ಯತೆ ಮುಂದುವರಿಸುತ್ತಿರುವುದು ಕಾನೂನು ಬಾಹಿರವಾಗಿರುತ್ತದೆ.
ಸಂಸ್ಥೆಯು 1996 ರಿಂದ ಕೈಗಾರಿಕಾ ವಿವಾದ ಕಾಯ್ದೆಯಡಿಯಲ್ಲಿ ಸಂಸ್ಥೆ ಮತ್ತು ನೌಕರರ ನಡುವೆ ಯಾವುದೇ ಒಪ್ಪಂದವಾಗದೆ ಏಕಪಕ್ಷೀಯವಾಗಿ ಸಂಸ್ಥೆ ಜಾರಿ ಮಾಡುತ್ತಿರುವ ವೇತನ ಪರಿಷ್ಕರಣೆಗಳು ಕಾನೂನು ಬಾಹಿರವಾಗಿರುವ ಕಾರಣ ಸಂಸ್ಥೆಯು ಈ ಕೂಡಲೆ ಚುನಾವಣೆಯನ್ನು ನಡೆಸಿ, ಮಾನ್ಯತೆ ಪ್ರಶ್ನೆ ಇತ್ಯರ್ಥ ಮಾಡುವಂತಾಗಬೇಕು.
ಇನ್ನು ಪ್ರಮುಖವಾಗಿ 01/01/2020 ರಿಂದ ಅನ್ವಯವಾಗುವಂತೆ ನಾಲ್ಕು ಸಾರಿಗೆ ನಿಗಮಗಳ ಸಿಬ್ಬಂದಿಗಳಿಗೆ ಒಂದೇ ಕಂತಿನಲ್ಲಿ ವೇತನದ ಹಿಂಬಾಕಿಯನ್ನು ಪಾವತಿಸುವುದು. ಮುಖ್ಯವಾಗಿ 2020 ರಿಂದ ನಿವೃತ್ತರಾದ ನೌಕರರಿಗೆ 01/01/2020 ರಿಂದ ವೇತನ ವಿಮರ್ಷೆ ಮಾಡಿ ಬಾಕಿ ಹಣವನ್ನು ಮತ್ತು ಹಿಂಬಾಕಿ ಮೊತ್ತವನ್ನು ಕೂಡಲೇ ಪಾವತ್ತಿಸಬೇಕು.
ಸಾರಿಗೆ ನೌಕರರಿಗೆ ಮತ್ತು ಅವರ ಅವಲಂಬಿತರಿಗೆ ಉಚಿತ ಆರೋಗ್ಯ ಭಾಗ್ಯ ಯೋಜನೆ ಜಾರಿಗೆ ತರಬೇಕು. ನಾಲ್ಕು ಸಾರಿಗೆ ನಿಗಮಗಳಲ್ಲಿ ಏಕರೂಪದ ಸಮಾನ ತಪ್ಪಿಗೆ, ಸಮಾನ ಶಿಕ್ಷೆ ಪದ್ದತಿ ಜಾರಿಗೆ ತರಬೇಕು.
ಸಾರಿಗೆ ಸಂಸ್ಥೆಯಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಖಾಸಗಿ ಚಾಲಕರನ್ನು ಮತ್ತು ನಿರ್ವಾಹಣೆಯನ್ನು ಹಾಗೂ ಇತರೆ ವಾಹನಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಚಾಲನಾ, ತಾಂತ್ರಿಕ ಮತ್ತು ಭದ್ರತಾ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವ ಮೂಲಕ ಪರೋಕ್ಷವಾಗಿ ಮುಂದಿನ ದಿನಗಳಲ್ಲಿ ಸಂಸ್ಥೆಯನ್ನು ಖಾಸಗೀಕರಣ ಮಾಡುವ ಯೋಜನೆಯನ್ನು ಕೂಡಲೇ ಕೈ ಬೀಡಬೇಕು.
ಸಾರಿಗೆ ನಿಗಮಗಳು ನಮ್ಮ ಸಂಘದ ವಿರುದ್ಧ ತಳೆದಿರುವ ನೌಕರ ವಿರೋಧಿ ನಿಲುವನ್ನು ಈ ಕೂಡಲೆ ಬದಲಾಯಿಸಿ, ಈ ಮೇಲೆ ತಿಳಿಸಿರುವ ಮುಖ್ಯ ಬೇಡಿಕೆಗಳ ಬಗ್ಗೆ ನಮ್ಮ ವೇದಿಕೆಯ ಪ್ರತಿನಿಧಿಗಳೊಡನೆ ಮುಕ್ತವಾಗಿ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸಿ ಕೈಗಾರಿಕಾ ಬಾಂಧವ್ಯವನ್ನು ಉತ್ತಮಪಡಿಸುವಂತೆ ರಾಜ್ಯ ಸರ್ಕಾರ ಹಾಗೂ ಸಂಸ್ಥೆಯನ್ನು ಒತ್ತಾಯಿಸುವಂತೆ ವೇದಿಕೆಯು ಕರೆ ನೀಡಿದೆ.
ಒಂದು ವೇಳೆ ಸಂಸ್ಥೆ ಮತ್ತು ಸರ್ಕಾರವು ಈ ನಮ್ಮ ತೀರ್ಮಾನಗಳನ್ನು ಚರ್ಚಿಸಿ ಪರಿಹಾರ ನೀಡಲು ಮುಂದೆಬರದಿದ್ದಲ್ಲಿ, ಈ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಯಶಸ್ವಿಗೊಳಿಸಲು ನೌಕರರು ತೆಗೆದುಕೊಳ್ಳಬೇಕಾದ ಮುಂದಿನ ನಿಲುವು ಹಾಗೂ ಅವಶ್ಯ ಬಂದಲ್ಲಿ ಹೋರಾಟ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಜ್ಜಾಗಬೇಕೆಂದು ಸರ್ವಾನುಮತದಿಂದ ಕರೆ ನೀಡಲಾಗುವುದು.
ಆದರೆ ಇಂಥ ಹೋರಾಟಗಳಿಗೆ ಆಸ್ಪದ ಕೊಡದೆ ರಾಜ್ಯ ಸರ್ಕಾರ ಮತ್ತು ಸಂಸ್ಥೆಯು ಈ ಹಿಂದಿನ ಅನುಭವ ಮತ್ತು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ 1.07 ಲಕ್ಷ ನೌಕರರ ಭವಿಷ್ಯದ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಮುಂದೆ ಬರುವುದಾಗಿ ಭರವಸೆ ಹೊಂದಿದ್ದು, ನಮ್ಮ ಸಂಘಟನೆಯ ಜತೆ ಸೌಹಾರ್ದಯುತವಾಗಿ ಸ್ಪಂದಿಸಿ ಮಾತುಕತೆ ಮಾಡುತ್ತೀರೆಂದು ನಂಬಿದ್ದೇವೆ.
ಹೀಗಾಗಿ ತಾವು ಅತೀ ಶೀಘ್ರದಲ್ಲೇ ನಮ್ಮ ಈ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸಾರಿಗೆ ಸಚಿವರಿಗೆ ಸಮಾನ ಮನಸ್ಕರ ವೇದಿಕೆ ಪದಾಧಿಕಾರಿಗಳು ಮನವಿ ಮಾಡಿದ್ದರು, ವೇದಿಕೆಯ ಪದಾಧಿಕಾರಿಗಳ ಮಾಡಿದ ಮನವಿಗೆ ಸ್ಪಂದಿಸಿದ ಸಚಿವರು ನಾವೇ ಕೊಟ್ಟಿರುವ ಭರವಸೆಗಳನ್ನು ಮೆರೆಯುವುದಿಲ್ಲ ನಮ್ಮ ಪಕ್ಷ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತದೆ ಹಂತ ಹಂತವಾಗಿ ನಿಮ್ಮ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ರಾಮಲಿಂಗಾರೆಡ್ಡಿ ತಿಳಿಸಿರುವುದಾಗಿ ಪದಾಧಿಕಾರಿಗಳು ಹೇಳಿದ್ದಾರೆ.