KSRTC: ಮಹಿಳಾ ಪ್ರಯಾಣಿಕರೊಡನೆ ಅತ್ಯಂತ ಕೆಟ್ಟ ವರ್ತನೆ- ವಜಾಕ್ಕೆ ಕ್ರಮ ಕೈಗೊಳ್ಳಲು ಎಂಡಿಗೆ ಸಚಿವರ ಸೂಚನೆ


ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗ ಮಂಗಳೂರು 3ನೇ ಘಟಕದ ಬಸ್ಸಿನಲ್ಲಿ ನಿರ್ವಾಹಕನೊಬ್ಬ ಮಹಿಳಾ ಪ್ರಯಾಣಿಕರೊಡನೆ ಅತ್ಯಂತ ಕೆಟ್ಟದಾಗಿ ನಡೆದುಕೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದ ವಿಡಿಯೋಗೆ ಸಂಬಂಧಪಟ್ಟಂತೆ, ಮೇಲ್ನೋಟಕ್ಕೆ ಆರೋಪ ಸಾಬೀತಾಗಿದ್ದು ಈ ಹಿನ್ನೆಯಲ್ಲಿ ಆತನನ್ನು ಅಮಾನತು ಮಾಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಈ ಬಗ್ಗೆ ಇಂದು ಸಂಜೆ ಎಂಡಿಗೆ ಆದೇಶ ಮಾಡಿರುವ ಅವರು, ಈಗಾಗಲೇ ನಿರ್ವಾಹಕನನ್ನು ಅಮಾನತು ಮಾಡಿರುವುದು ಸರಿಯಷ್ಟೇ. ಬಸ್ಸಿನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ಹೆಣ್ಣು ಮಕ್ಕಳೊಡನೆ ಗೌರವದೊಂದಿಗೆ ನಡೆದುಕೊಳ್ಳುವುದು ನಮ್ಮ ಸಿಬ್ಬಂದಿಗಳ ಆದ್ಯ ಕರ್ತವ್ಯವಾಗಿರಬೇಕು. ಈ ರೀತಿಯ ಅಸಹ್ಯಕರ ನಡವಳಿಕೆ ಅಕ್ಷಮ್ಯ ಅಪರಾಧ ಎಂದು ಹೇಳಿದ್ದಾರೆ.
ಅಲ್ಲದೆ ಕೆಎಸ್ಆರ್ಟಿಸಿ ಬಸ್ಸುಗಳು ಹಾಗೂ ಚಾಲಕ- ನಿರ್ವಾಹಕರ ಬಗ್ಗೆ ಸಾರ್ವಜನಿಕ ಪ್ರಯಾಣಿಕರು ಅತೀವ ನಂಬಿಕೆ ಮತ್ತು ಪ್ರೀತಿ ಹೊಂದಿದ್ದಾರೆ. ಕೆಲವೊಬ್ಬರು ಮಾಡುವ ಈ ರೀತಿಯ ಕೆಲಸಗಳು ಸಂಸ್ಥೆ ಹಾಗೂ ಸಿಬ್ಬಂದಿಗಳ ಗೌರವಕ್ಕೆ ಧಕ್ಕೆ ತರುವಂತಹದು. ಈ ಘಟನೆಗೆ ಸಂಬಂಧಪಟ್ಟಂತೆ ಕೂಡಲೇ ವಿಚಾರಣಾ ಪ್ರಕ್ರಿಯೆ ಪ್ರಾರಂಭಿಸಿ, ತ್ವರಿತವಾಗಿ ವಿಚಾರಣೆ ಮುಗಿಸಿ, ಆ ನಿರ್ವಾಹಕನನ್ನು ಸೇವೆಯಿಂದಲೇ ವಜಾ ಮಾಡಲು ಕ್ರಮಕೈಗೊಳ್ಳುವಂತೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.
ಪೊಲೀಸರಿಂದ ಸ್ವಯಂಪ್ರೇರಿತ ದೂರು: ಮಹಿಳಾ ಪ್ರಯಾಣಿಕರೊಬ್ಬರ ಗುಪ್ತಾಂಗ ಸ್ಪರ್ಶಿಸಿ ಅಸಭ್ಯವಾಗಿ ನಡೆದುಕೊಂಡ ನಿರ್ವಾಹಕನನ್ನು ಈಗಾಗಲೇ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ವಶಕ್ಕೆ ಪಡೆದಿದ್ದಾರೆ.
KSRTC ಮಂಗಳೂರು ವಿಭಾಗದ 3ನೇ ಘಟಕದ ಉಲ್ಲಾಳ-ಮುಡಿಪು ಮಾರ್ಗದಲ್ಲಿ ಚಲಿಸುತ್ತಿದ್ದಾಗ ಶೀಟ್‌ನಲ್ಲಿ ಕುಳಿತಿದ್ದ ಮಹಿಳೆ ಪಕ್ಕದಲ್ಲಿ ಹೋಗಿ ನಿಂತುಕೊಂಡ ನಿರ್ವಾಹಕ ಪ್ರದೀಪ್ ನಾಯ್ಕರ್ ಎಂಬಾತ ಆಕೆಯ ಎದೆ ಭಾಗವನ್ನು ಸ್ಪರ್ಶಿಸಿದ್ದಾನೆ.
ಇತ್ತ ನಿರ್ವಾಹಕ ಅಸಭ್ಯವಾಗಿ ವರ್ತಿಸಿದ್ದಾನೆ ಎಂಬ ವಿಷಯ ತಿಳಿಯುತ್ತಿದ್ದಂತೆ ಮಂಗಳೂರು ಪೊಲೀಸರು ನಿರ್ವಾಹಕನನ್ನು ವಶಕ್ಕೆ ಪಡೆದಿದ್ದು, ಸುಮೋಟೊ ಕೇಸ್ ದಾಖಲಿಸಿ FIR ಕೂಡ ಮಾಡಿದ್ದಾರೆ.

ಇನ್ನು ಬೆಂಗಳೂರಿನಲ್ಲಿರುವ ಸಾರಿಗೆ ಕೇಂದ್ರ ಕಚೇರಿಯಿಂದ ಈತನ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲು ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಡಿಸಿ ನಿರ್ವಾಹಕನ ಅಮಾನತು ಆದೇಶ ಮಾಡಿದ್ದರು.
Related
