ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತನ ಹತ್ಯೆ ಆರೋಪದಡಿ ಬಂಧನಕ್ಕೊಳಗಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ತಂಡಕ್ಕೆ ಕೋರ್ಟ್ ಬಿಗ್ ಶಾಕ್ ನೀಡಿದೆ.
ಇಂದು ಸಂಜೆ ವಿಚಾರಣೆ ನಡೆಸಿದ 24ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಧೀಶರಾದ ವಿಶ್ವನಾಥ್ ಸಿ. ಗೌಡರ್ ನಟಿ ಪವಿತ್ರಾ ಗೌಡ, ನಟ ದರ್ಶನ್ ಒಳಗೊಂಡ 13ಜನರಿರುವ ತಂಡವನ್ನು 6 ದಿನಗಳು ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಮಹತ್ವದ ಆದೇಶ ಹೊರಡಿಸಿದ್ದಾರೆ.
ರೇಣುಕಾಸ್ವಾಮಿ ಕಿಡ್ನ್ಯಾಪ್ ಹತ್ಯೆ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ 13 ಜನ ಬಂಧಿತ ಆರೋಪಿಗಳನ್ನು ಬೆಳಗ್ಗಿಯಿಂದ ಸಂಜೆ 4.30ರವರೆಗೆ ತೀವ್ರ ವಿಚಾರಣೆಗೆ ಒಳಪಡಿಸಿದ ಪೊಲೀಸರು ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಧೀಶರು 6 ದಿನಗಳ ಕಾಲ ಆರೋಪಿಗಳನ್ನು ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ತನಿಖೆ ನಡೆಸಿದ ಪೊಲೀಸರು ಪವಿತ್ರಾ ಗೌಡ A1, ನಟ ದರ್ಶನ್ A2, ಪವನ್ A3 ಆರೋಪಿಯನ್ನಾಗಿ ಮಾಡಿದ್ದು, ಇನ್ನುಳಿದ 10 ಮಂದಿಯೂ ಸಹ ಆರೋಪಿಗಳಾಗಿದ್ದಾರೆ.
24ನೇ ACMM ಕೋರ್ಟ್ನ ನ್ಯಾಯಧೀಶರ ಮುಂದೆ ದರ್ಶನ್ ಸೇರಿದಂತೆ 8 ಮಂದಿ ಆರೋಪಿಗಳನ್ನು ಹಾಜರುಪಡಿಸಲಾಗಿತ್ತು. ಅವರ‍್ಯಾರು ಎಂದರೆ- 1. ಪವಿತ್ರಾ ಗೌಡ, 2. ದರ್ಶನ್, 3. ಪವನ್, 4. ವಿನಯ್, 5. ಪ್ರದೋಷ ,6. ನಂದೀಶ, 7. ದೀಪಕ್, 8. ಲಕ್ಷ್ಮಣ್, 9. ನಾಗರಾಜು.
ರೇಣುಕಾಸ್ವಾಮಿ ಎಂಬಾತನ ಕೊಲೆ ಪ್ರಕರಣದಲ್ಲಿ ಇಂದು ಬೆಳಗ್ಗೆ ಕಾಮಾಕ್ಷಿಪಾಳ್ಯ ಪೊಲೀಸರು ನಟ ದರ್ಶನ್ ಅವರನ್ನು ಬಂಧಿಸಿದ್ದರು. ಅನ್ನಪೂರ್ಣ ನಗರ ಪೊಲೀಸ್ ಠಾಣೆಯಲ್ಲಿ ದರ್ಶನ್ ಅವರ ಪ್ರಾಥಮಿಕ ವಿಚಾರಣೆ ನಡೆಸಲಾಗಿತ್ತು. ಇದಾದ ಬಳಿಕ ದರ್ಶನ್ ಅವರನ್ನು ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಚೆಕಪ್‌ಗೆ ಕರೆದುಕೊಂಡು ಹೋಗಲಾಗಿತ್ತು.
ಇನ್ನು ಕೊಲೆ ಪ್ರಕರಣದ ಆರೋಪಿಗಳ ಮೆಡಿಕಲ್ ಚೆಕಪ್ ಮುಗಿಸಿದ ಪೊಲೀಸ್ ಅಧಿಕಾರಿಗಳು ನಟ ದರ್ಶನ್ ಹಾಗೂ ತಂಡವನ್ನು 24ನೇ ಎಸಿಎಂಎಂ ಕೋರ್ಟ್ನಲ್ಲಿ ಹಾಜರುಪಡಿಸಿದರು.