ತುಮಕೂರು: ವಿವಾಹಿತನೊಂದಿಗೆ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇಬ್ಬರ ಮೃತದೇಹಗಳನ್ನು ಅಗ್ನಿ ಶಾಮಕ ಸಿಬ್ಬಂದಿ ಕೆರೆಯಿಂದ ಹೊರ ತೆಗೆದಿದ್ದಾರೆ.
ಕೋಳಾಲ ಹೋಬಳಿ ಲಕ್ಕಯ್ಯನಪಾಳ್ಯದ ವಿದ್ಯಾರ್ಥಿನಿ ಅನನ್ಯ (19) ಹಾಗೂ ಬೈರಗೊಂಡ್ಲು ಗ್ರಾಮದ ವಿವಾಹಿತ ರಂಗಶಾಮಣ್ಣ (50) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು ಎನ್ನಲಾಗುತ್ತಿದೆ.
ನಿನ್ನೆ ಕೊರಟಗೆರೆ ತಾಲೂಕಿನ ಮಾವತ್ತೂರು ಕೆರೆ ನೀರಿಗೆ ಇಬ್ಬರು ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಇಬ್ಬರು ಕೆಲವು ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ತಮ್ಮ ಪ್ರೀತಿಯ ಬಗ್ಗೆ ತಮ್ಮ ತಮ್ಮ ಮನೆಯಲ್ಲಿ ಹೇಳಿಕೊಂಡಿದ್ದರು. ಆದರೆ ಇವರ ನಡುವಿನ ವಯಸ್ಸಿನ ಅಂತರ ನೋಡಿ ಮನೆಯಲ್ಲಿ ಪ್ರೀತಿಯನ್ನು ನಿರಾಕರಿಸಿ ಬುದ್ಧಿ ಹೇಳಿದ್ದರು ಎನ್ನಲಾಗಿದೆ.
ಅದಾದ ಬಳಿಕ ಕಳೆದ 4 ದಿನಗಳ ಹಿಂದೆ ಈ ಪ್ರೇಮಿಗಳು ಮನೆಯಿಂದ ನಾಪತ್ತೆಯಾಗಿದ್ದರು. ಈ ಸಂಬಂಧ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಆದರೆ ನಿನ್ನೆ ಮಾವತ್ತೂರು ಕೆರೆಯ ದಡ ಮೇಲೆ ಇಬ್ಬರ ಚಪ್ಪಲಿ ಹಾಗೂ ಮೊಬೈಲ್ ಇರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕೆರೆಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಅನುಮಾನದ ಮೇರೆಗೆ ಹುಡುಕಾಟ ನಡೆಸಲಾಗಿತ್ತು.
ಇಂದು ಬೆಳಗ್ಗೆ ಇಬ್ಬರ ಮೃತದೇಹಗಳನ್ನು ಅಗ್ನಿ ಶಾಮಕ ಸಿಬ್ಬಂದಿ ಪತ್ತೆ ಮಾಡಿದ್ದಾರೆ. ಸ್ಥಳದಲ್ಲಿ ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ಸ್ಥಳೀಯರು ಇದ್ದರು.