ವಿಜಯಪಥ ಸಮಗ್ರ ಸುದ್ದಿ
ಪಿರಿಯಾಪಟ್ಟಣ: ಗುತ್ತಿಗೆದಾರರ ನಿರ್ಲಕ್ಷ್ಯದಿಂದ ತಾಲೂಕಿನ ಅನೇಕ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿವೆ ಎಂದು ಜೆಡಿಎಸ್ ಶಾಸಕ ಕೆ.ಮಹದೇವ್ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಚಿಕ್ಕವಡ್ಡರಕೇರಿ, ಬೆಕ್ಯಾ, ಮಾಲಂಗಿ, ಗೋಮಾಳ, ಚೌತಿ, ಚಿಕ್ಕಮಾಗಳಿ ಚನ್ನೇನಹಳ್ಳಿ ಕೊಪ್ಪಲು ಗ್ರಾಮಗಳಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ಹಾಗೂ ಮಾಲಂಗಿ ಹಾಗೂ ಚಿಕ್ಕ ಮಾಗಳಿಯಲ್ಲಿ ಶಾಲಾ ಕೊಠಡಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ತಾಲೂಕಿನ ಅಭಿವೃದ್ದಿಗಾಗಿ ಪಕ್ಷಭೇದ ಮರೆತು ಹಾಗೂ ವಯಸ್ಸಿನ ಅಂತರವನ್ನು ಲೆಕ್ಕಿಸದೆ ಅನುದಾನಕ್ಕಾಗಿ ಮಂತ್ರಿಗಳ ಮನೆ ಮತ್ತು ಕಚೇರಿ ಬಾಗಿಲಲ್ಲಿ ಕುಳಿತು ಕಾಡಿಬೇಡಿ ಅನುದಾನ ತಂದರೂ, ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿವೆ.
ಈ ಕಾಮಗಾರಿಗಳನ್ನು ಗುತ್ತಿಗೆ ಪಡೆದು ಎರಡು ವರ್ಷಗಳಾದರೂ ಪೂರ್ಣಗೊಳಿಸದೆ ನಿರ್ಲಕ್ಷ್ಯ ಮಾಡುತ್ತಿದ್ದಾನೆ. ಆದ್ದರಿಂದ ಮಾರ್ಚ್ ಅಂತ್ಯದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸದಿದ್ದರೆ ಅಧಿವೇಶನದಲ್ಲಿ ಧರಣಿ ಮಾಡಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಪುನರ್ ಟೆಂಡರ್ ಕರೆಯಲು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದರು.
ತಾಲೂಕಿನ ಕಾಂಡಂಚಿನ ಗ್ರಾಮಗಳು ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು ಹಂತಹಂತವಾಗಿ ಈ ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳಾದ ರಸ್ತೆ, ಬೀದಿದೀಪ, ಕುಡಿಯುವ ನೀರಿನ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.
ಲೋಕೋಪಯೋಗಿ ಎಇಇ ನಾಗರಾಜು, ಜಿಪಂ ಎಇಇ ಪ್ರಭು, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಸಿದ್ದರಾಜು, ಚಸ್ಕಾಂ ಎಇಇ ಅನಿಲ್ ಕುಮಾರ್, ತಾಪಂ ಸಹಾಯಕ ಅಧಿಕಾರಿ ರಘುನಾಥ್, ಚೌತಿ ಪಂಚಾಯಿತಿ ಪಿಡಿಒ ಮೋಹನ್ ಕುಮಾರ್, ಅಧ್ಯಕ್ಷೆ ಗೌರಿ, ಉಪಾಧ್ಯಕ್ಷ ರವಿಚಂದ್ರ ಸದಸ್ಯರಾದ ಶೇಖರ್, ಲಕ್ಷ್ಮಣ ಪಟೇಲ್, ರಾಮೇಗೌಡ, ಗೌರಮ್ಮ, ಸ್ವಾಮಿ, ಮುಖಂಡರಾದ ರವಿ, ಗೋವಿಂದೇಗೌಡ, ರಘು, ಶಿವಪ್ಪ, ನಟರಾಜ್, ಮಹದೇವ್, ರಾಮೇಗೌಡ, ಮಣಿಕಂಠ ಮತ್ತಿತರರು ಇದ್ದರು.