ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಎಟಿಎಂ ಹಣ ಕದ್ದು ಅತ್ತೆ ಮಗಳೊಂದಿಗೆ ಪರಾರಿಯಾಗಿದ್ದ ಎಟಿಎಂಗೆ ಹಣ ತುಂಬುವ ವಾಹನ ಚಾಲಕನನ್ನು ಬೆಂಗಳೂರಿನ ಸುಬ್ರಹ್ಮಣ್ಯ ನಗರ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಮೂಲದ ಯೋಗೇಶ್ ಬಂಧಿತ ಆರೋಪಿ. ಈತ ಫೆಬ್ರವರಿ 3ರಂದು ಎಟಿಎಂ ಹಣ ಕದ್ದು ಅತ್ತೆ ಮಗಳೊಂದಿಗೆ ಎಸ್ಕೇಪ್ ಆಗಿದ್ದ. ಸೆಕ್ಯೂರ್ ವ್ಯಾಲ್ಯೂ ಏಜೆನ್ಸಿಯಲ್ಲಿ ಡ್ರೈವರ್ ಆಗಿದ್ದ ಆರೋಪಿ ಎಟಿಎಂಗೆ ತುಂಬಿಸಬೇಕಿದ್ದ 64 ಲಕ್ಷ ಹಣದೊಂದಿಗೆ ಪರಾರಿಯಾಗಿ, ಬಳಿಕ ಸ್ನೇಹಿತರನ್ನು ಸಂಪರ್ಕಿಸಿದ್ದ. ಸ್ನೇಹಿತರು ನೆರವಿಗೆ ಬಾರದ ಹಿನ್ನೆಲೆಯಲ್ಲಿ ತನ್ನ ಮನೆಯಲ್ಲೇ ಉಳಿದುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈತನಿಗೆ ಹೆಂಡತಿ-ಮಕ್ಕಳಿದ್ದರೂ ಅತ್ತೆ ಮಗಳ ಜೊತೆ ಹಣದೊಂದಿಗೆ ಎಸ್ಕೇಪ್ ಆಗಿದ್ದ. ಮೈಸೂರಿನಲ್ಲಿ ಸ್ನೇಹಿತರ ಜೊತೆ ಸಂಪರ್ಕದಲ್ಲಿದ್ದಾಗ ಬಲೆಗೆ ಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದು, ಸದ್ಯ ಆತನ ಬಳಿ ಕೇವಲ 15 ಸಾವಿರ ರೂ. ಮಾತ್ರ ಇತ್ತು. ಹೀಗಾಗಿ 64 ಲಕ್ಷ ರೂ.ಗಳಲ್ಲಿ ಕೇವಲ 15 ಸಾವಿರ ರೂ.ಗಳು ಸಿಕ್ಕಿದ್ದು ಉಳಿದ ಹಣ ಏನಾಯಿತು ಎಂಬ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಎಟಿಎಂಗಳಿಗೆ ಹಣ ತುಂಬಿಸುವ ಗುತ್ತಿಗೆ ಪಡೆದಿರುವ ಸೆಕ್ಯೂರ್ ವ್ಯಾಲ್ಯೂ ಏಜೆನ್ಸಿ ಬೆಂಗಳೂರಿನ ನವರಂಗ್ ಬಳಿಯ ಎಟಿಎಂಗೆ ಹಣ ತುಂಬಿಸಲು ಸಿಬ್ಬಂದಿಯೊಂದಿಗೆ ವಾಹನ ಚಾಲಕ ಆರೋಪಿ ಯೋಗೇಶ್ ನನ್ನು ಕಳುಹಿಸಲಾಗಿತ್ತು.