ಭಾರತದ ಎಲ್ಲಾ ಆಟಗಾರರು ನಾಯಕ ಕೊಹ್ಲಿಗಾಗಿ ಈ ವರ್ಷ ಐಸಿಸಿ ಟ್ರೋಫಿಯನ್ನು ಗೆಲ್ಲಬೇಕು ಎಂದು ಕರೆ ನೀಡಿದ್ದಾರೆ.
2007 ರ ನಂತರ ಭಾರತ ಈವರೆಗೆ ಟಿ20 ವಿಶ್ವಕಪ್ ಗೆದ್ದಿಲ್ಲ, ಮತ್ತೊಂದೆಡೆ ನಾಯಕ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಭಾರತ ತಂಡ ಈವರೆಗೆ ಯಾವುದೇ ಐಸಿಸಿ ಪ್ರಶಸ್ತಿಯನ್ನು ಗೆದ್ದಿಲ್ಲ. ಹೀಗಾಗಿ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಮಾತನಾಡಿದ್ದಾರೆ.
ಈ ಹಿಂದೆ 2011ರ ಏಕದಿನ ವಿಶ್ವಕಪ್ನಲ್ಲಿ ಭಾರತದ ಆಟಗಾರರು ಸಚಿನ್ ತೆಂಡೂಲ್ಕರ್ಗಾಗಿ ವಿಶ್ವಕಪ್ ಗೆಲ್ಲಬೇಕು ಎಂದು ಪಣ ತೊಟ್ಟಿದ್ದರು. ಅದರಂತೆ ವಿಶ್ವಕಪ್ ಸಹ ಗೆದ್ದಿದ್ದರು. ಆದರೆ, ಒಂದು ದಶಕದ ನಂತರ ಮತ್ತೆ ಅದೇ ರೀತಿಯ ಮಾತುಗಳು ಕೊಹ್ಲಿಗಾಗಿ ಕೇಳಿ ಬರುತ್ತಿದೆ.
ಟಿ 20 ವಿಶ್ವಕಪ್ ನಂತರ ಭಾರತ ಟಿ 20 ನಾಯಕತ್ವದಿಂದ ಕೆಳಗಿಳಿಯಲು ನಾಯಕ ಕೊಹ್ಲಿ ನಿರ್ಧರಿಸಿದ್ದಾರೆ, ಆದರೂ ಅವರು ಟೆಸ್ಟ್ ಮತ್ತು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ದೇಶವನ್ನು ಮುನ್ನಡೆಸಲಿದ್ದಾರೆ. ಆದರೆ, ನಾಯಕರಾಗಿ ಇದು ಕೊನೆಯ ಟಿ20 ವಿಶ್ವಕಪ್ ಆಗಿರುವ ಕಾರಣ ಪ್ರಶಸ್ತಿ ಗೆಲ್ಲಲೇಬೇಕಾದ ಇಕ್ಕಟ್ಟಿನಲ್ಲಿ ಕೊಹ್ಲಿ ಇದ್ದಾರೆ ಎನ್ನಲಾಗಿದೆ.
ಈ ಬಗ್ಗೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಸುರೇಶ್ ರೈನಾ, “ವಿರಾಟ್ ಕೊಹ್ಲಿಗಾಗಿ ಭಾರತದ ಆಟಗಾರರು ಈ ವರ್ಷ ಟಿ20 ವಿಶ್ವಕಪ್ ಅನ್ನು ಗೆಲ್ಲಲೇಬೇಕು” ಎಂದು ಸರಳ ಸಂದೇಶವನ್ನು ಮುಂದಿಟ್ಟಿದ್ದಾರೆ.
“ಭಾರತದ ಆಟಗಾರರು ಈಗಾಗಲೇ ಯುಎಇ ಯಲ್ಲಿ ಒಂದು ತಿಂಗಳ ಕಾಲ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ. ಸಾಕಷ್ಟು ಅಭ್ಯಾಸ ನಡೆಸಿದ್ದಾರೆ. ಅಲ್ಲದೆ, ಎಲ್ಲಾ ಆಟಗಾರರು ಅತ್ಯುತ್ತಮ ಫಾರ್ಮ್ನಲ್ಲಿದ್ದು, ಈ ಭಾರಿ ಭಾರತ ತಂಡವೇ ಟಿ20 ವಿಶ್ವಕಪ್ ಗೆಲ್ಲಲಿದೆ ” ಎಂದು ಸುರೇಶ್ ರೈನಾ ಭವಿಷ್ಯ ನುಡಿದಿದ್ದಾರೆ.
“ರೈನಾ ಐಪಿಎಲ್‌ನ ಅಬ್ಬರವು ಭಾರತೀಯ ಆಟಗಾರರಿಗೆ ಉತ್ತೇಜನ ನೀಡುತ್ತದೆ. ಕೆಲವು ಕಠಿಣ ಪಂದ್ಯಗಳನ್ನು ಭಾರತದ ಆಟಗಾರರು ಆಡಿದ್ದಾರೆ ಮತ್ತು ಯುಎಇ ವಾತಾವರಣಕ್ಕೆ ಒಗ್ಗಿಕೊಂಡಿದ್ದಾರೆ. ಇದು ಭಾರತವನ್ನು ಇತರ ಎಲ್ಲಾ ತಂಡಗಳ ಮೇಲೆ ಒಂದು ಹೆಜ್ಜೆ ಮೇಲುಗೈ ಸಾಧಿಸಿದಂತಾಗಿದೆ.
ಟೂರ್ನಿಯಲ್ಲಿ ಇನ್ನೂ ಅನೇಕ ಉತ್ತಮ ತಂಡಗಳಿವೆ ಎಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕು. ಪಾಕಿಸ್ತಾನ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಕೂಡ ಉತ್ತಮವಾಗಿ ಕಾಣುತ್ತವೆ. ಟಿ20 ಕ್ರಿಕೆಟ್ನಲ್ಲಿ ಏನುಬೇಕಾದರೂ ಆಗಬಹುದು. ಆದರೆ, ಭಾರತಕ್ಕೆ ಯಾವಾಗಲೂ ಒಂದು ಹೆಜ್ಜೆ ಹೆಚ್ಚಿನ ಅವಕಾಶ ಇದೆ”ಎಂದು ರೈನಾ ತಿಳಿಸಿದ್ದಾರೆ.
ಭಾರತದ ಪರ 200 ಕ್ಕೂ ಹೆಚ್ಚು ಏಕದಿನ ಪಂದ್ಯಗಳು, 78 ಟಿ 20 ಮತ್ತು 18 ಟೆಸ್ಟ್ ಪಂದ್ಯಗಳನ್ನು ಆಡಿರುವ ರೈನಾ, ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ. ಇದೀಗ ಅವರು ಸಿಎಸ್ಕೆ ಪರ ಐಪಿಎಲ್ನಲ್ಲಿ ಮಾತ್ರ ಕಣಕ್ಕಿಳಿಯುತ್ತಿದ್ದಾರೆ.