CRIMENEWSನಮ್ಮರಾಜ್ಯ

ಡಿವೈಡರ್‌ ದಾಟಿ ಬಂದ ಲಾರಿ ಖಾಸಗಿ ಬಸ್‌ಗೆ ಡಿಕ್ಕಿ 10ಕ್ಕೂ ಹೆಚ್ಚು ಮಂದಿ ಸಜೀವ ದಹನ

ವಿಜಯಪಥ ಸಮಗ್ರ ಸುದ್ದಿ

ಚಿತ್ರದುರ್ಗ: ಲಾರಿ ಡಿಕ್ಕಿಯಿಂದಾಗಿ ಖಾಸಗಿ ಬಸ್ಸೊಂದು ಬೆಂಕಿಗಾಹುತಿಯಾಗಿ 10ಕ್ಕೂ ಹೆಚ್ಚು ಮಂದಿ ಸಜೀವ ದಹನಗೊಂಡಿರುವ ಘಟನೆ ಹಿರಿಯೂರು ತಾಲೂಕಿನ ಗೊರ್ಲತ್ತು ಗ್ರಾಮದ ಬಳಿ ಇಂದು ಮುಂಜಾನೆ ನಡೆದಿದೆ.

ಹಿರಿಯೂರಿನಿಂದ ಬೆಂಗಳೂರಿಗೆ ತೆರಳುತಿದ್ದ ಲಾರಿ ಬೆಂಗಳೂರಿನಿಂದ ಶಿವಮೊಗ್ಗ ತೆರಳುತ್ತಿದ್ದ ಸೀಬರ್ಡ್ ಸ್ಲೀಪರ್‌ ಕೋಚ್ ಬಸ್ಸಿಗೆ ಗುದ್ದಿದೆ. ಲಾರಿ ಚಾಲಕನ ಅತಿವೇಗ ಹಾಗೂ ಅಜಾಗರೂಕತೆಯಿಂದ ಡಿವೈಡರ್ ದಾಟಿ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ ಬಸ್ಸಿಗೆ ಬೆಂಕಿ ಹೊತ್ತುಕೊಂಡು 10ಕ್ಕೂ ಹೆಚ್ಚು ಮಂದಿ ಸ್ಥಳದಲ್ಲೇ ಅಸುನೀಗಿದ್ದು, 9ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗಾಯಾಳುಗಳನ್ನು ಹಿರಿಯೂರು ಹಾಗೂ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗೊರ್ಲತ್ತು ಗ್ರಾಮದ ಬಳಿ ನಡೆದ ಭೀಕರ ಬಸ್‌ ದುರಂತದ ಬಗ್ಗೆ ಪ್ರತಿಕ್ರಿಯಿಸಿರುವ ಬಸ್‌ನ ಕ್ಲೀನರ್‌ ಸಾಧಿಕ್‌, ನಮಗೆ ಏನಾಯ್ತು ಅಂತಾನೇ ಗೊತ್ತಾಗಲಿಲ್ಲ ಎಂದು ಶಾಕ್‌ನಲ್ಲೇ ಮಾತಾಡಿದ್ದಾರೆ.

ರಾತ್ರಿ 1.30 ರಿಂದ 2 ಗಂಟೆ ಸುಮಾರಿಗೆ ಈ ಅಪಘಾತ ನಡೆದಿದೆ. ರಾತ್ರಿ ನಾನು ಮಲಗಿದ್ದೆ ಡಿಕ್ಕಿ ಹೊಡೆದ ರಭಸಕ್ಕೆ ಬಸ್‌ನಿಂದ ಹೊರಗೆ ಬಿದ್ದೆ. ನೋಡ ನೋಡುತ್ತಿದ್ದಂತೆ ಧಗಧಗನೆ ಬಸ್ ಹೊತ್ತಿ ಉಯುತ್ತಿತ್ತು. ಆಗ ಸ್ಥಳೀಯರು ನಮ್ಮ ಸಹಾಯಕ್ಕೆ ಬಂದರು. ಅಪಘಾತವಾಗುತ್ತಿದ್ದಂತೆ ಏನಾಗಿದೆ ಎನ್ನುವುದು ಗೊತ್ತಾಗದೆ ಶಾಕ್‌ನಲ್ಲಿ ಇದ್ದೇವು ಎಂದು ತಿಳಿಸಿದ್ದಾರೆ.

ಚಾಲಕ ಕೂಡ ಹೊರಗೆ ಬಿದ್ದಿದ್ದು, ಅವರ ಕಾಲು ಕೈಗಳಿಗೆ ಗಂಭೀರ ಗಾಯಗಳಾಗಿವೆ. 10ಕ್ಕೂ ಹೆಚ್ಚು ಮಂದಿ ಜೀವಂತ ಸುಟ್ಟುಹೋಗಿದ್ದಾರೆ. ಬಸ್‌ನಲ್ಲಿ ಮಕ್ಕಳು ಯಾರು ಇರಲಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಚನ್ನರಾಯಪಟ್ಟಣ ಮೂಲದ ಇಬ್ಬರು ಯುವತಿಯರು ಸಿಕ್ಕಿಲ್ಲ: ಈ ಭೀಕರ ಬಸ್ ಅಪಘಾತದಲ್ಲಿ ಹಾಸನದ ಚನ್ನರಾಯಪಟ್ಟಣ ಮೂಲದ ಇಬ್ಬರು ಯುವತಿಯರು ಕಣ್ಮರೆಯಾಗಿದ್ದಾರೆ. ತಾಲೂಕಿನ ಅಂಕನಹಳ್ಳಿಯ ನವ್ಯ ಹಾಗೂ ಚನ್ನರಾಯಪಟ್ಟಣ ನಗರದ ಮಾನಸ ಕಣ್ಮರೆಯಾಗಿದ್ದಾರೆ. ಇಬ್ಬರು ಹಾಸನ ನಗರದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಒಟ್ಟಿಗೆ ಇಂಜಿನಿಯರಿಂಗ್ ಮುಗಿಸಿದ್ದರು. ಬಳಿಕ ಬೆಂಗಳೂರಿನಲ್ಲಿ ಎಂಟೆಕ್ ಮುಗಿಸಿ, ಸಾಫ್ಟ್‌ವೇರ್‌ ಇಂಜಿನಿಯರ್‌ ಕೆಲಸ ಮಾಡುತ್ತಿದ್ದರು.

ಬೆಂಗಳೂರಿನಿಂದ ಬುಧವಾರ ರಾತ್ರಿ ಸ್ನೇಹಿತೆ ಮಿಲನ ಜತೆ ಬಸ್ ಹತ್ತಿ ಹೊರಟಿದ್ದರು. ಮಿಲನ ಗಾಯಗೊಂಡಿದ್ದು, ಚಿಕಿತ್ಸೆ ಪಡಿಯುತ್ತಿದ್ದಾರೆ. ಉಳಿದ ಈ ಇಬ್ಬರು ಯವತಿಯರು ಕಾಣಿಸುತ್ತಿಲ್ಲ. ಇತ್ತ ವಿಷಯ ತಿಳಿದು ಚಿತ್ರದುರ್ಗದ ಹಿರಿಯೂರಿನತ್ತ ಯುವತಿಯರ ಪಾಲರು ಹೊರಟಿದ್ದಾರೆ.

9 ಮಂದಿ ಮೃತಪಟ್ಟಿದ್ದಾರೆ-ಐಜಿಪಿ ರವಿಕಾಂತೇಗೌಡ: ಸೀಬರ್ಡ್‌ ಬಸ್ಸಿನಲ್ಲಿದ್ದ 8 ಪ್ರಯಾಣಿಕರು, ಲಾರಿ ಡ್ರೈವರ್‌ ಸೇರಿ 9 ಮಂದಿ ಮೃತಪಟ್ಟಿದ್ದಾರೆ ಎಂದು ಐಜಿಪಿ ರವಿಕಾಂತೇಗೌಡ ತಿಳಿಸಿದ್ದಾರೆ.

ಗೊರ್ಲತ್ತು ಗ್ರಾಮದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸದ್ಯ ಬಸ್ಸಿನಿಂದ ಎಂಟು ಮೃತ ದೇಹಗಳನ್ನು ಹೊರತೆಗೆಯಲಾಗಿದೆ. ಓರ್ವ ಲಾರಿ ಚಾಲಕ ಸೇರಿ ಸದ್ಯದ ಮಾಹಿತಿ ಪ್ರಕಾರ 9 ಜನ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಶಿರಾ ಹಾಗೂ ಹಿರಿಯೂರು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಅಂಬುಲೆನ್ಸ್‌ ಮೂಲಕ ಕಳುಹಿಸಿಕೊಡಲಾಗಿದೆ. ಬೆಂಗಳೂರಿನಿಂದ ಡಿಎನ್‌ಎ ಅಂಡ್ ಸುಕೋ ಟೀಂ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.

ಇತ್ತ ಬಸ್ಸಿನಲ್ಲಿದ್ದ 21 ಜನರು ಪತ್ತೆಯಾಗಿದ್ದು 11 ಜನರು ಪತ್ತೆಯಾಗಿಲ್ಲ ಎಂದು ಚಿತ್ರದುರ್ಗ ಎಸ್‌ಪಿ ರಂಜಿತ್ ಹೇಳಿದ್ದಾರೆ. 21 ಜನರು ಪತ್ತೆ ಆಗಿದ್ದು ಅವರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದೇವೆ. ಈ ಪೈಕಿ ಆರು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಲಾರಿ ಚಾಲಕ ನಿದ್ದೆ ಮಂಪರಿನಲ್ಲಿ ಇದ್ದಿದ್ದರಿಂದ ಈ ಅಪಘಾತ ನಡೆದಿರುವ ಸಾಧ್ಯತೆಯಿದೆ. ಚಾಲಕ ನಿರ್ವಾಹಕ ಸೇರಿ ಸೀಬರ್ಡ್‌ ಬಸ್ಸಿನಲ್ಲಿ 29 ಜನ ಪ್ರಯಾಣಿಸುತ್ತಿದ್ದರು ಎಂದು ಮಾಹಿತಿ ನೀಡಿದರು.

ಟ್ರಕ್‌ ಬಸ್ಸಿನ ಡೀಸೆಲ್‌ ಟ್ಯಾಂಕ್‌ಗೆ ಗುದ್ದಿದ್ದರಿಂದ ಈ ದುರಂತ: ವಿರುದ್ಧ ದಿಕ್ಕಿನಲ್ಲಿ ಬಂದ ಟ್ರಕ್‌ ಬಸ್ಸಿನ ಡೀಸೆಲ್‌ ಟ್ಯಾಂಕ್‌ಗೆ ಗುದ್ದಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಸೀಬರ್ಡ್‌ ಬಸ್‌ ಮಾಲೀಕ ನಾಗರಾಜು ತಿಳಿಸಿದ್ದಾರೆ.

ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಸ್ಲೀಪರ್‌ ಬಸ್ಸಿನಲ್ಲಿ 29 ಜನ ಪ್ರಯಾಣಿಸುತ್ತಿದ್ದರು. ಟ್ರಕ್‌ ವಿರುದ್ಧ ದಿಕ್ಕಿನಿಂದ ಬಂದು ಡೀಸೆಲ್‌ ಟ್ಯಾಂಕ್‌ ಬಳಿ ಗುದ್ದಿದೆ. ಗುದ್ದಿದ ರಭಸಕ್ಕೆ ಮೊದಲು ಟ್ರಕ್‌ಗೆ ಬೆಂಕಿ ಹೊತ್ತಿಕೊಂಡಿತು. ನಂತರ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ವಿವರಿಸಿದರು.

ಪ್ರಯಾಣಿಕರ ಸುರಕ್ಷೆಗೆ ಸಂಬಂಧಿಸಿದ ಎಲ್ಲ ಮಾನದಂಡಗಳನ್ನು ಬಸ್ಸು ಹೊಂದಿತ್ತು. ಎರಡೂ ತುರ್ತು ನಿರ್ಗಮನ ದ್ವಾರವೂ ಇತ್ತು ಎಂದು ಹೇಳಿದ ಅವರು, ಇನ್ನು 29 ಪ್ರಯಾಣಿಕರ ಪೈಕಿ 25 ಮಂದಿ ಗೋಕರ್ಣಕ್ಕೆ ಬುಕ್‌ ಮಾಡಿದರೆ 2 ಮಂದಿ ಶಿವಮೊಗ್ಗ, ಇಬ್ಬರು ಕುಮಟಾಕ್ಕೆ ಸೀಟ್‌ ಬುಕ್‌ ಮಾಡಿದ್ದರು ಎಂದು ಮಾಹಿತಿ ನೀಡಿದ್ದಾರೆ.

ಸಾಧಾರಣವಾಗಿ ಸ್ಲೀಪರ್‌ ಕೋಚ್‌ ಬಸ್ಸಿನಲ್ಲಿ ಪ್ಲೈವುಡ್‌ಗಳನ್ನು ಹೆಚ್ಚು ಬಳಕೆ ಮಾಡಲಾಗುತ್ತದೆ. ಮಲಗಲು ಕುಶನ್‌ ಸಹ ಇರುತ್ತದೆ. ಬೆಂಕಿ ಬಿದ್ದ ತಕ್ಷಣವೇ ಕುಶನ್‌ ಮತ್ತು ಪ್ಲೈವುಡ್‌ ಇರುವ ಕಾರಣ ಬಹಳ ಬೇಗ ಬೆಂಕಿ ಹರಡುತ್ತದೆ. ಹೀಗಾಗಿ ಬಸ್‌ ಕಣ್ಣುಮುಚ್ಚಿ ಬಿಡುವಷ್ಟರಲ್ಲಿ ಸುಟ್ಟು ಕರಕಲಾಗಿದೆ.

Megha
the authorMegha

Leave a Reply

error: Content is protected !!