ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಪ್ರಸ್ತುತ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕಾರವನ್ನು ಗಮನಿಸಿದರೆ ಈ ಹಿಂದೆ ಇದ್ದ ಆಡಳಿತ ಈಗ ಇಲ್ಲ ಅಂತಾ ಎನಿಸುತ್ತದೆ ಎಂದು ಸ್ವತಃ ಬಿಜೆಪಿಯ ಹಿರಿಯ ಶಾಸಕ ರಾಮದಾಸ್ ಹೇಳಿದ್ದಾರೆ.
ಬಿಜೆಪಿ ಶಾಸಕಾಂಗ ಸಭೆಯಲ್ಲಿ ಮಾತನಾಡಿದ ಅವರು, 2008ರಲ್ಲಿ ಇದ್ದ ಆಡಳಿತ ಈಗ ಕಂಡು ಬರುತ್ತಿಲ್ಲ. ಹೀಗಾಗಿ ಅದು ಬದಲಾಗಬೇಕು. ಶಾಸಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಪ್ರತಿಯೊಬ್ಬ ಶಾಸಕರ ವಿಶ್ವಾಸದೊಂದಿಗೆ ಆಡಳಿತ ನಡೆಸಬೇಕೆ ವಿನಃ ತಾವೇ ಮುಂದಿನ ಸಿಎಂ ಅಂತಾ ಹೇಳೋ ಮಾತಿನಲ್ಲಿ ಏನು ಅರ್ಥ ಇರುವುದಿಲ್ಲ. ಹೀಗಾಗಿ ಈ ಮಾತನ್ನು ಶಾಸಕರೇ ಹೇಳಿದರೆ ಮಾತ್ರ ನಾಯಕತ್ವದ ಬಗ್ಗೆ ಒಂದು ಅರ್ಥ ಬರುತ್ತದೆ. ಮುಖ್ಯಮಂತ್ರಿ ಗಳು ಈ ನಿಟ್ಟಿನಲ್ಲಿ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರತಿ ಬಾರಿ ಸಿಎಂ ಸ್ಥಾನ ಬದಲಾವಣೆ ಮಾತು ಕೇಳಿ ಬರುತ್ತದೆ. ಅದು ಶಾಸಕರೇ ಈ ಮಾತುಗಳನ್ನು ಆಡುತ್ತಾರೆ. ಈ ಸಂದರ್ಭದಲ್ಲಿ ಖುದ್ದು ಮುಖ್ಯಮಂತ್ರಿಗಳೇ ಈ ಬಗ್ಗೆ ಸ್ಪಷ್ಟನೆ ನೀಡುತ್ತಾರೆ. ಇಂತಹ ಸಂದರ್ಭದಲ್ಲಿ ಶಾಸಕರು ಸಿಎಂ ಬೆನ್ನಿಗೆ ನಿಲ್ಲುವಂತೆ ಆಗಬೇಕು. ಹಾಗೇ ಆಗಬೇಕಾದರೆ, ಶಾಸಕರ ಸಮಸ್ಯೆ ಆಲಿಸಿ, ಅವರ ಬೇಡಿಕೆ ಈಡೇರಿಸಬೇಕು. ಎಲ್ಲಾ ಶಾಸಕರನ್ನು ಗಣನೆಗೆ ತೆಗೆದುಕೊಳ್ಳಬೇಕು. ಬಿಎಸ್ವೈ ನಡೆಗೆ ಶಾಸಕರು ಮೆಚ್ಚುವಂತೆ ಇರಬೇಕು. ಅದನ್ನು ಬಿಟ್ಟು ಈ ರೀತಿ ನಡೆದುಕೊಂಡರೆ ಹೇಗೆ ಎಂದು ಮುಖ್ಯಮಂತ್ರಿ ಕಾರ್ಯವೈಖರಿ ವಿರುದ್ಧ ಅಸಮಾಧಾನ ಹೊರಹಾಕಿದರು.
ಇನ್ನು ಮುಂದಿನ ಎರಡು ವರ್ಷ ನಾನೇ ಮುಖ್ಯಮಂತ್ರಿಯಾಗಿ ಇರುತ್ತೇನೆ. ಇದರಲ್ಲಿ ಅನುಮಾನ ಬೇಡ ಎಂದು ಪದೇಪದೇ ಹೇಳುತ್ತಿದ್ದಾರೆ. ಅದನ್ನು ಶಾಸಕರ ಬಾಯಲ್ಲಿ ಬರುವಂತೆ ನೋಡಿಕೊಳ್ಳಬೇಕು. ಆ ಮೂಲಕ ಮುಖ್ಯಮಂತ್ರಿಗಳ ಸ್ಥಾನ ಬದಲಾವಣೆ ಆಗುವುದಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಮಧ್ಯವರ್ತಿಗಳ ಹಾವಳಿ ತಪ್ಪಿಸಿ
ಶಾಸಕರ ಕ್ಷೇತ್ರಗಳಿಗೆ ಅನುದಾನ ವಿಚಾರದಲ್ಲಿ ಕೆಲ ಸಚಿವರು ಮಧ್ಯವರ್ತಿಗಳು ಹೋದರೆ ಮಾತ್ರ ಅನುದಾನ ಬಿಡುಗಡೆ ಮಾಡುತ್ತಾರೆ. ಆದರೆ, ಶಾಸಕರು ಹೋದರೆ ಅನುದಾನ ಬಿಡುಗಡೆ ಮಾಡೋದಿಲ್ಲ. ಅವರ ಪತ್ರಕ್ಕೂ ಕಿಮ್ಮತ್ತು ಕೊಡುವುದಿಲ್ಲ. ಹೀಗಿರುವಾಗ ಶಾಸಕರು ಹೇಗೆ ಅನುದಾನ ತೆಗೆದುಕೊಳ್ಳುವುದು. ಇದನ್ನು ತಪ್ಪಿಸಿ, ಸಂಬಂಧಿಸಿದ ಸಚಿವರಿಗೆ ನಿರ್ದೇಶನ ನೀಡಿ ಎಂದು ಶಾಸಕರು ಒಕ್ಕೋರಲಿನಿಂದ ಸಭೆಯಲ್ಲಿ ಸಿಎಂಗೆ ಒತ್ತಾಯ ಮಾಡಿದರು.