ಮೈಸೂರು: ಅಕ್ರಮವಾಗಿ ಸಾಗಿಸುತ್ತಿದ್ದ 18 ಕೋಟಿ ಮೌಲ್ಯದ 9ಕೆಜಿ 821 ಗ್ರಾಂ ಅಂಬರ್ ಗ್ರೀಸ್ (ತಿಮಿಂಗಲ ವಾಂತಿ) ವಶಪಡಿಸಿಕೊಂಡಿರುವ ಮೈಸೂರು ಜಿಲ್ಲಾ ಪೊಲೀಸರು ಕೇರಳದ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದೇ ಮೊದಲ ಬಾರಿಗೆ ಕೇರಳ ಮೂಲದಿಂದ ಬೆಂಗಳೂರಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಭರ್ಜರಿ ಭೇಟೆಯಾಡಿರುವ ಪೊಲೀಸರು ಮೂವರನ್ನು ಬಂಧಿಸಿದ್ದು ಇದರ ಹಿಂದೆ ಇರುವವರ ಬಂಧನಕ್ಕೂ ಬಲೆ ಬೀಸಿರುವುದಾಗಿ ಮೈಸೂರು ಎಸ್‌ಪಿ ಸೀಮಾ ಲಡ್ಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅಂಬರ್‌ಗ್ರೀಸನ್ನು ಸುಗಂಧ ದ್ರವ್ಯ ಹಾಗೂ ಔಷಧ ತಯಾರಿಕೆಯಲ್ಲಿ ಬಳಕೆ ಮಾಡುವ ಜತೆಗೆ ವಿದೇಶಗಳಲ್ಲಿಯೂ ಹೆಚ್ಚಿನ ಬೇಡಿಕೆಯಿದ್ದು, ಕೋಟ್ಯಂತರ ರೂ. ಬೆಲೆ ಬಾಳುತ್ತದೆ.
ಎಚ್.ಡಿ.ಕೋಟೆ ಹೋಟೆಲೊಂದರಿಂದ ಹೊರಟ ಆರೋಪಿತರ ಬಗ್ಗೆ ಸಂಶಯ ವ್ಯಕ್ತಪಡಿಸಿ ಸಾಗಾಟಕ್ಕೆ ಯತ್ನ ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಹ್ಯಾಂಡ್‌ಪೋಸ್ಟ್ ಬಳಿ ಎಚ್.ಡಿ.ಕೋಟೆ ಹಾಗೂ ಸೆನ್ ಪೊಲೀಸರು ಅಂಬರ್ ಗ್ರೀಸ್ ಹಾಗೂ ಕಾರಿನ ಸಮೇತ ಕೇರಳದ ಮೂವರನ್ನು ಬಂಧಿಸಿದ್ದಾರೆ ಎಂದು ವಿವರಿಸಿದರು.
ಆರೋಪಿಗಳು ಅಂಬರ್‌ಗ್ರೀಸನ್ನು ಬೇರೊಬ್ಬರಿಂದ ಪಡೆದುಕೊಂಡು ಮತ್ತೊಬ್ಬರಿಗೆ ಮಾರಾಟ ಮಾಡಲು ಮುಂದಾಗಿದ್ದರು. ಇದರಲ್ಲಿ ಅಂತಾರಾಷ್ಟ್ರೀಯ ಮಾರಾಟ ಜಾಲ ಇದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಇದರ ಹಿಂದೆ ಒಂದು ದೊಡ್ಡ ಜಾಲ ಇರುವ ಸಂಬಂಧ ಹೆಚ್ಚಿನ ಮಟ್ಟದ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಸೋಲಿಗೆಕೋರನ ಬಂಧನ: ಮೇ 19ರಂದು ರವಿ ಎಂಬುವವರ ಆಟೋದಲ್ಲಿ ಇಬ್ಬರು ವ್ಯಕ್ತಿಗಳು ಕಡಕೊಳಕ್ಕೆ ತೆರಳಿದ್ದರು. ಈ ವೇಳೆ ಸ್ನೇಹಿತನನ್ನು ನೋಡಬೇಕೆಂದು ದೇವಲಾಪುರದ ಕಡೆಗೆ ಹೋಗುವಂತೆ ಹೇಳಿ ಮಾರ್ಗ ಮಧ್ಯೆ ಪೂರ್ಣಿಮ ಫಾರಂ ಹೌಸ್ ಬಳಿ ಸ್ನೇಹಿತ ಬರುತ್ತಾನೆಂದು ಆಟೋ ನಿಲ್ಲಿಸಿದ್ದಾರೆ.
ಈ ವೇಳೆ ಮೂತ್ರ ವಿಜರ್ಸನೆಗೆಂದು ತೆರಳಿದ ಚಾಲಕ ರವಿಗೆ ಚಾಕು ತೋರಿಸಿ ಆತನ ಬಳಿಯಿದ್ದ 2 ಸಾವಿರ ನಗದು, ಒಂದು ಮೊಬೈಲ್ ಫೋನ್ ಕಿತ್ತುಕೊಂಡು, ಆತನನ್ನು ಹಳ್ಳಕ್ಕೆ ತಳ್ಳಿ ಆಟೋದೊಂದಿಗೆ ಪರಾರಿಯಾಗಿದ್ದರು. ಈ ಸಂಬಂಧ ಚಾಲಕ ರವಿ ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಮೇ 21ರಂದು ಆರೋಪಿಯನ್ನು ಬಂಧಿಸಿ ಆಟೋ, ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಈತ ತನ್ನ ಸ್ನೇಹಿತನೊಂದಿಗೆ ಇಲವಾಲ, ಬಿಳಿಗೆರೆ, ಮೈಸೂರು ದಕ್ಷಿಣ ಠಾಣೆಗಳ ವ್ಯಾಪ್ತಿಯಲ್ಲಿ 6 ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆ ವೇಳೆ ತಿಳಿದುಬಂದಿದೆ. ಇನ್ನು ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಯ ಪತ್ತೆಗೆ ತನಿಖೆ ಮುಂದುವರಿದಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಎಸ್ಪಿ ಡಾ.ಬಿ.ಎನ್.ನಂದಿನಿ, ಮೈಸೂರು ಗ್ರಾಮಾಂತರ ಉಪವಿಭಾಗದ ಡಿಎಸ್‌ಪಿ ಶಿವಕುಮಾರ್, ಸಿಪಿಐ ಜಿ.ಎಸ್.ಸ್ವರ್ಣ, ಎಚ್.ಡಿ.ಕೋಟೆ ಠಾಣೆ ಇನ್ಸ್ಪೆಕ್ಟರ್ ಶಬ್ಬೀರ್ ಹುಸೇನ್, ಸೆನ್ ಪೊಲೀಸ್ ಠಾಣೆಯ ಪುರುಷೋತ್ತಮ್ ಸೇರಿದಂತೆ ಹಲವರು ಇದ್ದರು.