ಬೆಂಗಳೂರು: ಸಾರಿಗೆ ನೌಕರರಿಗೆ 2020ರ ಜನವರಿ 1ರಿಂದ ಆಗಬೇಕಿರುವ ವೇತನ ಪರಿಷ್ಕರಣೆಯ ಹಿಂಬಾಕಿ ಸಂಬಂಧ ಇಂದು (ಆ.10) ನೌಕರರ ವಿವಿಧ ಸಂಘಟನೆಗಳ ಮುಖಂಡರ ಸಭೆಯನ್ನು ಕರೆಯಲಾಗಿದೆ.
ಈ ಮೂಲಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು ನೌಕರರಿಗೆ ಬರಬೇಕಿರುವ ಈ ಹಿಂಬಾಕಿ ಕುರಿತು ಚರ್ಚಸಲು ಒನ್ ಮ್ಯಾನ್ ಕಮಿಟಿ ಅಧ್ಯಕ್ಷ ನಿವೃತ್ತ ಐಎಎಸ್‌ಅಧಿಕಾರಿ ಎಂ.ಆರ್.ಶ್ರೀನಿವಾಸ್‌ಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಹೀಗಾಗಿ ಇಂದು ಮಧ್ಯಾಹ್ನ 2.30ಕ್ಕೆ ಸಂಘಟನೆಗಳ ಪದಾಧಿಕಾರಿಗಳು ಬೆಂಗಳೂರಿನ ಶಾಂತಿನಗರದಲ್ಲಿರುವ ಕೇಂದ್ರ ಕಚೇರಿಗೆ ಹಾಜರಾಗುವಂತೆ ತಿಳಿಸಿದ್ದಾರೆ.
ಇನ್ನು 2020ರ ಜನವರಿ 1ರಿಂದಲೇ ಹಿಂಬಾಕಿ ( Arrears) ಕೊಡುವ ಸಂಬಂಧ ಮಾರ್ಚ್‌ನಿಂದ ಈವರೆಗೂ ಯಾವುದೇ ತೀರ್ಮಾನವಾಗಿಲ್ಲ. ಕಾರಣ ಈ ಸಂಬಂಧ ಸಾರಿಗೆ ಅಧಿಕಾರಿಗಳು, ಸರ್ಕಾರದ ಅಧಿಕಾರಿಗಳು, ನೌಕರರ ಸಂಘಟನೆಗಳು ಹಾಗೂ ನ್ಯಾಯಾಲಯದ ಅಧಿಕಾರಿಗಳು ಒನ್ ಮ್ಯಾನ್ ಕಮಿಟಿ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಸಿ ಅದರಲ್ಲಿ ತೀರ್ಮಾನ ತೆಗೆದುಕೊಂಡ ಬಳಿಕ ಹಿಂಬಾಕಿಯ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಾಗುವುದು.
ಹೀಗಾಗಿ ಇಂದು ಸಾರಿಗೆ ನೌಕರರ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಹಿಂಬಾಕಿಯನ್ನು ಯಾವ ತಿಂಗಳಿನಿಂದ ಕೊಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಆ ಬಳಿಕ ಒನ್ ಮ್ಯಾನ್ ಕಮಿಟಿ ಅಧ್ಯಕ್ಷರು ಸಭೆಯಲ್ಲಿ ನಡೆದ ಚರ್ಚೆಯ ವರದಿಯನ್ನು ಸಿಎಂ ಮತ್ತು ಸಾರಿಗೆ ಸಚಿವರಿಗೆ ಸಲ್ಲಿಸಲಿದ್ದಾರೆ.