ಮೈಸೂರು: ಕಾರ್ಮಿಕರೆಂದರೆ ಅದರಲ್ಲೂ ವಿಶೇಷವಾಗಿ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರೆಂದರೆ ಕಡಿಮೆ ಹಣಕ್ಕೆ ಹೆಚ್ಚು ಕೆಲಸ ಮಾಡಿಕೊಡುವ ಕಾಯಕ ಜೀವಿಗಳಾಗಿದ್ದು ಒಂದು ರೀತಿ ಇವರು ದುಡಿಮೆಯನ್ನೇ ನಂಬಿರುವ ಬೆವರಿನ ಮಕ್ಕಳಾಗಿದ್ದು ಆರ್ಥಿಕವಾಗಿ ಇವರು ಸಬಲರಾಗಲು ನಮ್ಮ ಸರ್ಕಾರಗಳು ಇವರಿಗೆ ಹೆಚ್ಚಿನ ಸವಲತ್ತುಗಳನ್ನು ಕೊಡ ಬೇಕೆಂದು ಪತ್ರಕರ್ತರೂ ಆದ ಸಾಹಿತಿ ಬನ್ನೂರು ಕೆ.ರಾಜು ಅಭಿಪ್ರಾಯಪಟ್ಟರು.
ನಗರದ ಸರಸ್ವತಿ ಪುರಂನ ರೋಟರಿ ಪಶ್ಚಿಮ ಶಾಲೆಯ ಸಭಾಂಗಣದಲ್ಲಿ ನಡೆದ ಪ್ರತಿಷ್ಠಿತ ಕಾರ್ಮಿಕ ಸಂಘಟನೆಗಳಲ್ಲೊಂದಾದ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕೋತ್ಸವ ಮತ್ತು ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಜಯಂತಿ ಹಾಗೂ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ನಲ್ಲಿ ಮತ್ತು ಒಳಚರಂಡಿಯಲ್ಲಿ ಸ್ವಚ್ಛವಾಗಿ ಸರಾಗವಾಗಿ ನೀರು ಹರಿಯುವ ಸುವ್ಯವಸ್ಥೆಗೆ ತಮ್ಮ ಬೆವರನ್ನೇ ಹರಿಸಿ ದುಡಿಯುತ್ತಿರುವ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ದುಡಿಮೆಯ ಬೆವರಿಗೆ ಬೆಲೆ ಕಟ್ಟಲಾಗದೆಂದರು.
ಅರ್ಹ ಕಾರ್ಮಿಕರು ಇಲಾಖೆಯಿಂದ ಗುರುತಿನ ಕಾರ್ಡ್ ಮತ್ತು ಸವಲತ್ತುಗಳನ್ನು ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಬಹಳ ತ್ರಾಸದಾಯಕವಾಗಿದ್ದು ಅದರಲ್ಲೂ ಅವಿದ್ಯಾವಂತರಿಗೆ ಇದು ಕಷ್ಟಕರವಾಗಿದೆ. ಆದ್ದರಿಂದ ಎಲ್ಲಾ ಕಾರ್ಮಿಕರಿಗೂ ಸುಲಭವಾಗುವಂತೆ ಇದನ್ನು ಸರಳಗೊಳಿಸಬೇಕು. ಇಲ್ಲವಾದರೆ ಕಾರ್ಮಿಕರು ದಲ್ಲಾಳಿಗಳ ಕೈಗೆ ಸಿಲುಕಿ ಒಂದಕ್ಕೆ ಒಂಭತ್ತು ಖರ್ಚು ಮಾಡಬೇಕಾಗುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಅರ್ಹ ಕಾರ್ಮಿಕರಿಗೇ ಅವಕಾಶ ಇಲ್ಲದಂತಾಗುತ್ತದೆ. ಹಾಗಾಗಿ ಕಾರ್ಮಿಕ ಇಲಾಖೆಯೇ ನೇರವಾಗಿ ಕಾರ್ಮಿಕರನ್ನು ಗುರುತಿಸುವಂತಾಗಬೇಕೆಂದು ಬನ್ನೂರು ರಾಜು ಹೇಳಿದರು.
ಇವತ್ತಿಗೂ ನಾಡಿನಲ್ಲಿ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಹಾಗು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಮಹತ್ತ್ವದ ಸ್ಥಾನವಿದೆ.ಕಾರಣ ಅವರ ಕಾಯಕ ಮತ್ತು ಅದರಿಂದ ಅವರು ಜೋಡೆತ್ತು ಗಳಂತೆ ದುಡಿದು ನಾಡುಕಟ್ಟಿದ ರೀತಿ. ಇವರು ಅಂದಿನ ಕಾಲದಲ್ಲಿಯೇ ಕೆರೆ-ಕಟ್ಟೆ, ಅಣೆಕಟ್ಟೆಗಳು, ಓದು-ಶಿಕ್ಷಣ, ಶೈಕ್ಷಣಿಕ ಸಂಸ್ಥೆಗಳು, ಅರಮನೆ- ಗುರುಮನೆಗಳು, ಕೃಷಿ-ಪಶು ಸಂಗೋಪನೆ, ಮಹಿಳಾಭಿವೃದ್ಧಿ, ಕೈಗಾರಿಕೆಗಳು, ಆಸ್ಪತ್ರೆಗಳು ಸೇರಿದಂತೆ ಪ್ರತಿಯೊಂದನ್ನು ತಮ್ಮ ಕಾಯಕ ಪ್ರಜ್ಞೆಯಿಂದ ಪ್ರಾಮಾಣಿಕವಾಗಿ ಮಾಡಿ ಪ್ರಜೆಗಳಿಗೆ ಎಲ್ಲವನ್ನೂ ಒದಗಿಸಿಕೊಟ್ಟಿದ್ದ ಇವರುಗಳು ಪ್ರತಿಯೊಬ್ಬರಿಗೂ ಆದರಲ್ಲೂ ವಿಶೇಷವಾಗಿ ಕಾರ್ಮಿಕರಿಗೆ ಮಾದರಿಯಾಗಬೇಕೆಂದು ತಿಳಿಸಿದರು.
ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದ ಜೆ.ಗೋಪಿ ಅವರು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ನಂತರ ಮಾತನಾಡಿದ ಅವರು, ಕಾರ್ಮಿಕರ ಮಕ್ಕಳು ಕಾರ್ಮಿಕರಾಗಿಯೇ ಇರಬೇಕಿಲ್ಲ. ಅವರೂ ಕೂಡ ಮನಸ್ಸು ಮಾಡಿದರೆ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳು, ವೈದ್ಯರು, ಇಂಜಿನಿಯರ್ಗಳಾಗಬಹುದು. ಆ ಶಕ್ತಿ ನಿಮ್ಮಲ್ಲಿದೆ. ಇದನ್ನು ನೀವು ಸಾಧಿಸಬೇಕೆಂದು ಶುಭ ಹಾರೈಸಿದರು.
ಲೇಖಕಿ ರತ್ನಾ ಹಾಲಪ್ಪಗೌಡ, ಕಾರ್ಮಿಕ ಇಲಾಖೆಯ ನಿರೀಕ್ಷರಾದ ರವಿಕುಮಾರ್ , ಉದ್ಯಮಿ ಮಹಾಂತೇಶ್ ಮುಂತಾದವರು ಕಾರ್ಯಕ್ರದಲ್ಲಿ ಮಾತನಾಡಿದರು. ಸಂಘದ ಜಂಟಿ ಕಾರ್ಯದರ್ಶಿ ಎಸ್.ಪಳನಿ ಸ್ವಾಮಿ ವಾರ್ಷಿಕ ವರದಿ ಮಂಡಿಸಿದರು. ಪ್ರಾರಂಭದಲ್ಲಿ ನಿರ್ದೇಶಕ ಚಂದ್ರೇಗೌಡರು ಪ್ರಾರಂಭದಲ್ಲಿ ಪ್ರಾಸ್ತಾವಿಕಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಸಂಘದ ಅಧ್ಯಕ್ಷ ಮಹೇಶ್ ಎಸ್.ಜಯನಗರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾನೂನು ಸಲಹೆಗಾರ ಎನ್.ಸುಂದರ್ ರಾಜ್, ಲೆಕ್ಕ ಪರಶೋಧಕ ಡಿ.ಜಲೇಂದ್ರ, ಉಪಾಧ್ಯಕ್ಷ ಎಂ.ಎಸ್.ಸುರೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ರವಿ ಕುಮಾರ್, ಜಂಟಿ ಕಾರ್ಯದರ್ಶಿ ಪಳನಿಸ್ವಾಮಿ, ಖಜಾಂಚಿ ಎಂ.ಪ್ರಕಾಶ್, ನಿರ್ದೇಶಕರಾದ ಚಂದ್ರೇಗೌಡ, ಕುಮಾರ್, ಯೋಗೇಶ್ ಹೆಬ್ಬಾಳ್, ಸುರೇಶ್, ಅನಿಲ್ ಕುಮಾರ್, ಮೊಹಮದ್ ಜಾಕಿರ್ ಹುಸೇನ್, ಸಂತೋಷ್ ಕುಮಾರ್ ಬೇಹರ,ಯೋಗೇಶ್, ರುದ್ರಸ್ವಾಮಿ, ಶಿವರಾಜು ಉಪಸ್ಥಿತರಿದ್ದರು.