ವಿಜಯಪಥ ಸಮಗ್ರ ಸುದ್ದಿ
ತಿ.ನರಸೀಪುರ: ರೇಷ್ಮೆ ಬೆಳೆಯನ್ನು ಅಭಿವೃದ್ಧಿಪಡಿಸಲು ಹಾಗೂ ರೇಷ್ಮೆ ಕೃಷಿಯ ವಿಸ್ತರಣೆಗೆ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ರೈತರಿಗೆ ವರದಾನವಾಗಿದೆ ಎಂದು ರೇಷ್ಮೆ ಉಪ ನಿರ್ದೇಶಕ ವರನಾಗಭೂಷಣ ಹೇಳಿದ್ದಾರೆ.
ತಾಲೂಕಿನ ಟಿ.ದೊಡ್ಡಪುರ ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ಸುಸ್ಥಿರ ಬೈವೋಲ್ಟೈನ್ ರೇಷ್ಮೆ ಕೃಷಿ ಅಭಿವೃದ್ಧಿಗೆ ನೂತನ ತಾಂತ್ರಿಕತೆಗಳ ಕುರಿತು ಪ್ರಾದೇಶಿಕ ರೇಷ್ಮೆ ಸಂಶೋಧನಾ ಸಂಸ್ಥೆ, ಮೈಸೂರಿನ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಚಾಮರಾಜನಗರ ಕೇಂದ್ರ ರೇಷ್ಮೆ ಮಂಡಳಿ ಹಾಗೂ ರೇಷ್ಮೆ ಇಲಾಖೆಯ ಸಹಯೋಗದೊಂದಿಗೆ ‘ರೈತರ ದಿನ’ ಕಾರ್ಯಕ್ರಮ ಹಾಗೂ ಹಿಪ್ಪುನೇರಳೆ ತೋಟದ ಕ್ಷೇತ್ರೋತ್ಸವದಲ್ಲಿ ಮಾತನಾಡಿ, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ರೇಷ್ಮೆ ಕಡ್ಡಿ ನೆಟ್ಟರೆ 50 ಸಾವಿರ ರೂ. ನಗದು ಕೈಗೆ ನೇರವಾಗಿ ಸಿಗಲಿದೆ. 1 ಎಕರೆ ಹಿಪ್ಪು ನೇರಳೆ ಬೆಳೆಯಲಿಕ್ಕೆ ಉದ್ಯೋಗ ಖಾತರಿ ಅನುದಾನ ಕೈ ಸೇರಲಿದೆ ಎಂದರು.
ಆಯಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನಡೆಯುವ ಗ್ರಾಮ ಸಭೆಯಲ್ಲಿ ರೈತರು ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಉದ್ಯೋಗ ಕಾರ್ಡುಗಳನ್ನು ಹೊಂದಿರುವ ರೈತ ಕುಟುಂಬ ರೇಷ್ಮೆ ಕೃಷಿಗೆ ಎರಡು ಲಕ್ಷ ರೂ.ಗಳವರೆಗೂ ಅನುದಾನ ಪಡೆಯಬಹುದು.
ಪಂಚಾಯಿತಿ ಪ್ರತಿನಿಧಿಗಳು ಮತ್ತು ಪಿಡಿಒ ಮನಸ್ಸು ಮಾಡಿದರೆ ರೈತರಿಗೆ ಹೆಚ್ಚಿನ ನೆರವು ನೀಡಬಹುದು. ಹನಿ ನೀರಾವರಿಗೆ ಶೇ.90 ರಷ್ಟು ಸಬ್ಸಿಡಿ ಕೊಡಲು ಅವಕಾಶವಿದೆ. ಮರಗಡ್ಡಿಗೆ ಪೂರ್ವಯೋಜಿತ ಸಿದ್ಧತೆ ಮಾಡಿಕೊಂಡರೆ ಮರಗಡ್ಡಿಗೂ ಸಹಾಯಕಧನ ಕೊಡುತ್ತೇವೆ ಎಂದು ರೇಷ್ಮೆ ಕೃಷಿಯ ತಾಂತ್ರಿಕತೆಯ ಬಗ್ಗೆ ವರನಾಗಭೂಷಣ ತಿಳಿಸಿದರು.
ಚಾಮರಾಜನಗರ ಕೇಂದ್ರ ರೇಷ್ಮೆ ಮಂಡಳಿಯ ಜಂಟಿ ನಿರ್ದೇಶಕ, ಹಿರಿಯ ವಿಜ್ಞಾನಿ ಡಾ.ಡಿ.ಎಸ್.ಸೋಮಪ್ರಕಾಶ್ ರೇಷ್ಮೆ ಕೃಷಿ ಬಗ್ಗೆ ರೈತರೊಂದಿಗೆ ಸಂವಾದ ನಡೆಸಿದರು. ತಾಪಂ ಸದಸ್ಯೆ ಚಿನ್ನಮ್ಮ ಸಿದ್ದರಾಜು, ಸಹಾಯಕ ನಿರ್ದೇಶಕ ಸಿ.ಆರ್.ಕೃಷ್ಣ, ಗ್ರಾ.ಪಂ ಉಪಾಧ್ಯಕ್ಷ ಪುಟ್ಟಸ್ವಾಮಿ, ಸದಸ್ಯರಾದ ಆರ್.ಮಾದೇಶ, ನಿಜಗುಣ, ರಾಜೇಶ, ಪ್ರಗತಿಪರ ರೈತ ಮಾದೇಗೌಡ, ರೇಷ್ಮೆ ನಿರೀಕ್ಷಕ ಪಿ.ಆಂಜನೇಯ, ತಾಂತ್ರಿಕ ಸೇವಾ ಕೇಂದ್ರದ ಪ್ರದರ್ಶಕ ಎ.ಎಸ್.ಮಂಜುನಾಥ್ ರಾವ್, ಕೃಷಿ ಇಲಾಖೆಯ ಆತ್ಮ ಯೋಜನೆಯ ಶಿವಣ್ಣ, ಮುಖಂಡರಾದ ಮಾವಿನಹಳ್ಳಿ ರಾಜು, ಶಿವಣ್ಣ, ಡಿ.ಎಂ.ಪರಶಿವಮೂರ್ತಿ ಹಾಗೂ ರೇಷ್ಮೆ ಬೆಳೆಗಾರ ರೈತರು ಇದ್ದರು.