ಬೆಂಗಳೂರು: ಪ್ರತಿವರ್ಷಂತ ಈ ಬಾರಿಯೂ ಕೂಡ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಬೆಂಗಳೂರಿನ ತೋಟಗಾರಿಕಾ ಇಲಾಖೆಯು ಲಾಲ್‌ಬಾಗ್‌ನಲ್ಲಿ 216ನೇ ಫಲಪುಷ್ಪ ಪ್ರದರ್ಶನವನ್ನು ಆಯೋಜನೆ ಮಾಡಿ.
ಈ ಬಾರಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಜೀವನ ಗಾಥೆಯನ್ನು ಹೂಗಳಲ್ಲಿ ಅನಾವರಣಗೊಳಿಸಿದ್ದು, ಆಗಸ್ಟ್ 8 ರಿಂದ 19ರ ವರೆಗೆ ಈ ಫಲಪುಷ್ಪ ಪ್ರದರ್ಶನವಿರಲಿದೆ.
ಆಗಸ್ಟ್ 8ರ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ.
ಇನ್ನು ಈ ಬಾರಿ ಫಲಪುಷ್ಪ ಪ್ರದರ್ಶನದಲ್ಲಿ 200 ಪ್ರಬೇಧದ ಸುಮಾರು 32 ಲಕ್ಷ ಹೂಗಳನ್ನ ಪ್ರದರ್ಶನಕ್ಕಿಡಲಾಗಿದೆ. ಹೊರ ರಾಜ್ಯದಿಂದ ಆಮದು ಮಾಡಿಕೊಳ್ಳಲಾದ ಗಿಡಗಳನ್ನು ಸಾರ್ವಜನಿಕರು ಕಣ್ತುಂಬಿಕೊಳ್ಳಬಹುದಾಗಿದೆ.
ಈ ನಡುವೆ ಪ್ರತಿಬಾರಿಯಂತೆ ಈ ಸಲವು ಪ್ರದರ್ಶನದ ವೀಕ್ಷಣೆಗೆ ಬರುವವರಿಗೆ ಟಿಕೆಟ್ ವ್ಯವಸ್ಥೆ ಕೂಡ ಮಾಡಲಾಗಿದೆ. ವಯಸ್ಕರಿಗೆ 100 ರೂ. ಮಕ್ಕಳಿಗೆ 30 ರೂ. ನಿಗದಿಪಡಿಸಲಾಗಿದ್ದು, ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಜತೆಗೆ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಗಾಜಿನ ಮನೆಯ ಕೇಂದ್ರ ಭಾಗದ ಹಿಂಭಾಗದಲ್ಲಿ ಅಂಬೇಡ್ಕರ್ ಅವರ ವ್ಯಕ್ತಿತ್ವ ಮತ್ತು ಸಾಧನೆ ಬಿಂಬಿಸುವ ಮಹಾಡ್ ಸತ್ಯಾಗ್ರಹ, ಕಲಾರಾಮ್ ದೇವಸ್ಥಾನದ ಪ್ರವೇಶ, ಕೊರೆಂಗಾವ್ ವಿಜಯೋತ್ಸವದ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಭಾರತದ ಭೂಪಟ ಮತ್ತು ಸಂವಿಧಾನ ಪೀಠಿಕೆ ಸೇರಿದಂತೆ ಇನ್ನೂ ಅನೇಕ ಕಲಾಕೃತಿಗಳು, ಸ್ತಬ್ಧ ಚಿತ್ರಗಳು ಪ್ರೇಕ್ಷಕರ ಗಮನ ಸೆಳೆಯಲಿವೆ.