ಬೆಂಗಳೂರು: ವರದಕ್ಷಿಣೆ ಕಿರುಕುಳ ಕೇಸು ಹಾಕುತ್ತೇನೆ ಎಂದ ಹೆಂಡತಿಯ ಅಕ್ಕನನ್ನು 20 ಬಾರಿ ಇರಿದು ಕೊಂದಿರುವ ಘಟನೆ ರಾಮಮೂರ್ತಿ ನಗರದಲ್ಲಿ ನಡೆದಿದೆ.
ಬೆಸ್ಕಾಂ ಉದ್ಯೋಗಿ ಕೆ.ಆರ್.ಪುರಂ ನಿವಾಸಿ ಲಾವಣ್ಯ (37) ಹತ್ಯೆಯಾದವರು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಹಾಡಹಗಲೇ ತನ್ನ ಅತ್ತಿಗೆಯನ್ನು ವಿಜಯ್ ಎಂಬಾತ ಚಾಕುವಿನಿಂದ ಇರಿದು ಕೊಂದಿದ್ದಾನೆ.
ಆರೋಪಿ ವಿಜಯ್ ಟೈಲರ್ ಆಗಿದ್ದು ಆತ ತನ್ನ ಪತ್ನಿ ಲಕ್ಷ್ಮಿಗೆ ವರದಕ್ಷಿಣೆಗಾಗಿ ಪೀಡಿಸುತ್ತಿದ್ದನೆಂದು ಪೊಲೀಸರು ವಿವರಿಸಿದ್ದಾರೆ. ಈ ಸಂಬಂಧ ಲಕ್ಷ್ಮಿ ಅಕ್ಕ ಲಾವಣ್ಯ ತಾನು ವಿಜಯ್ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ಸಲ್ಲಿಸುವುದಾಗಿ ಬೆದರಿಕೆ ಹಾಕಿದ್ದರು.
ಭಾನುವಾರ ಈ ಕುರಿತಂತೆ ಇಬ್ಬರ ನಡುವೆ ಜಗಳವಾಗಿದೆ. ಆಗ ವಿಜಯ್ ಲಾವಣ್ಯಗೆ ಚಾಕುವಿನಿಂದ ಇರಿದಿದ್ದಾನೆ. 20 ಬಾರಿ ಇರಿದ ಪರಿಣಾಮ ಆಕೆ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಬಳಿಕ ವಿಜಯ್ ತಾನೂ ಸಹ ಆತ್ಮಹತ್ಯೆಗೆ ಯತ್ನಿಸಿ ಕುತ್ತಿಗೆಗೆ ಚಾಕುವಿನಿಂದ ಚುಚ್ಚಿಕೊಂಡಿದ್ದಾನೆ. ಆಗ ಅಲ್ಲಿನ ನೆರೆಹೊರೆಯವರು ಅವನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿಜಯ್ ಪತ್ನಿ ಸಲ್ಲಿಸಿದ ದೂರಿನ ಆಧಾರದ ಮೇಲೆ, ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಮತ್ತು ಆತನ ಡಿಸ್ಚಾರ್ಜ್ ನಂತರ ಅವನ ಬಂಧನವಾಗಲಿದೆ ಎಂದು ಹೇಳಿದ್ದಾರೆ.