ದೇವಲಾಪುರ: ನಾವು ವಾಸಿಸುವ ನಮ್ಮ ಸುತ್ತಲಿನ ಪರಿಸರ ಮನೆಯಲ್ಲಿನ ಸ್ವಚ್ಛತೆ ಕಾಪಾಡಿಕೊಂಡು ರೋಗಮುಕ್ತವಾಗಲು ಸಾರ್ವಜನಿಕರು ಸಹಕರಿಸಬೇಕೆಂದು ವೈದ್ಯಾಧಿಕಾರಿ ಚೇತನ್ ಕರೆ ನೀಡಿದರು.
ಇಂದು ನಾಗಮಂಗಲ ತಾಲೂಕು ದೇವಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ದೇವಲಾಪುರದಲ್ಲಿ ಡೆಂಗ್ಯೂ ಮಾಸಾಚರಣೆ ಹಾಗೂ ಡೆಂಗ್ಯೂ ಜ್ವರ ತರುವ ಇಡಿಸ್ ಸೊಳ್ಳೆ ನಾಶ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮದಲ್ಲಿ ನೀರು ಶೇಖರಣೆ ಮಾಡುವ ತೊಟ್ಟಿಗಳು ಡ್ರಮ್‌ಗಳು ಇತರೆ ಪದಾರ್ಥಗಳನ್ನು ಘನತಾಜ್ಯ ವಸ್ತುಗಳನ್ನು ಸಮೀಕ್ಷೆ ಮಾಡೋ ಮೂಲಕ ಸಾರ್ವಜನಿಕರುಗಳಿಗೆ ಅರಿವು ಮೂಡಿಸಲಾಯಿತು.
ಮಾರಕವಾದ ಡೆಂಗ್ಯೂ ರೋಗವು ಈಡಿಸ್ ಈಜೀಪ್ಟಿ ಎಂಬ ಹೆಣ್ಣು ಸೊಳ್ಳೆ ಕಚ್ಚುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ನೀರಿನಲ್ಲಿ ತನ್ನ ಸಂತಾನೋತ್ಪತ್ತಿಯನ್ನು ಬೆಳೆಸುವ ಈ ಸೊಳ್ಳೆಯು 7 ದಿನಗಳಲ್ಲಿ ಮೊಟ್ಟೆಯಿಂದ ಮರಿ ಸೊಳ್ಳೆಯಾಗಿ ಪರಿವರ್ತನೆಗೊಳ್ಳುತ್ತದೆ.
ಡೆಂಗ್ಯೂ ಹಾಗೂ ಚಿಕೂನ್‍ಗುನ್ಯಾ ರೋಗಗಳು ವೈರಾಣುವಿನಿಂದ ಬರುವ ಕಾಯಿಲೆಗಳು. ಡೆಂಗ್ಯೂ ಜ್ವರ ಮಾರಕವಾದರೆ, ಚಿಕೂನ್‍ಗುನ್ಯಾ ಮಾರಣಾಂತಿಕವಲ್ಲ. ರೋಗ ಖಚಿತಪಟ್ಟಲ್ಲಿ ಸೂಕ್ತ ಆರೋಗ್ಯ ಕೇಂದ್ರದಿಂದ ಸಲಹೆ ಪಡೆದು ಔಷಧಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು.
ಮಾರಕವಾದ ಡೆಂಗ್ಯೂ ರೋಗದಿದ ತಪ್ಪಿಸಿಕೊಳ್ಳಲು ಸ್ವಚ್ಛತೆಯೊಂದೇ ಪರಿಹಾರವಾಗಿದೆ. ಆದ್ದರಿಂದ ಸಾರ್ವಜನಿಕರು ತಮ್ಮ ತಮ್ಮ ಮನೆ ಸುತ್ತಮುತ್ತ ಸೊಳ್ಳೆ ಉತ್ಪತ್ತಿಗೆ ಕಾರಣವಾಗುವ ತ್ಯಾಜ್ಯ ವಸ್ತು ಹಾಗೂ ಇನ್ನಿತರ ವಸ್ತುಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದರು.