ಬೆಂಗಳೂರು: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿಸಿ ಎಂದು ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದ, ಸಾರಿಗೆ ನೌಕರರನ್ನು ಪೊಲೀಸರು ಬಂಧನ ಮಾಡಿದ್ದಕ್ಕೆ ಕೆರಳಿರುವ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸದಿರುವುದರಿಂದ ಮತ್ತಷ್ಟು ಆಕ್ರೋಶಗೊಂಡಿರುವ ನೌಕರರು ನಾಳೆ (ಡಿ11)ಯಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಜ್ಜಾಗಿದ್ದಾರೆ.
ಇನ್ನು ಪ್ರತಿಭಟನೆಗೆ ಬೆಂಬಲ ಸೂಚಿಸಿ ಭಾಗವಹಿಸಿದ್ದ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಕೂಡ ಪೊಲೀಸರು ಬಂಧಿಸಿ, ಬಳಿಕ ಆಡುಗೋಡಿ ಮೈದಾನಕ್ಕೆ ಕರೆದುಕೊಂಡು ಹೋಗಿದ್ದು ಅಲ್ಲದೆ, ಅವರ ಮೊಬೈಲ್ಫೋನ್ಗಳನ್ನು ಕಸಿದುಕೊಂಡಿದ್ದರು ಎಂದು ನೌಕರರು ಆರೋಪಿಸಿ ಅನಿರ್ದಿಷ್ಟಾವಧಿ ಮುಷ್ಕರ ಮಾಡುವುದಾಗಿ ತಿಳಿಸಿದ್ದಾರೆ.
ರಾತ್ರಿ 10.30ರಲ್ಲಿ ಸುದ್ದಿಗೋಷ್ಠಿ ನಡೆಸಿದ ಕೋಡಿಹಳ್ಳಿ ಚಂದ್ರಶೇಖರ್, ನೌಕರರ ಸಮಸ್ಯೆ ಆಲಿಸಿ ಅದಕ್ಕೆ ಪರಿಹಾರ ಕೊಡುವಲ್ಲಿ ಸರ್ಕಾರ ಮತ್ತು ಸಾರಿಗೆ ಸಚಿವರು ಎಡವಿರುವುದರಿಂದ ನಾವು ಒಕ್ಕೊರಲಿನಿಂದ ಅನಿರ್ದಿಷ್ಟಾವಧಿ ಮುಷ್ಕರದ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.
ಹೀಗಾಗಿ ನಾಳೆಯಿಂದ ಸಾರಿಗೆಯ ನಾಲ್ಕೂ ನಿಗಮಗಳ ಬಸ್ಗಳು ಕಾರ್ಯಾಚರಣೆ ಮಾಡುವುದಿಲ್ಲ. ಇನ್ನು ನಮ್ಮ ಬೇಡಿಕೆ ಈಡೇರುವವರೆಗೂ ಮುಷ್ಕರ ನಡೆಯಲಿದೆ. ಯಾವುದೇ ಒಬ್ಬ ನೌಕರನೂ ಕೂಡ ನಾಳೆಯಿಂದ ಕರ್ತವ್ಯಕ್ಕೆ ಹಾಜರಾಗದೇ ಮನೆಯಲ್ಲಿಯೇ ಇದ್ದು ಮುಷ್ಕರಕ್ಕೆ ಬೆಂಬಲ ಸೂಚಿಸಬೇಕು ಎಂದು ಹೇಳಿದ್ದಾರೆ.
ಈ ನಡುವೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಇಲ್ಲ ಇಲ್ಲ ನಾಳೆ ಎಂದಿನಂತೆ ಸಾರಿಗೆ ಸಂಸ್ಥೆ ಬಸ್ಗಳು ಓಡಾಡಲಿವೆ ಎಂದು ಹೇಳಿದ್ದಾರೆ. ಅಲ್ಲದೇ ಈ ಬಗ್ಗೆ ನಾಲ್ಕೂ ನಿಗಮಗಳ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಜತೆಗೆ ನೌಕರರಲ್ಲೂ ಮನವಿ ಮಾಡಿದ್ದು ನಾಳೆ ಬಸ್ ಸಂಚಾರ ಎಂದಿನಂತೆ ಇರಲಿದೆ ಎಂದು ಹೇಳಿದ್ದಾರೆ.
Hodisko savadi