ನಂಜನಗೂಡು: ಹುಲಿ ದಾಳಿಗೆ ದನಗಾಹಿ ಮಹಿಳೆ ಬಲಿಯಾದ ಘಟನೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಹೋಬಳಿಯ ಬಳ್ಳೂರುಹುಂಡಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಬಳ್ಳೂರುಹುಂಡಿ ಗ್ರಾಮದ ವೆಂಕಟಯ್ಯ ಎಂಬುವವರ ಪತ್ನಿ ರತ್ನಮ್ಮ (49) ಹುಲಿದಾಳಿಗೆ ಬಲಿಯಾದ ದನಗಾಹಿ ಮಹಿಳೆ. ಘಟನೆ ಬಳಿಕ ಗ್ರಾಮ ವ್ಯಾಪ್ತಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ರತ್ನಮ್ಮ ಅವರು ಎಂದಿನಂತೆ ದನಗಳನ್ನು ಮೇಯಿಸಲೆಂದು ತೆರಳಿದ್ದು, ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಹೆಡಿಯಾಲ ಸಮೀಪವಿರುವ ಬಳ್ಳೂರುಹುಂಡಿ ಗ್ರಾಮಕ್ಕೆ ಹೊಂದಿಕೊಂಡಂತಿರುವ ಮಹದೇವ ನಗರ ಗ್ರಾಮದ ನರ್ಸರಿ ಸಮೀಪದ ಜಮೀನಿನಲ್ಲಿ ಜಾನುವಾರುಗಳನ್ನು ಮೇಯಿಸುತ್ತಾ ಕುಳಿತಿದ್ದರು. ಈ ವೇಳೆ ಏಕಾಏಕಿ ದಾಳಿ ಮಾಡಿದ ಹುಲಿ ಆಕೆಯನ್ನು ಎಳೆದುಕೊಂಡು ಹೋಗಿದೆ. ಈ ವೇಳೆ ಜೀವ ಭಯದಲ್ಲಿ ಜೋರಾಗಿ ಕೂಗಿಕೊಂಡಿದ್ದಾರೆ. ಆದರೂ ಬಿಡದ ಹುಲಿ ಪಂಜದಿಂದ ಬಲವಾಗಿ ಹೊಡೆದಿದೆ. ಇದರಿಂದ ಅವರ ಕುತ್ತಿಗೆ ಭಾಗಕ್ಕೆ ಬಲವಾದ ಏಟು ಬಿದ್ದಿದೆ.
ಆ ನಂತರ ಅನತಿ ದೂರದವರೆಗೆ ಎಳೆದುಕೊಂಡು ಹೋದ ಹುಲಿ ದೇಹದ ಸ್ವಲ್ಪ ಭಾಗವನ್ನು ತಿಂದು ಅಲ್ಲಿಯೇ ಬಿಟ್ಟು ಹೋಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬಂಡೀಪುರ ನಿರ್ದೇಶಕ ಡಾ.ಪಿ.ರಮೇಶ್ ಕುಮಾರ್, ಎಸಿಎಫ್ ಪರಮೇಶ್ ಹಾಗೂ ಸಿಬ್ಬಂದಿ ಅವರು ಹುಡುಕಾಟ ನಡೆಸಿದ್ದು, ಈ ವೇಳೆ ಘಟನೆ ನಡೆದ ಸ್ಥಳದಿಂದ ಅನತಿ ದೂರ ಅರಣ್ಯಕ್ಕೆ ಸೇರಿದ ಪ್ರದೇಶದಲ್ಲಿಯೇ ದೇಹ ದೊರೆತಿದೆ.
ವಿಷಯ ತಿಳಿದು ಬಳ್ಳೂರುಹುಂಡಿ ಗ್ರಾಮದ ನೂರಾರು ಮಂದಿ ಕಾಡಂಚಿನ ಭಾಗಕ್ಕೆ ಧಾವಿಸಿ, ತಮ್ಮ ಆಕ್ರೋಶವನ್ನು ಹೊರಹಾಕಿದರು. ಈ ವೇಳೆ ಮಾತನಾಡಿದ ಅವರು ಈ ಭಾಗದಲ್ಲಿ ಹುಲಿ ಕಾಟ ಮಿತಿ ಮೀರಿದೆ. ಜನ ಕೃಷಿ ಕೆಲಸಕ್ಕೆ ಹೋಗುವುದಿರಲಿ. ನಿತ್ಯ ಇಲ್ಲಿ ಅಡ್ಡಾಡುವುದೇ ಕಷ್ಟವಾಗಿದೆ ಎಂದು ಕಿಡಿಕಾರಿದರು.
ಇನ್ನು ಹುಲಿ ದಾಳಿ ಮಾಡುತ್ತಿರುವ ಬಗ್ಗೆ ಈಗಾಗಲೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಅರಣ್ಯ ಇಲಾಖೆಯವರು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಕೆಲ ದಿನಗಳ ಹಿಂದೆಯೇ ದಾಳಿಗಳಾಗಿ ಜನ ಸಾಯುತ್ತಿದ್ದರೂ ಅರಣ್ಯ ಇಲಾಖೆ ಏನು ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಮೃತ ಮಹಿಳೆಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಪಟ್ಟು ಹಿಡಿದರು.
ಈ ನಡುವೆ ಬಳ್ಳೂರು ಹುಂಡಿ ಭಾಗದಲ್ಲಿ ಉಪಟಳ ನೀಡುತ್ತಿರುವ ಹುಲಿ ಸೆರೆಗೆ ಅರಣ್ಯ ಇಲಾಖೆ ತಂಡ ರಚಿಸಿದೆ. ಈಗಾಗಲೇ ಈ ಭಾಗದಲ್ಲಿ ಬೋನುಗಳನ್ನು ಇರಿಸಿದ್ದು, ಹುಲಿ ಸೆರೆ ಹಿಡಿಯಲು ಸಿಬ್ಬಂದಿ ಕಾರ್ಯಾಚರಣೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.