ಕೇಂದ್ರ ನೆರೆ ಪರಿಹಾರ ತಂಡದಿಂದ ಹಾನಿ ಪ್ರದೇಶಕ್ಕೆ ಭೇಟಿ-ಶಾಶ್ವತ ಪರಿಹಾರಕ್ಕೆ ರೈತರ ಮನವಿ
ಹಾನಿಯ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ
ಹಾವೇರಿ: ಕೇಂದ್ರ ನೆರೆ ಅಧ್ಯಯನ ತಂಡ ಭಾನುವಾರ ಹಾವೇರಿ ಜಿಲ್ಲೆಯ ಅತಿವೃಷ್ಟಿ ಹಾಗೂ ನೆರೆಯಿಂದ ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ ವಾಸ್ತವಾಂಶ ಕುರಿತಂತೆ ಪರಿಶೀಲನೆ ನಡೆಸಿತು.
ಭಾರತ ಸರ್ಕಾರದ ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಮಂತ್ರಾಲಯದ ಮುಖ್ಯ ಅಭಿಯಂತರರಾದ ಎಸ್.ವಿ.ಜಯಕುಮಾರ ಹಾಗೂ ಗ್ರಾಮೀಣ ಅಭಿವೃದ್ಧಿ ಮಂತ್ರಾಲಯದ ಅಪರ ಕಾರ್ಯದರ್ಶಿ ಕೈಲಾಶ್ ಸಂಖ್ಲಾ ಹಾಗೂ ರಾಜ್ಯ ಸರ್ಕಾರದ ಲೈಸನಿಂಗ್ ಅಧಿಕಾರಿ ಶ್ರೀನಿವಾಸ ರೆಡ್ಡಿ ಅವರನ್ನೊಳಗೊಂಡ ಅಧ್ಯಯನ ತಂಡ ಜಿಲ್ಲೆಯ ಎಂಟು ತಾಲೂಕುಗಳ ಆಯ್ದ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು.
ಬಂಕಾಪುರದ ಮುನವಳ್ಳಿ ದುರ್ಗಾದೇವಿ ದೇವಾಲಯದ ಸಮೀಪ ವರದಾ ನದಿಯ ಪ್ರವಾಹದಿಂದ ಹಾನಿಯಾಗಿರುವ ಮೆಕ್ಕೆಜೋಳ ತಾಕಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬಂಕಾಪುರ ಪಟ್ಟಣದ ಕೊಟ್ಟಿಗೇರಿಯ ಫಕ್ಕೀರಪ್ಪ ರಾಮಪ್ಪ ಮುನವಳ್ಳಿಯವರ ಮನೆ ಮಳೆಯಿಂದಾಗಿ ಹಾನಿಯಾಗಿರುವ ಕುರಿತಂತೆ ಪರಿಶೀಲನೆ ನಡೆಸಿದರು.
ಕೂಡಲ ಗ್ರಾಮದಲ್ಲಿ ವರದಾ ಪ್ರವಾಹದಿಂದ ಗದಿಗೆಪ್ಪ ಫಕ್ಕೀರಪ್ಪ ಬೊಮ್ಮಕ್ಕನವರ ಎಂಟು ಎಕರೆ ಕಬ್ಬು ಬೆಳೆ ಹಾನಿ, ನಾಗನೂರ ಗ್ರಾಮದ ಚನ್ನಬಸಯ್ಯ ಹಿರೇಮಠ ಅವರ ಸೋಯಾಬಿನ್ ಬೆಳೆಹಾನಿ, ವರದಾಹಳ್ಳಿ ಗ್ರಾಮದ ತರಕಾರಿ ತಾಕುಗಳ ಹಾನಿ, ಅಡಿಕೆತೋಟ, ಮನ್ನಂಗಿ ಗ್ರಾಮದ ಚಂದ್ರಗೌಡ ಗಾಳಿಗೌಡ್ರ ಅವರ ಮೆಕ್ಕೆಜೋಳ ಹಾನಿ.
ಹಾಗೆಯೇ ದೇವಗಿರಿಯಿಂದ ಸವಣೂರಿಗೆ ಹೋಗುವ ವರದಾ ನದಿಯ ಸೇತುವೆ ಬಳಿಯ ಜಿಲ್ಲಾ ಪಂಚಾಯಿತಿ ರಸ್ತೆ ಹಾನಿ, ಕುಣಿಮೆಳ್ಳಿಹಳ್ಳಿ, ಕುಡುಪಲಿ, ರಾಮತೀರ್ಥ, ಕೆರವಡಿ ಗ್ರಾಮದಲ್ಲಿ ರಸ್ತೆ, ಸೇತುವೆ ಹಾನಿಗಳ ಕುರಿತಂತೆ ಪರಿಶೀಲನೆ ನಡೆಸಿದರು. ಈ ಸ್ಥಳಗಳಲ್ಲಿ ರೈತರದಿಂದ ಹಾನಿಯ ಕುರಿತಂತೆ ಮಾಹಿತಿ ಪಡೆದುಕೊಂಡರು.
ರೈತರ ಬೇಡಿಕೆ: ಮುನವಳ್ಳಿ, ಕೂಡಲ, ನಾಗನೂರ ಹಾಗೂ ಮನ್ನಂಗಿ ಗ್ರಾಮದಲ್ಲಿ ಕೇಂದ್ರ ತಂಡಕ್ಕೆ ಮನವಿ ಸಲ್ಲಿಸಿದ ರೈತರು, ತ್ವರಿತವಾಗಿ ಪರಿಹಾರ ಬಿಡುಗಡೆಗೆ ಬೇಡಿಕೆ ಸಲ್ಲಿಸಿದರು. ಕಳೆದ ಮೂರು ವರ್ಷಗಳಿಂದ ಸತತವಾಗಿ ಅತಿವೃಷ್ಟಿಯಿಂದ ಬೆಳೆಹಾನಿಯಾಗುತ್ತಿದೆ. ರೈತರು ತೀವ್ರ ಸಂಕಷ್ಟದಲ್ಲಿರುವಾಗ ತಿಳಿಸಿದರು.
ಮುನವಳ್ಳಿ ಜಮೀನುಗಳಿಗೆ ಚಂದಾಪುರ ಸೇರಿದಂತೆ ಮೇಲಿನ 15 ಕೆರೆಗಳ ನೀರು ತುಂಬಿ ಹಳ್ಳದ ಮೂಲಕ ಹರಿದು ರೈತರ ಬೆಳೆಗೆ ನುಗ್ಗುತ್ತದೆ. ಇದು ಪ್ರತಿ ವರ್ಷ ಪುನರಾವರ್ತನೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಹಳ್ಳವನ್ನು ಅಗಲೀಕರಣಗೊಳಿಸಬೇಕು. ಆ ಮೂಲಕ ರೈತರು ನಷ್ಟ ಅನುಭವಿಸುವುದುನ್ನು ತಪ್ಪಿಸುವಂತೆ ಈ ಭಾಗದ ರೈತರು ಮನವಿ ಮಾಡಿದರು.
ಕೂಡಲ ಮತ್ತು ನಾಗನೂರ ಭಾಗದ ರೈತರು ಕೇಂದ್ರ ತಂಡಕ್ಕೆ ಮನವಿ ಮಾಡಿಕೊಂಡು ವರದಾ ನದಿಯಿಂದ ರೈತರ ಹೊಲಗಳಿಗೆ ನೀರು ನುಗ್ಗುವುದನ್ನು ತಪ್ಪಿಸಲು ನದಿಗೆ ತಡೆಗೋಡೆ ನಿರ್ಮಿಸುವಂತೆ ಮನವಿ ಮಾಡಿಕೊಂಡರು.
ಮನ್ನಂಗಿ ಗ್ರಾಮದ ರೈತರು ವರದಾ ನದಿಗೆ ದೇವಗಿರಿ ಸಮೀಪ ನಿರ್ಮಿಸಲಾದ ಸೇತುವೆಯ ಸಂಪರ್ಕ ರಸ್ತೆಯು ಪ್ರವಾಹದ ನೀರು ತಡೆಯುವ ಗೋಡೆಯಂತಾಗಿ ಸಾವಿರಾರು ಎಕರೆ ಜಮೀನಿಗೆ ನೀರು ನುಗ್ಗಿ ಪ್ರತಿ ವರ್ಷ ರೈತರು ಬೆಳೆ ನಷ್ಟ ಅನುಭವಿಸುತ್ತಿದಾರೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ವರದಾ ಸೇತುವೆ ಸಂಪರ್ಕಿಸುವ ಜಿಲ್ಲಾ ಪಂಚಾಯತ್ ನಿರ್ಮಾಣದ ತಡೆಗೋಡೆಯಂತಾಗಿರುವ ರಸ್ತೆಯ ಕೆಳಗೆ ನೀರು ಹರಿಯಲು ಬ್ಲಾಕ್‍ಗಳನ್ನು ನಿರ್ಮಿಸುವಂತೆ ಮನವಿ ಮಾಡಿಕೊಂಡರು.
ರೈತರ ಬೇಡಿಕೆಗಳನ್ನು ಕೇಂದ್ರ ತಂಡದ ಭಾರತ ಸರ್ಕಾರದ ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಮಂತ್ರಾಲಯದ ಮುಖ್ಯ ಅಭಿಯಂತರರಾದ ಎಸ್.ವಿ.ಜಯಕುಮಾರ, ಗ್ರಾಮೀಣ ಅಭಿವೃದ್ಧಿ ಮಂತ್ರಾಲಯದ ಅಪರ ಕಾರ್ಯದರ್ಶಿ ಕೈಲಾಶ್ ಸಂಖ್ಲಾ ಹಾಗೂ ರಾಜ್ಯ ಸರ್ಕಾರದ ಲೈಸನಿಂಗ್ ಅಧಿಕಾರಿ ಶ್ರೀನಿವಾಸ ರೆಡ್ಡಿ ಅವರು ರೈತರ ಕುಂದುಕೊರತೆಗಳನ್ನು ಸಮಚಿತ್ತದಿಂದ ಆಲಿಸಿ ಈ ಕುರಿತಂತೆ ಗಮನಸೆಳೆಯುವುದಾಗಿ ತಿಳಿಸಿದರು.