ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೊರೊನಾ ಕಾರಣ ಲಾಕ್‍ಡೌನ್ ಘೋಷಣೆಯಾಗಿರುವುದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ರೈತರನ್ನು ರಕ್ಷಿಸಲು ರಾಜ್ಯ ಸರಕಾರ ಕೂಡಲೇ ಎಲ್ಲ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಿಸಬೇಕು ಮತ್ತು ಕೃಷಿ ಉತ್ಪನ್ನಗಳನ್ನು ಖರೀದಿಸಲು ಮುಂದಾಗುವ ಮೂಲಕ ರೈತರ ನೆರವಿಗೆ ಧಾವಿಸಬೇಕು ಎಂದು ರಾಜ್ಯ ಒಕ್ಕಲಿಗರ ಒಕ್ಕೂಟದ ಅಧ್ಯಕ್ಷ ಸಿ.ವಿ. ದೇವರಾಜ್ ಆಗ್ರಹಪಡಿಸಿದ್ದಾರೆ.
ಈ ಸಂಬಂಧ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದು, ಅನ್ನದಾತರು ಬೆಳೆದ ಹಣ್ಣು ತರಕಾರಿ, ಹೂ, ಸೊಪ್ಪು ಮತ್ತಿತರ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲಾರದೆ ರಸ್ತೆಗೆ ಸುರಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಅವರಿಗೆ ಈಗ ಜೀವನ ನಿರ್ವಾಹಣೆ ಕಷ್ಟವಾಗುತ್ತಿದ್ದು, ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದ್ದಾರೆ.
ರೈತರ ಕೃಷಿ ಉತ್ಪನ್ನಗಳ ಖರೀದಿಗೆ ಸರಕಾರ ಕೃಷಿ ಇಲಾಖೆ ಮೂಲಕ ಕಾಲ್ ಸೆಂಟರ್ ಆರಂಭಿಸಬೇಕು. ಈ ಕಾಲ್ ಸೆಂಟರ್‍ಗೆ ಕರೆ ಮಾಡುವ ರೈತರ ಕೃಷಿ ಉತ್ಪನ್ನಗಳ ಖರೀದಿಯನ್ನು ಸರಕಾರ ಮಾಡಬೇಕು. ಕೃಷಿ ಭೂಮಿಗೇ ತೆರಳಿ ಅಲ್ಲಿಯೇ ಖರೀದಿ ಮಾಡಬೇಕು. ಯಾವ ಭಾಗದಲ್ಲಿ ಬೇಡಿಕೆ ಇರುತ್ತದೆಯೋ ಅಲ್ಲಿಗೆ ತ್ವರಿತ ಸಾಗಾಣಿಕೆ ಮಾಡಬೇಕು ಎಂದು ಹೇಳಿದ್ದಾರೆ.
ಕೋವಿಡ್ ಸೃಷ್ಟಿಸಿರುವ ಈ ಬಿಕ್ಕಟ್ಟನ್ನು ಬಳಸಿಕೊಂಡು ಖಾಸಗಿ ಸಹ ಭಾಗಿತ್ವದಲ್ಲಿ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಕೋಲ್ಡ್ ಸ್ಟೋರೇಜ್ ಮತ್ತು ಗೋದಾಮುಗಳನ್ನು ನಿರ್ಮಾಣ ಮಾಡಬೇಕು. ಕನಿಷ್ಠ ದರ ವಿಧಿಸಿ ರೈತರಿಗೆ ತಮ್ಮ ಉತ್ಪನ್ನಗಳನ್ನು ಸಂರಕ್ಷಿಸಿಡಲು ಅವಕಾಶ ಕಲ್ಪಸಬೇಕು ಎಂದೂ ತಿಳಿಸಿದ್ದಾರೆ.
ಇನ್ನು ಕೊರೊನಾ ಮತ್ತು ಲಾಕ್ ಡೌನ್ ಕಾರಣದಿಂದಾಗಿ ಕಾರ್ಮಿಕರು ಅತಂತ್ರ ಸ್ಥಿತಿಯಲ್ಲಿದ್ದು, ಜೀವನವನ್ನು ನಡೆಸುವುದೇ ದುಸ್ತರವಾಗಿದೆ. ಕಾರ್ಮಿಕರು ಸೇರಿದಂತೆ ರಾಜ್ಯದಲ್ಲಿ ಸುಮಾರು 1.10 ಕೋಟಿ ಬಿಪಿಎಲ್ ಕುಟುಂಬಗಳಿದ್ದು ಈ ಕುಟುಂಬಗಳಿಗೆ ಎರಡು ತಿಂಗಳ ಕಾಲ ತಲಾ ಐದೈದು ಸಾವಿರ ರೂಪಾಯಿಗಳನ್ನು ಅವರ ಖಾತೆಗೆ ವರ್ಗಾಯಿಸಬೇಕು ಎಂದೂ ದೇವರಾಜ್ ಒತ್ತಾಯಿಸಿದ್ದಾರೆ.
ರಾಜ್ಯಾದ್ಯಂತ ರೈತರು, ಗಾರ್ಮೆಂಟ್ಸ್ ನೌಕರರು, ಚಾಲಕರು, ದಿನಗೂಲಿ ನೌಕರರು, ಅಸಂಘಟಿತ ವಲಯದ ಕಾರ್ಮಿಕರ ಜೀವನ ಹಸನಾಗಲು ತಾವು ಕಾರಣೀಭೂತರಾಗಬೇಕು ಎಂದು ಮುಖ್ಯಮಂತ್ರಿ ಬಿಎಸ್‌ವೈ ಅವರನ್ನು ಆಗ್ರಹಿಸಿದ್ದಾರೆ.