ಮೈಸೂರು: ಲಂಚ ಸ್ವೀಕರಿಸುವಾಗ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಒಬ್ಬರು ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಗರದ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಇಂದು ನಡೆದಿದೆ.
ಕುವೆಂಪುನಗರ ಪೊಲೀಸ್ ಠಾಣೆ ಸಬ್ ಇನ್ಸಪೆಕ್ಟರ್ ರಾಧ ಲೋಕಾಯುಕ್ತ ಬಲೆಗೆ ಬಿದ್ದ ಲಂಚಬಾಕ ಪೊಲೀಸ್ ಅಧಿಕಾರಿ.
ಕ್ರಿಮಿನಲ್ ಕೇಸ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕುವೆಂಪು ನಗರದ ವ್ಯಕ್ತಿಯೊಬ್ಬರಿಂದ 50 ಸಾವಿರ ರೂ. ಲಂಚ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ರಾಧರನ್ನು ಬಂಧಿಸಿದ್ದಾರೆ.
ಪ್ರಕರಣ ಒಂದರಲ್ಲಿ ಜಪ್ತಿಯಾಗಿದ್ದ ಲಾಕರ್ ಕೀ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಸಬ್ ಇನ್ಸ್‌ಪೆಕ್ಟರ್ ರಾಧ. 1 ಲಕ್ಷ ರೂ. ಡಿಮ್ಯಾಂಡ್ ಮಾಡಿದ್ದು ಅದರಲ್ಲಿ ಪೊಲೀಸ್ ಠಾಣೆಯಲ್ಲಿ 50 ಸಾವಿರ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ಬಲೆ ಬೀಸಿ ಖೆಡ್ಡಕ್ಕೆ ಕೆಡವಿದ್ದಾರೆ.
ಲೋಕಾಯುಕ್ತ ಎಸ್ಪಿ ಸಜಿತ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿವೈಎಸ್‌ಪಿ ಮಾಲ್ತೇಶ್, ಕೃಷ್ಣಯ್ಯ ಸೇರಿ ಹಲವರು ಭಾಗಿಯಾಗಿದ್ದರು.